ಪಣಜಿ: ಕಳೆದ ಹಲವು ವರ್ಷಗಳ ಹಿಂದೆ ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಸ್ಥಾಪನೆ ಮಾಡಬೇಕು ಎಂಬ ಕನಸು ಕಂಡಿದ್ದೆವು. ಆದರೆ ಅಂದು ಅದು ಸಾಧ್ಯವಾಗಿರಲಿಲ್ಲ. ಇಂದು ಸಿದ್ಧಣ್ಣ ಮೇಟಿ ಅವರ ನೇತೃತ್ವದಲ್ಲಿ ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಸ್ಥಾಪನೆಯಾಗಿದೆ.
ಇಂದು 67ನೇ ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಸಾಹಿತ್ಯ ಪರಿಷತ್ ನ ಪಣಜಿ ಘಟಕ ಸ್ಥಾಪನೆಯಾಗಿದೆ. ಒಬ್ಬ ಮನುಷ್ಯ ಮುಂದೆ ನಡೆದಾಗ ಆತನ ಕಾಲೆಳೆಯುವವರೆ ಹೆಚ್ಚು. ಆದರೆ ಇವೆಲ್ಲವನ್ನು ಬಿಟ್ಟು ನಾವೆಲ್ಲರೂ ಕನ್ನಡಿಗರು ಎಂಬ ಭಾವನೆ ಬೇಕು. ಗೋವಾದಲ್ಲಿ ಮೂರು ಜನ ಕನ್ನಡದ ಶಾಸಕರನ್ನು ಆಯ್ಕೆ ಮಾಡುವ ಶಕ್ತಿ ಇಲ್ಲಿನ ಕನ್ನಡಿಗರಿಗೆ ಇದೆ ಎಂದು ಇಂಡೋ ಪೋರ್ಚುಗೀಸ್ ಪ್ರತಿಷ್ಠಾನದ ನಿರ್ದೇಶಕ ಡಾ. ಅರವಿಂದ ಯಾಳಗಿ ಹೇಳಿದರು.
ಕನ್ನಡ ರಾಜ್ಯೋಜ್ಯದ ಶುಭ ಸಂದರ್ಭದಲ್ಲಿ ಪಣಜಿಯ ಮೆನೆಜಿಸ್ ಬ್ರಾಗಾಂಜಾ ಸಭಾಗೃಹದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಉತ್ತರ ಗೋವಾದ ತಿಸವಾಡಿ ತಾಲೂಕು ಪಣಜಿ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಉಧ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ನ ಗೋವಾ ರಾಜ್ಯಾಧ್ಯಕ್ಷ ಡಾ. ಸಿದ್ಧಣ್ಣ ಮೇಟಿ ಮಾತನಾಡಿ, ಗೋವಾದ ಜನರ ಕುಲದೇವರು ಕರ್ನಾಟಕದಲ್ಲಿದ್ದಾರೆ. ಕರ್ನಾಟಕದ ಜನರ ಕುಲದೇವರು ಗೋವಾದಲ್ಲಿದ್ದಾರೆ. ಹೀಗೆ ಕರ್ನಾಟಕ ಮತ್ತು ಗೋವಾ ಅವಿನಾಭಾವ ಸಂಬಂಧ ಹೊಂದಿದೆ. ನಾವು ಕೇವಲ ಘಟಕ ಸ್ಥಾಪನೆ ಮಾಡಿದರೆ ಸಾಲದು, ಸದಸ್ಯತ್ವ ಅಭಿಯಾನ ವೇಗ ಗೊಳಿಸಬೇಕು. ಕನ್ನಡ ಸ್ವಾಭಿಮಾನಿಗಳಾಗಿ ಇಲ್ಲಿ ಇಷ್ಟೊಂದು ಜನರು ಸೇರಿದ್ದಾರೆ. ಇಂತಹ ಕಾರ್ಯಕ್ರಮ ಮಾಡಬೇಕಾದರೆ ಹಲವು ತೊಂದರೆ ಬರುವುದು ಸಹಜ ಎಂದು ಸಿದ್ಧಣ್ಣ ಮೇಟಿ ಹೇಳಿದರು.
ಗೋವಾ ಕನ್ನಡ ಸಮಾಜ ಪಣಜಿ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಕಸಾಪ ಪಣಜಿ ತಾಲೂಕು ಘಟಕದ ಅಧ್ಯಕ್ಷ ಹನುಮಂತ ಗೊರವರ್, ಉತ್ತರ ಗೋವಾ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ್ ಕೊಟ್ಟಿಗೇರಿ, ದಕ್ಷಿಣ ಗೋವಾ ಜಿಲ್ಲಾ ಅಧ್ಯಕ್ಷ ಪರಶುರಾಮ ಕಲಿವಾಳ, ಸಾಲಸೇಟ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಬನ್ನಿಕೊಪ್ಪ ವೇದಿಕೆಯ ಮೇಲೆ ಉಪಸ್ಥಿತರಿದ್ದು, ಮಾತನಾಡಿದರು. ಜುವಾರಿ ನಗರ ದೇವಸ್ಥಾನದ ಅರ್ಚಕ ಸಂಗಯ್ಯ ಹಿರೇಮಠ ಹಾಗೂ ಮತ್ತಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.