Advertisement

ಧಾರವಾಡದಲ್ಲಿ ಎನ್‌ಡಿಎ ಮಾದರಿ ತರಬೇತಿ ಕೇಂದ್ರ ಸ್ಥಾಪನೆ: ಬೊಮ್ಮಾಯಿ

05:09 PM Sep 05, 2022 | Team Udayavani |

ಹುಬ್ಬಳ್ಳಿ: ತಂತ್ರಜ್ಞಾನ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿವೆ. ಇಂತಹ ಅಪರಾಧಗಳನ್ನು ತಕ್ಷಣ ನಿಯಂತ್ರಿಸಲು ಪೂರಕ ಕಾನೂನು ತರಲಾಗುತ್ತಿದೆ. ಸೈನಿಕರಿಗೆ ನೀಡಲಾಗುವಂತಹ ಎನ್‌ಡಿಎ ಮಾದರಿ ತರಬೇತಿ ಮಧ್ಯಮ ಕ್ರಮಾಂಕದ ಪೊಲೀಸ್‌ ಅಧಿಕಾರಿಗಳಿಗೂ ನೀಡುವ ನಿಟ್ಟಿನಲ್ಲಿ ಧಾರವಾಡದ ಕೆಎಸ್‌ಆರ್‌ಪಿಯ 50 ಎಕರೆ ಜಾಗದಲ್ಲಿ ಪುಣೆಯ ಖಡಕ್‌ ವಾಸ್ಲಾದ ಎನ್‌ಡಿಎ (ರಾಷ್ಟ್ರೀಯ ರಕ್ಷಣಾ ಅಕಾಡೆಮಿ) ಮಾದರಿಯ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಇಲ್ಲಿಯ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣ ಬಳಿ ಕಸಬಾಪೇಟೆ, ದಕ್ಷಿಣ ಸಂಚಾರ ಪೊಲೀಸ್‌ ಠಾಣೆ ಉದ್ಘಾಟನೆ ಹಾಗೂ ಗೋಕುಲ ರಸ್ತೆ, ವಿದ್ಯಾನಗರ ಮತ್ತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಗಳ ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಪರಾಧಕ್ಕಿಂತ ಕಾನೂನು ಮೇಲುಗೈ ಸಾಧಿಸಬೇಕು. ತಂತ್ರಜ್ಞಾನ ಬೆಳೆದಂತೆದಲ್ಲ ಆಧುನಿಕ ಅಪರಾಧಗಳು ಹೆಚ್ಚುತ್ತಿವೆ. ಇದನ್ನು ತಡೆಗಟ್ಟಲು ಹಾಗೂ ಇಂತಹ ಅಪರಾಧಗಳನ್ನು ಹದ್ದುಬಸ್ತಿಗೆ ತರಲು ಸಾಕ್ಷಿ ಕಾಯ್ದೆ ಸೇರಿದಂತೆ ಸಿಆರ್‌ಪಿಸಿ, ಐಪಿಸಿಯಲ್ಲಿ ಬಹಳಷ್ಟು ಬದಲಾವಣೆಯಾಗುವ ಅವಶ್ಯತೆ ಇದೆ. ಅಪರಾಧಗಳು ಆಗುತ್ತಿದಂತೆ ಅವನ್ನು ಸದೆಬಡೆಯುವ ಕಾರ್ಯ ಪೊಲೀಸರು ಮಾಡಬೇಕು. ಜತೆಗೆ ಅವರು ತಾಂತ್ರಿಕವಾಗಿ ಬಲಿಷ್ಠರಾಗಬೇಕು. ತಂತ್ರಜ್ಞಾನ, ವಿಜ್ಞಾನ ಆಧರಿಸಿ ಸೈಬರ್‌ ಅಪರಾಧಗಳ ತ್ವರಿತ ಪತ್ತೆ ಮಾಡುವ ಕೌಶಲವನ್ನು ಪೊಲೀಸರು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸುಧಾರಣೆ ತರಲಾಗುತ್ತಿದೆ ಎಂದರು. 2025ರೊಳಗೆ 11 ಸಾವಿರ ಪೊಲೀಸ್‌ ವಸತಿ ಗೃಹಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ 2 ಸಾವಿರ ವಸತಿ ಗೃಹಗಳು ತಲೆ ಎತ್ತಲಿವೆ. ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಒಂದೇ ವರ್ಷದ ಅವಧಿಯಲ್ಲಿ 117 ಪೊಲೀಸ್‌ ಠಾಣೆಗಳನ್ನು ನಿರ್ಮಿಸಲಾಗಿದೆ. 8101 ಶಾಲೆಗಳ ಕಟ್ಟಡಗಳನ್ನು ಮುಂದಿನ ಐದು ವರ್ಷಗಳ ಅವಧಿಯಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ. ತಲಾ 7 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ 81 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ. ಬಿಯಾಂಡ್‌ ಬೆಂಗಳೂರು ಕಾರ್ಯಕ್ರಮದಡಿ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿ ಎರಡನೇ ಹಂತದ ಒಟ್ಟು ಆರು ನಗರಗಳಿಗೆ ಹೊಂದಿಕೊಂಡು ವಿಸ್ತೃತ ಹೊಸ ನಗರಗಳನ್ನು ನಿರ್ಮಿಸಲಾಗುವುದು ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಹಾಲಪ್ಪ ಆಚಾರ, ಮಾಜಿ ಸಿಎಂ ಜಗದೀಶ ಶೆಟ್ಟರ, ಶಾಸಕರಾದ ಅರವಿಂದ ಬೆಲ್ಲದ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ, ಎಸ್‌.ವಿ. ಸಂಕನೂರ ಇದ್ದರು.

ಶೀಘ್ರ 900 ಪಿಎಸ್‌ಐಗಳ ನೇಮಕ: ಆರಗ ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಪೊಲೀಸ್‌ ಇಲಾಖೆಯಲ್ಲಿ ಶೇ.35ರಷ್ಟಿದ್ದ ಖಾಲಿ ಹುದ್ದೆಗಳ ಪ್ರಮಾಣವನ್ನು ಶೇ.12ಕ್ಕೆ ಇಳಿಕೆ ಮಾಡಲಾಗಿದೆ. ಶೀಘ್ರದಲ್ಲಿಯೇ 900 ಪಿಎಸ್‌ಐಗಳ ನೇಮಕಾತಿ ನಡೆಯಲಿದೆ. ನೇಮಕಾತಿಯಲ್ಲಿ ಶೇ.20ರಷ್ಟು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಪೊಲೀಸ್‌ ಇಲಾಖೆಗೆ ಈ ವರ್ಷ ಅತ್ಯಂತ ಸವಾಲಿನದಾಗಿತ್ತು. ಹುಬ್ಬಳ್ಳಿ ಗಲಭೆ, ಹಿಜಾಬ್‌ ಸೇರಿದಂತೆ ಇನ್ನಿತರೆ ಘಟನೆಗಳನ್ನು ಪೊಲೀಸ್‌ ಇಲಾಖೆ ಅಧಿಕಾರಿಗಳ ತಂಡ ಅತ್ಯಂತ ಸಮರ್ಥವಾಗಿ ಹಾಗೂ ಕ್ಷಿಪ್ರವಾಗಿ ತಹಬದಿಗೆ ತರುವ ಮೂಲಕ ಅತ್ಯುತ್ತಮ ಕಾರ್ಯ ಮಾಡಿದ್ದಾರೆ. ಪರದೇಶಿ ನುಸುಳುಕೋರರನ್ನು ಪತ್ತೆ ಮಾಡಲು ಹಾಗೂ ದೇಶದ ಏಕತೆ, ಸಮಗ್ರತೆಗೆ ಧಕ್ಕೆ ತರುವವರ ಮೇಲೆ ತೀವ್ರ ನಿಗಾವಹಿಸಲು ಪೊಲೀಸ್‌ ಇಲಾಖೆಗೆ ಸೂಚಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next