ಬೀದರ: ಗಡಿನಾಡು ಬೀದರನಲ್ಲಿ ಶಿಕ್ಷಣ ವ್ಯವಸ್ಥೆ ಬಲಪಡಿಸುವ ದಿಸೆಯಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಶೈಕ್ಷಣಿಕವಾಗಿ ಪ್ರಗತಿಯತ್ತ ಹೆಜ್ಜೆ ಹಾಕುತ್ತಿರುವ ಜಿಲ್ಲೆ ಮಟ್ಟಿಗೆ ಮಹತ್ವದ ಕ್ರಮ ಎನಿಸಿದೆ.
ಈಗಾಗಲೇ ರಾಜ್ಯದ ಏಕೈಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹೊಂದಿರುವ ಬೀದರನಲ್ಲಿ ವಿವಿಗಳ ಸಂಖ್ಯೆ ಎರಡಕ್ಕೆ ಏರಲಿದೆ. ಜಿಲ್ಲೆಗೊಂದು ವಿಶ್ವ ವಿದ್ಯಾಲಯ ಸ್ಥಾಪಿಸಿ ಆ ಮೂಲಕ ಶೈಕ್ಷಣಿಕ ಅಸಮತೋಲ ನಿವಾರಣೆ ಮಾಡುವುದರ ಜತೆಗೆ ಯುವ ಜನಾಂಗಕ್ಕೆ ಮನೆ ಬಾಗಿಲಲ್ಲೇ ಗುಣಮಟ್ಟದ ಶಿಕ್ಷಣ ನೀಡುವ ಸದಾಶಯವನ್ನು ಸರ್ಕಾರ ಹೊಂದಿದೆ. ಅದರಂತೆ ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಬೀದರ, ಚಾಮರಾಜನಗರ, ಹಾವೇರಿ, ಹಾಸನ, ಕೊಪ್ಪಳ, ಬಾಗಲಕೋಟೆ, ಮತ್ತು ಹಾವೇರಿ ಜಿಲ್ಲೆಯಲ್ಲಿ ನೂತನ ವಿಶ್ವವಿದ್ಯಾಲಯಗಳ ಸ್ಥಾಪಿಸುವ ಕುರಿತು ಘೋಷಿಸಿತ್ತು. ಅದರಂತೆ ವಿವಿಗಳ ಪ್ರಾರಂಭಕ್ಕೆ ಕರ್ನಾಟಕ ವಿಶ್ವ ವಿದ್ಯಾಲಯಗಳ ಕಾಯ್ದೆ-2000ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಅಸ್ತು ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜರುಗಿದ ಸಂಪುಟ ಸಭೆಯಲ್ಲಿ ಕ್ರಾಂತಿಕಾರಿ ಕ್ರಮಕ್ಕೆ ಒಪ್ಪಿಗೆ ನೀಡಲಾಗಿದೆ. ಹೊಸ ವಿಶ್ವ ವಿದ್ಯಾಲಗಳಿಗೆ ತಲಾ ಎರಡು ಕೋಟಿ ರೂ. ಗಳಂತೆ ಒಟ್ಟು 14 ಕೋಟಿ ರೂ. ಒದಗಿಸಲಾಗಿದ್ದು, ಇವುಗಳು ಕಡಿಮೆ ಸ್ಥಳ, ಕಡಿಮೆ ಸಿಬ್ಬಂದಿ ಮತ್ತು ವೆಚ್ಚದೊಂದಿಗೆ ಕಾರ್ಯ ಚಟುವಟಿಕೆ ನಡೆಸಲಿವೆ. ಏಳು ಜಿಲ್ಲಾ ಕೇಂದ್ರದಲ್ಲಿನ ಸ್ನಾತಕೋತ್ತರ ಕೇಂದ್ರಗಳಲ್ಲೇ ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬೀದರ ಸಧ್ಯ 120 ಕಿ.ಮೀ ದೂರದಲ್ಲಿರುವ ನೆರೆ ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯವನ್ನು ಅವಲಂಬಿಸಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಾಕಷ್ಟು ತೊಂದರೆಯಾಗುತ್ತಿದೆ.
ಕರ್ನಾಟಕದ ತುತ್ತತುದಿಯಲ್ಲಿರುವ ಬೀದರ ಜಿಲ್ಲೆಯಲ್ಲಿ ಒಳ್ಳೆಯ ಶೈಕ್ಷಣಿಕ ಪರಿಸರವಿದೆ. ರಾಜ್ಯ- ಹೊರ ರಾಜ್ಯದ ಮಕ್ಕಳು ಶಿಕ್ಷಣ ಪಡೆಯಲು ಇತ್ತ ಮುಖ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ತಮ್ಮ ಜಿಲ್ಲಾ ಕೇಂದ್ರದಲ್ಲಿಯೇ ಗುಣಮಟ್ಟದ ಶಿಕ್ಷಣ ಒದಗಿಸಲು ಹೊಸ ವಿವಿ ಪೂರಕವಾಗಲಿದೆ. ಭಾಲ್ಕಿ ತಾಲೂಕಿನ ಹಾಲಹಳ್ಳಿ ಸಮೀಪದ ಸ್ನಾತಕೋತ್ತರ ಕೇಂದ್ರದಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆಯಾ ಗಲಿದ್ದು, ಇದರ ವ್ಯಾಪ್ತಿಗೆ ಜಿಲ್ಲೆಯ ಸುಮಾರು 140 ಪ್ರಥಮ ದರ್ಜೆ ಕಾಲೇಜುಗಳು ಬರಲಿವೆ.
ಬೀದರನ ಹೊರವಲಯದಲ್ಲಿ ಈಗಾಗಲೇ ಕರ್ನಾಟಕ ಪಶು ವೈದ್ಯಕೀಯ, ಮೀನುಗಾರಿಕೆ ವಿಶ್ವ ವಿದ್ಯಾಲಯ ಕೆಲಸ ನಿರ್ವಹಿಸುತ್ತಿದ್ದು, ಇದೀಗ ಹೊಸ ವಿವಿ ಸ್ಥಾಪನೆಯಿಂದಾಗಿ ಸರ್ಕಾರ ಜಿಲ್ಲೆಯಲ್ಲಿ ಶೈಕ್ಷಣಿಕ ಉನ್ನತಿಗೆ ಒತ್ತು ಕೊಟ್ಟಂತಾಗಿದ್ದು, ಮತ್ತೂಂದೆಡೆ ಎರಡು ವಿಶ್ವವಿದ್ಯಾಲಯಗಳನ್ನು ಹೊಂದಿರುವ ಜಿಲ್ಲೆ ಎಂಬ ಹಿರಿಮೆ ಸಹ ಬೀದರಗೆ ಬರಲಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಿಸುವ ದಿಸೆಯಲ್ಲಿ ಬಜೆಟ್‌ನಲ್ಲಿ ಘೋಷಿಸಿದಂತೆ ಬೀದರ ಜಿಲ್ಲೆಯಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಸಂತಸ ತಂದಿದೆ. ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಹಿಂದೆ ಉನ್ನತ ಶಿಕ್ಷಣ ಸಚಿವರಿಗೆ ಬೇಡಿಕೆಗಳ ಮನವಿ ಸಲ್ಲಿಸಿದೆ. ಇಷ್ಟು ದಿನಗಳವರೆಗೆ ಗುಲ್ಬರ್ಗಾ ವಿವಿಯನ್ನು ಅವಲಂಬಿಸಿದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ಈಗ ಜಿಲ್ಲಾ ಕೇಂದ್ರದಲ್ಲಿಯೇ ವಿವಿ ಸ್ಥಾಪನೆ ಸರ್ಕಾರದ ಕ್ರಾಂತಿಕಾರಕ ಕ್ರಮವಾಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸಾಧ್ಯವಾಗಲಿದೆ.
–ಪ್ರಭು ಚವ್ಹಾಣ, ಪಶು ಸಂಗೋಪನೆ ಸಚಿವ
-ಶಶಿಕಾಂತ ಬಂಬುಳಗ