Advertisement

ಕಡತದಲ್ಲೇ ಬಾಕಿಯಾದ ಮಹತ್ವದ ಯೋಜನೆ

01:08 AM Jun 22, 2020 | Sriram |

ಮಂಗಳೂರು: ಗಲಭೆ,ಕೋಮು ಘರ್ಷಣೆ ಸಹಿತ ತುರ್ತು ಸಂದರ್ಭಗಳ ನಿರ್ವಹಣೆಗೆ ಸನ್ನದ್ಧ ವಾಗಿರುವ “ಕ್ಷಿಪ್ರ ಕಾರ್ಯಪಡೆ’ (ರ‍್ಯಾಪಿಡ್ ‌ಆ್ಯಕ್ಷನ್‌ ಫೋರ್ಸ್‌) ತುಕಡಿ
ಯನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಬೇಡಿಕೆ ಎರಡು ವರ್ಷಗಳಿಂದ ನನೆಗುದಿಯಲ್ಲಿದೆ.

Advertisement

ಸೂಕ್ಷ್ಮ ಪ್ರದೇಶವಾಗಿ ರುವ ಕರಾವಳಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಕೂಡಲೇಸ್ಥಳಕ್ಕೆ ಧಾವಿಸುವಂತೆ ಮಂಗಳೂರಿನಲ್ಲಿ ಆರ್‌ಎಎಫ್‌ ತುಕಡಿ ಸ್ಥಾಪಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರಕಾರವು ಮಂಗಳೂರು ಸಹಿತ ದೇಶದ 5 ಕಡೆಹೊಸ ತುಕಡಿಗಳನ್ನು ಆರಂಭಿಸಲು 2018ರಲ್ಲಿ ಅನುಮೋದನೆ ನೀಡಿತ್ತು.

ಮಂಗಳೂರಿನಲ್ಲಿ ಎಲ್ಲಿ ಸ್ಥಾಪಿಸುವುದು ಎಂಬ ಬಗ್ಗೆ ಕೇಂದ್ರ ಯಾವುದೇ ಸೂಚನೆ ನೀಡಿಲ್ಲ.ಆದರೆ ಸುರೇಶ್‌ ಕುಮಾರ್‌ ಮಂಗಳೂರು ಪೊಲೀಸ್‌ ಆಯುಕ್ತರಾಗಿದ್ದ ವೇಳೆ ಬಜಪೆ ಅಥವಾ ಮರವೂರಿನಲ್ಲಿ ಸ್ಥಾಪಿಸುವ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಾಗಿ 2 ವರ್ಷ ಗಳು ಸಂದರೂ ಯೋಜನೆ ಅನುಷ್ಠಾನ ವಾಗಿಲ್ಲ.

“ಎನ್‌ಐಎ’ ಕಡತದಲ್ಲೇ ಬಾಕಿ
ರಾಜ್ಯ ಕರಾವಳಿ ಪ್ರದೇಶದಲ್ಲಿ ಭಯೋತ್ಪಾದನ ಕೃತ್ಯಗಳಿಗೆ ಕಡಿವಾಣ ಹಾಕುವ ಸಲುವಾಗಿ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ ಕಚೇರಿ (ಎನ್‌ಐಎ) ತೆರೆಯಬೇಕು ಎಂಬ ಬಹುದಿನಗಳ ಬೇಡಿಕೆ ಕೂಡ ಈಡೇರಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರಗಳಿದ್ದು, ಕರಾವಳಿ ಭಾಗದ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಮೂಲಕ ಕೇಂದ್ರಕ್ಕೆ ಒತ್ತಡ ತಂದರೆ ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಆರಂಭ ಗೊಳ್ಳುವುದು ಕಷ್ಟಸಾಧ್ಯವಲ್ಲ. ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದರಾದ ನಳಿನ್‌ ಕುಮಾರ್‌ ಕಟೀಲು ಮತ್ತು ಶೋಭಾ ಕರಂದ್ಲಾಜೆ ಅವರನ್ನೊಳಗೊಂಡ ನಿಯೋಗ ಅಂದಿನ ಗೃಹಸಚಿವ ರಾಜನಾಥ್‌ ಸಿಂಗ್‌ ಅವರು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವ ಇನ್ನೂ ಕಡತದಲ್ಲೇ ಇದೆ.

ಏನಿದು ಆರ್‌ಎಎಫ್‌?
ರ‍್ಯಾಪಿಡ್ ಆ್ಯಕ್ಷನ್‌ ಫೋರ್ಸ್‌ ಅಂದರೆಕ್ಷಿಪ್ರ ಕಾರ್ಯ ಪಡೆ. ಗಲಭೆ, ಕೋಮು ಘರ್ಷಣೆ ಸೇರಿದಂತೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ವಿಶೇಷ ತರಬೇತಿ
ಯನ್ನು ಹೊಂದಿದ ಅರೆಸೇನಾ ಘಟಕ ಇದಾಗಿದೆ. ಕೇಂದ್ರ ಕಚೇರಿ ಹೊಸದಿಲ್ಲಿ ಯಲ್ಲಿದೆ. ಸದ್ಯ ದಿಲ್ಲಿ, ಮುಂಬಯಿ, ಅಹ್ಮದಾಬಾದ್‌, ಭೋಪಾಲ್‌, ಅಲಿಘರ್‌, ಮೀರತ್‌, ಹೈದರಾಬಾದ್‌, ಜಮ್ಶೆಡ್‌ಪುರ, ಕೊಯಮತ್ತೂರು, ಅಲಹಾಬಾದ್‌ನಲ್ಲಿ ತುಕಡಿಗಳಿವೆ.

Advertisement

ಮಂಗಳೂರಿನಲ್ಲಿ ರ‍್ಯಾಪಿಡ್ ಆ್ಯಕ್ಷನ್‌ ಫೋರ್ಸ್‌ ತುಕಡಿ ಸ್ಥಾಪಿಸಬೇಕು ಎಂಬ ಬೇಡಿಕೆ ಕೇಂದ್ರದ ಮುಂದಿದೆ. ಸದ್ಯ ಈ ಪ್ರಸ್ತಾವ ಕಾರ್ಯಗತಿಯಲ್ಲಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ತುಸು ವಿಳಂಬವಾಗಿದೆ. ಈ ವಿಚಾರವನ್ನು ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಗಮನಕ್ಕೆ ತರುತ್ತೇನೆ.
– ಡಿ.ವಿ. ಸದಾನಂದ ಗೌಡ,
ಕೇಂದ್ರ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next