Advertisement

ತಾಲೂಕು ಕೇಂದ್ರಗಳಲ್ಲಿ ತಾತ್ಕಾಲಿಕಪುನರ್ವಸತಿ ಕೇಂದ್ರ ಸ್ಥಾಪಿಸಿ: ಹಂದ್

12:26 PM Aug 30, 2018 | Team Udayavani |

ಬಳ್ಳಾರಿ: ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತಾಲೂಕು ಕೇಂದ್ರಗಳಲ್ಲಿ ತಾತ್ಕಾಲಿಕ ಪುನರ್‌ವಸತಿ ಕೇಂದ್ರಗಳನ್ನು ತೆರೆಯುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಅಗತ್ಯಬಿದ್ದರೆ ಜಿಲ್ಲಾ ಖನಿಜ ನಿಧಿಯನ್ನು ಬಳಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌
ನ್ಯಾಯಾಧೀಶರಾದ ಎಸ್‌.ಬಿ.ಹಂದ್ರಾಳ್‌ ಜಿಲ್ಲಾಡಳಿತಕ್ಕೆ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2018-19ನೇ ಸಾಲಿನ 2ನೇ ತ್ತೈಮಾಸಿಕ ಜಿಲ್ಲಾ ಮಟ್ಟದ ಮಾನವ ಅಕ್ರಮ ಸಾಗಾಣಿಕೆ ತಡೆ ಕುರಿತ ಸಮನ್ವಯ ಸಮಿತಿ ಮತ್ತು ಪರಿಶೀಲನಾ ಸಮಿತಿ ಸಭೆಯಲ್ಲಿ ಅವರು
ಮಾತನಾಡಿದರು. 

ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ ನೀಡುವುದು ಹಾಗೂ ಅಗತ್ಯವಿದ್ದರೆ ಪೊಲೀಸರಿಂದ ರಕ್ಷಣೆ, ವೈದ್ಯಕೀಯ ಚಿಕಿತ್ಸೆ ಸಮರ್ಪಕವಾಗಿ ಒದಗಿಸಬೇಕು. ನೊಂದ ಮಹಿಳೆಯರಿಗೆ ಉಚಿತ ಕಾನೂನು ನೆರವು ಕಾನೂನು ಸೇವಾ ಪ್ರಾಧಿಕಾರ ಒದಗಿಸಲಿದೆ ಎಂದು ತಿಳಿಸಿದರು. 

2017-18ನೇ ಸಾಲಿನಲ್ಲಿ ಮಹಿಳೆಯರ ಸಂರಕ್ಷಣೆ ಕಾಯ್ದೆ ಅಡಿ 194 ಪ್ರಕರಣಗಳು ದಾಖಲಾಗಿದ್ದು, ಸಮಾಲೋಚನೆಯಿಂದ 180 ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ. 14 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. 2018-19ನೇ ಸಾಲಿನಡಿ 70 ಪ್ರಕರಣಗಳು ದಾಖಲಾಗಿದ್ದು, 61 ಪ್ರಕರಣಗಳನ್ನು ಇತ್ಯರ್ಥ, ನ್ಯಾಯಾಲಯದಲ್ಲಿ 6 ಮತ್ತು 3 ಪ್ರಕರಣಗಳು ಸಂರಕ್ಷಣಾಧಿಕಾರಿಗಳಲ್ಲಿ ಬಾಕಿ ಉಳಿದಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಉಷಾ ಸಭೆಗೆ ಮಾಹಿತಿ ನೀಡಿದರು.

ತಾಲೂಕು ಮಟ್ಟದಲ್ಲಿ ಗೆಳತಿ ವಿಶೇಷ ಚಿಕಿತ್ಸಾ ಘಟಕ: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸಮಗ್ರ ಸೌಲಭ್ಯ ಒದಗಿಸುವ ಮಹಿಳಾ ವಿಶೇಷ ಚಿಕಿತ್ಸಾ ಘಟಕ ಗೆಳತಿ ವಿಶೇಷ ಚಿಕಿತ್ಸಾ ಘಟಕ ಈಗಾಗಲೇ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಈ ಘಟಕ ಆರಂಭಿಸುವ
ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

Advertisement

ತಾಲೂಕು ಮಟ್ಟದಲ್ಲಿ ಗೆಳತಿ ಚಿಕಿತ್ಸಾ ವಿಶೇಷ ಘಟಕಕ್ಕೆ ಅಗತ್ಯ ಸೌಲಭ್ಯಗಳು ಕಲ್ಪಿಸುವ ನಿಟ್ಟಿನಲ್ಲಿ ಕೆಲ ಸಮಸ್ಯೆಗಳು ಇರುವುದು ನಮ್ಮ ಗಮನಕ್ಕೆ ಬಂದಿದ್ದು, ನಿವಾರಿಸಿಕೊಂಡು ಘಟಕ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದು ನ್ಯಾ| ಹಂದ್ರಾಳ್‌ ಸೂಚಿಸಿದರು. 

“ಗೆಳತಿ’ ಸಮಸ್ಯೆಗಳ ಪಟ್ಟಿ ನೀಡಿ: ಗೆಳತಿ ಚಿಕಿತ್ಸಾ ಘಟಕಕ್ಕೆ ಸಂಬಂಧಿಸಿದ ಸಮಸ್ಯೆಗಳ ಪಟ್ಟಿ ಮಾಡಿ ನಮಗೆ ನೀಡಿದರೆ ಅವುಗಳನ್ನು ಬಗೆಹರಿಸಲು ಯತ್ನಿಸಲಾಗುವುದು. ಈ ಚಿಕಿತ್ಸಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಒಂದು
ದಿನದ ಕಾರ್ಯಾಗಾರ ಏರ್ಪಡಿಸುವಂತೆ ಸೂಚಿಸಿದರು. ಸಾಮೂಹಿಕ ವಿವಾಹಗಳು ನಡೆಯುವ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ನಿಯಮಗಳನ್ನು ಸಮರ್ಪಕವಾಗಿ
ಪಾಲಿಸುವಂತೆ ನ್ಯಾ| ಹಂದ್ರಾಳ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು. 

ಸಭೆಯಲ್ಲಿ ಮಹಿಳೆಯರು, ಮಕ್ಕಳ ಸಾಗಾಣಿಕೆ, ಗ್ರಾಪಂ ಕಾವಲು ಸಮಿತಿ ಸಭೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್‌, ಡಿವೈಎಸ್ಪಿ ಸುರೇಶ್‌ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ ನೀಡುವುದು ಹಾಗೂ ಅಗತ್ಯವಿದ್ದರೆ ಪೊಲೀಸರಿಂದ ರಕ್ಷಣೆ, ವೈದ್ಯಕೀಯ ಚಿಕಿತ್ಸೆ ಸಮರ್ಪಕವಾಗಿ ಒದಗಿಸಬೇಕು. ನೊಂದ ಮಹಿಳೆಯರಿಗೆ ಉಚಿತ ಕಾನೂನು ನೆರವು ಕಾನೂನು ಸೇವಾ ಪ್ರಾಧಿಕಾರ ಒದಗಿಸಲಿದೆ.
ಎಸ್‌.ಬಿ.ಹಂದ್ರಾಳ್‌, ನ್ಯಾಯಾಧೀಶರು

Advertisement

Udayavani is now on Telegram. Click here to join our channel and stay updated with the latest news.

Next