Advertisement

ಆರೂರು ಬಳಿ ಮೆಡಿಕಲ್‌ ಕಾಲೇಜು ಸ್ಥಾಪನೆ

09:10 PM Nov 06, 2019 | Lakshmi GovindaRaju |

ಚಿಕ್ಕಬಳ್ಳಾಪುರ: ವೈದ್ಯಕೀಯ ಕಾಲೇಜನ್ನು ನಗರದ ಹೊರ ವಲಯದ ಅಣಕನೂರು ಸಮೀಪವೇ ಸ್ಥಾಪನೆಗೆ ಪ್ರಯತ್ನಿಸಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವ ಸಂಪುಟದ ಅನುಮೋದನೆ ಸಹ ಪಡೆದಿದ್ದೆ. ಆದರೆ ಕೆಲವರು ರೈತರ ಹೆಸರಿನಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ ಕಾರಣ ಅಲ್ಲಿ ಸ್ಥಾಪನೆ ಆಗಲಿಲ್ಲ. ನಗರದ ಸುತ್ತಮುತ್ತ ಸೂಕ್ತ ಸ್ಥಳವಾಕಾಶ ದೊರೆತ ಕಾರಣ ಆರೂರು ಸಮೀಪ ಮೆಡಿಕಲ್‌ ಕಾಲೇಜು ಸ್ಥಾಪಿಸಲಾಗುತ್ತಿದೆ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ತಿಳಿಸಿದರು.

Advertisement

ನಗರದ ಶ್ರೀ ಸಾಯಿಕೃಷ್ಣ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ತಲಾ 10 ಲಕ್ಷ ರೂ.ವೆಚ್ಚದಲ್ಲಿ ಕಳವಾರ, ದಿನ್ನೆಹೊಸಹಳ್ಳಿ ಹಾಗೂ ಹನುಮಂತಪುರ ಗ್ರಾಮಗಳಲ್ಲಿ ನಿರ್ಮಿಸಿರುವ ಅಮೃತ ಗಂಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದ ಬಳಿಕ ಸಿದ್ದೇಶ್ವರ ಸಮುದಾಯ ಭವನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಗರ ಸಮೀಪದ ಅಣಕನೂರು ಬಳಿ 20 ಎಕರೆ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುವ ಕನಸು ಹೊಂದಿದ್ದೆ. ಆದರೆ ಕೆಲ ಡೋಂಗಿ ನೀರಾವರಿ ಹೋರಾಟಗಾರರು ಅಣಕನೂರು ಕೆರೆ ಮುಳುಗಡೆ ಪ್ರದೇಶವೆಂದು ಲೋಕಾಯುಕ್ತಕ್ಕೆ ದೂರು ಕೊಟ್ಟ ಹಿನ್ನೆಲೆಯಲ್ಲಿ ಅಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆ ಕೈ ಬಿಡಲಾಯಿತು. ಬಹಳಷ್ಟು ಕಡೆ ಜಾಗ ಹುಡುಕಾಟ ನಡೆಸಿದರೂ ಸಿಗಲಿಲ್ಲ.

ಸ್ವಾರ್ಥ ಇಲ್ಲ: ಆರೂರು ಬಳಿ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಸೂಕ್ತ ಸ್ಥಳಾವಕಾಶ ಸಿಕ್ಕಿದೆ. ಆದರೂ ಕೆಲವರು ಶಾಸಕರು ಊರು ಕಡೆ ಮೆಡಿಕಲ್‌ ಕಾಲೇಜು ತಗೊಂಡು ಹೋಗಿದ್ದಾರೆಂಬ ಆರೋಪ ಮಾಡುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ನನ್ನ ಸ್ವಾರ್ಥ ಏನು ಇಲ್ಲ. ಜಿಲ್ಲೆಗೆ ವೈದ್ಯಕೀಯ ಕಾಲೇಜು ಆಗಬೇಕೆಂಬ ಹಠದಿಂದ ಒಬ್ಬ ವೈದ್ಯನಾಗಿ ಸರ್ಕಾರದ ಮೇಲೆ ಒತ್ತಡ ತಂದು ಮಂಜೂರು ಮಾಡಿಸಲಾಗಿದೆ ಎಂದರು.

ಅನುದಾನ ಕೊಡಲಿಲ್ಲ: ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲೂ ಕೂಡ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ. ಆದರೆ ಸತತ ಪ್ರಯತ್ನದಿಂದ ಸರ್ಕಾರ ಈಗ ಜಿಲ್ಲೆಗೆ ವೈದ್ಯಕೀಯ ಕಾಲೇಜಿಗೆ ಮಂಜೂರು ನೀಡಿದೆ ಎಂದರು.

Advertisement

ಜಿಲ್ಲಾಸ್ಪತ್ರೆ ಮೇಲ್ದರ್ಜೇಗೆ: ನಾನು ಯಾರ ಮೇಲೆಯು ವೈಯಕ್ತಿಕವಾಗಿ ದ್ವೇಷ ಸಾಧನೆ ಮಾಡುವುದಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ತ್ಯಾಗಕ್ಕೂ ಸಿದ್ಧ. ರಾಜ್ಯಕ್ಕೆ ಮಾದರಿಯಾಗಿ ಮೆಡಿಕಲ್‌ ಕಾಲೇಜು ಸ್ಥಾಪಿಸಲಾಗುವುದು. ಸಾವಿರ ಹಾಸಿಗೆಗಳ ಆಸ್ಪತ್ರೆಯಾಗಿ ಜಿಲ್ಲಾಸ್ಪತ್ರೆಯನ್ನು ಮೇಲ್ದಜೇìಗೇರಿಸಲಾಗುವುದು. ಮೆಡಿಕಲ್‌ ಕಾಲೇಜು ಮಾತ್ರವಲ್ಲದೇ ಸಂಶೋಧನಾ ಕೇಂದ್ರವನ್ನು ಸಹ ಸ್ಥಾಪಿಸಲಾಗುವುದು ಎಂದರು.

ಸಿಎಂ ಕಾರ್ಯಕ್ರಮ ಯಶಸ್ವಿಗೊಳಿಸಿ: ನ.8 ರಂದು ಸಿಎಂ ಯಡಿಯೂರಪ್ಪ ಜಿಲ್ಲೆಗೆ ಆಗಮಿಸಿ ಮೆಡಿಕಲ್‌ ಕಾಲೇಜು, ಮಂಚೇನಹಳ್ಳಿ ತಾಲೂಕು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು. ಕೋಚಿಮುಲ್‌ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ, ಪಿಎಲ್‍ಡಿ ಬ್ಯಾಂಕ್‌ ಅಧ್ಯಕ್ಷ ನಾಗೇಶ್‌, ನಿರ್ದೇಶಕರಾದ ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷ ಲಲಿತಾಮೂರ್ತಿ, ಮುಖಂಡರಾದ ಮರಳಕುಂಟೆ ಕೃಷ್ಣಮೂರ್ತಿ, ದಿನ್ನೆಹೊಸಹಳ್ಳಿ ರೆಡ್ಡಿ, ರಾಜಣ್ಣ ಉಪಸ್ಥಿತರಿದ್ದರು.

ಕಾಂಗ್ರೆಸ್‌ ಅಭ್ಯರ್ಥಿಯಿಂದ ಅನುಕೂಲ: ಕಾಂಗ್ರೆಸ್‌ ಪಕ್ಷ ಒಳ್ಳೆಯ ಅಭ್ಯರ್ಥಿಯನ್ನು ಈಗಾಗಲೇ ಪ್ರಕಟಿಸಿ ನಮಗೆ ಅನುಕೂಲ ಮಾಡಿಕೊಟ್ಟಿದೆ. ಉಪ ಚುನಾವಣೆಗೆ ನಂದಿ ಅಂಜನಪ್ಪರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದಕ್ಕೆ ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ವ್ಯಂಗ್ಯವಾಡಿದರು. ಕಾಂಗ್ರೆಸ್‌ ಅಭ್ಯರ್ಥಿಯದ್ದು ಬೈಯುವುದೇ ಕೆಲಸ. ಅವರನ್ನು ಅಭ್ಯರ್ಥಿ ಮಾಡಿರುವುದು ನಮಗೆ ಅನುಕೂಲವಾಗಲಿದೆ. ಕಳೆದ ಬಾರಿ 30 ಸಾವಿರ ಮಂತಗಳ ಅಂತರದಿಂದ ಗೆದ್ದೆ. ಈ ಬಾರಿ ಅಂತರ ಎರಡು ಪಟ್ಟು ಹೆಚ್ಚಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next