ಬೆಂಗಳೂರು: ಮರಾಠ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ನಿಗಮ ಅಥವಾ ಮಂಡಳಿ ಸ್ಥಾಪಿಸಬೇಕು. ಈ ಮೂಲಕ ಸಮುದಾಯದ ಮಕ್ಕಳು ಮತ್ತು ಬಡ ವರ್ಗಕ್ಕೆ ನೆರವಾಗಬೇಕು ಎಂದು ಸಮಾಜದ ಮುಖಂಡ ಬಿ.ಆರ್. ಶ್ರೀನಿವಾಸ ರಾವ್ ಕಾಳೆ ತಿಳಿಸಿದರು.
ವಸಂತನಗರದ ರಮಣಶ್ರೀ ಸಭಾಂಗಣದಲ್ಲಿ ವಿಜಯಿ ಭವಾನಿ ವೆಲ್ಫೆರ್ ಅಸೋಸಿಯೇಷನ್ ಭಾನುವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತಿ ಆಚರಣೆ ಹಾಗೂ ಸಂಘದ 32ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದ ಎಲ್ಲ ಸಮುದಾಯಗಳಿಗೂ ಇಂದು ನಿಗಮ ಅಥವಾ ಮಂಡಳಿ ಸ್ಥಾಪಿಸಲಾಗಿದೆ. ಅದೇ ರೀತಿ, ಮರಾಠ ಸಮಾಜದ ಅಭಿವೃದ್ಧಿಗೂ ನಿಗಮವೊಂದನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣ ಬೈರೇಗೌಡ, ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ, ಅದರಲ್ಲೂ ಕರ್ನಾಟಕದ ಮಕ್ಕಳು ಪ್ರತಿಭೆಯಲ್ಲಿ ಹಿಂದೆಬಿದ್ದಿಲ್ಲ. ಆದರೆ, ಪರಿಶ್ರಮದ ಕೊರತೆ ಅವರ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಿದರು.
ಸಾಧನೆಗೆ ಮಿತಿಯಿಲ್ಲದ ಈ ಸ್ಪರ್ಧಾತ್ಮಕ ಯುಗದಲ್ಲಿ ಸತತ ಪ್ರಯತ್ನ ಹಾಗೂ ಪರಿಶ್ರಮದ ಅಗತ್ಯ ಎಂದಿಗಿಂತ ಹೆಚ್ಚಿದೆ. ಆದರೆ, ಪಾಲಕರೂ ಮಕ್ಕಳ ಮೇಲಿನ ಪ್ರೀತಿಯಿಂದ ಹೆಚ್ಚು ಪರಿಶ್ರಮಕ್ಕೆ ಒತ್ತಡ ಹಾಕುತ್ತಿಲ್ಲ. ಹಾಗೂ ಸತತ ಪ್ರಯತ್ನದ ಬಗ್ಗೆ ಅರಿವು ಮೂಡಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇದು ಸಾಧ್ಯವಾದರೆ, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು.
ನಾವೆಲ್ಲರೂ ಒಂದು ಎಂಬ ಭಾವನೆಯಿಂದ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ವಿಜಯಿ ಭವಾನಿ ವೆಲ್ಫೆàರ್ ಅಸೋಸಿಯೇಷನ್ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಸಹಾಯಧನ ನೀಡಿ ಗೌರವಿಸುವ ಮೂಲಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸುತ್ತಿದೆ. ಇಂತಹ ಕೆಲಸ ಕಾರ್ಯಗಳು ಸಂಘ ಸಂಸ್ಥೆಗಳಿಂದ ಸಮಾಜದಲ್ಲಿ ಹೆಚ್ಚಾಗಬೇಕಿದೆ ಎಂದರು.
ಇದೇ ವೇಳೆ 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿ ವಿವಿಧ ಕೋರ್ಸ್‌ಗಳಲ್ಲಿ ಹೆಚ್ಚು ಅಂಕ ಗಳಿಸಿದ ಮರಾಠ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಕಾರ್ಯದರ್ಶಿ ನಾಗೇಶ ರಾವ್ ವನ್ಸಿà, ಅಸೋಸಿಯೇಷನ್ ಅಧ್ಯಕ್ಷ ಶಿವಲಿಂಗರಾವ್ ನಿಕ್ಕಂ, ಪದಾಧಿಕಾರಿಗಳಾದ ಎನ್. ಜನಾರ್ದನ ರಾವ್ ನಿಕ್ಕಂ, ಬಿ.ವಿ.ಕೃಷ್ಣಾಜಿ ರಾವ್ ಕದಂ, ನಾಮದೇವ ರಾವ್ ನಿಕ್ಕಂ ಮತ್ತಿತರರು ಉಪಸ್ಥಿತರಿದ್ದರು.