ಕೋಲಾರ: ತೀವ್ರವಾದ ಮಾನಸಿಕ ಕಾಯಿಲೆಗಳಿಂದ ಗುಣಹೊಂದಿದ ರೋಗಿಗಳ ಪುನರ್ವಸತಿಗಾಗಿ ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.
ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಕುರಿತ ಮೇಲ್ವಿಚಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದ ಅವರು, ಸಮುದಾಯ ಮಾನಸಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಜಿಲ್ಲಾಸ್ಪತ್ರೆಯಲ್ಲಿ ಅಥವಾ ಸೂಕ್ತ ಜಾಗದಲ್ಲಿ ಕಟ್ಟಡವನ್ನು ಗುರುತಿಸುವಂತೆ ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ನಾರಾಯಣಸ್ವಾಮಿ ಅವರಿಗೆ ಸೂಚಿಸಿದರು.
40 ರೋಗಿಗಳ ಆರೈಕೆ: ಆರೋಗ್ಯ ಕೇಂದ್ರವನ್ನು ಸೂಕ್ತ ಸರ್ಕಾರೇತರ ಸಂಸ್ಥೆಗಳ ಮೂಲಕ ನಿರ್ವಹಿಸಲಾಗುವುದು. ಇವು ಹಗಲು ಆರೈಕೆ ಕೇಂದ್ರಗಳಾಗಿರುತ್ತವೆ. ಸಂಸ್ಥೆಯ ವತಿಯಿಂದ ಒಬ್ಬರು ಮನೋ ಸಾಮಾಜಿಕ ಕಾರ್ಯಕರ್ತರು, ವೃತ್ತಿ ತರಬೇತಿದಾರರು, ಸ್ಟಾಫ್ನರ್ಸ್, ಆಯಾ ವಾರ್ಡ್‌ಬಾಯ್, ಕಾವಲುಗಾರ, ಅಡುಗೆಯವರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಮಾನಸಿಕ ಆರೋಗ್ಯ ಕೇಂದ್ರದಲ್ಲಿ 40 ರೋಗಿಗಳನ್ನು ಆರೈಕೆ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದರು.
ತಾಲೂಕಿಗೆ ಭೇಟಿ ನೀಡಿ ಚಿಕಿತ್ಸೆ: ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ನಾರಾಯಣಸ್ವಾಮಿ ಮಾತನಾಡಿ, ಕೋಲಾರದಲ್ಲಿ 2018-19 ರಲ್ಲಿ 579 ಜನ ತೀವ್ರ ಮಾನಸಿಕ ರೋಗಿಗಳಿಗೆ ಹಾಗೂ 1126 ಸಾಮಾನ್ಯ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಜಿಲ್ಲಾ ಮಾನಸಿಕ ರೋಗಿಗಳ ನಿವಾರಣಾ ತಂಡವು ಪ್ರತಿ ದಿನ ಒಂದೊಂದು ತಾಲೂಕುಗಳಿಗೆ ಭೇಟಿ ನೀಡಿ ಮಾನಸಿಕ ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಅಂಗವಿಕಲ ಅಧಿಕಾರಿ ವೆಂಕಟರಾಮ್ ಮಾತನಾಡಿ, ಅಂಗವಿಕಲರ ಗುರುತಿನ ಚೀಟಿಗಳನ್ನು ವಿತರಿಸಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿಗಳು ಜಿಲ್ಲಾ ಶಸ್ತ್ರಚಿಕಿತ್ಸಕರ ಲಾಗಿನ್‌ಗೆ ಬಂದು ನಂತರ ಸ್ಪೆಷಲಿಸ್ಟ್ ಲಾಗಿನ್‌ಗೆ ಹೋಗಿ ಅಲ್ಲಿ ಪರಿಶೀಲಿಸಿ ನಂತರ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಬರುತ್ತದೆ. ನಂತರ ಚೆನ್ನೈ ಕೇಂದ್ರದಲ್ಲಿ ಪರಿಶೀಲಿಸಿ ಸ್ಮಾರ್ಟ್ ಕಾರ್ಡ್‌ಗಳು ಮುದ್ರಿತಗೊಂಡು ಫಲಾನುಭವಿಗಳಿಗೆ ವಿತರಣೆಯಾಗುತ್ತವೆ ಎಂದು ಹೇಳಿದರು.
1021 ಅರ್ಜಿ ಸಲ್ಲಿಕೆ: ಜಿಲ್ಲೆಯಲ್ಲಿ 44,403 ಅಂಗವಿಕಲರಿದ್ದು, ಇವರೆಲ್ಲರೂ ಹಳೆಯ ಗುರುತಿನ ಚೀಟಿ ಹೊಂದಿದ್ದಾರೆ. ಆದ್ದರಿಂದ ಇವರು ಹಳೆಯ ಕಾರ್ಡ್‌ಅನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ ಆನ್‌ಲೈನ್ ಅರ್ಜಿ ಸಲ್ಲಿಸಿ ಹೊಸ ಸ್ಮಾರ್ಟ್ ಕಾರ್ಡ್ ಪಡೆಯಬೇಕು. ಈಗಾಗಲೇ 1021 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್, ಮಾನಸಿಕ ಆರೋಗ್ಯಾಧಿಕಾರಿ ಡಾ.ಪಾವನಾ, ಸಾಮಾಜಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸಿಂಧು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.