Advertisement

Insect cafe: ರಾಜ್ಯದ 20 ಕಡೆ ಕೀಟ ಕೆಫೆ ಸ್ಥಾಪನೆ

01:01 PM Nov 17, 2023 | Team Udayavani |

ಬೆಂಗಳೂರು: ನಗರದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಕಳೆದ ತಿಂಗಳು ಅನಾವರಣಗೊಂಡ “ಕೀಟ(ಇನ್‌ ಸೆಕ್ಟ್) ಕೆಫೆ’ ಪ್ರಯೋಗ ಯಶಸ್ಸು ಕಂಡಿದ್ದು, ಮುಂದಿನ ದಿನಗಳಲ್ಲಿ ನಗರದ ಕಬ್ಬನ್‌ ಪಾರ್ಕ್‌ ಸೇರಿ ರಾಜ್ಯಾದ್ಯಂತ 20 ಸಾವಿರ ರೂ.ನಲ್ಲಿ 20 ಕೀಟ ಕೆಫೆ ಸ್ಥಾಪಿಸುವ ಚಿಂತನೆ ತೋಟಗಾರಿಕೆ ಇಲಾಖೆ ನಡೆಸುತ್ತಿದೆ.

Advertisement

ಇಂದಿನ ನಗರೀಕರಣದ ದೆಸೆಯಲ್ಲಿ ಪ್ರಕೃತಿ ದತ್ತವಾಗಿದ್ದಂತಹ ಹಸಿರು ತಾಣ, ಹುಲ್ಲುಗಾವಲು ಗಳೂ ಮರೆಯಾಗಿದ್ದು, ಕೀಟಗಳ ಆಸರೆ, ಸಂತಾನೋತ್ಪತ್ತಿ ಮತ್ತು ವೃದ್ಧಿಗಾಗಿ ತಮ್ಮದೇ ಆದ ಸಂರಕ್ಷಿತ ಮತ್ತು ಸುರಕ್ಷಿತ ನೆಲೆ ಇಲ್ಲವಾದ್ದರಿಂದ ಇಂಡಿಯಾ ಫೌಂಡೇಷನ್‌ ಸಂಸ್ಥೆ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಹೊಸ ಪರಿಕಲ್ಪನೆಯಲ್ಲಿ ಸರ್ವ ರೀತಿಯಲ್ಲಿಯೂ ಕೀಟ ಗಳಿಗೆ ಪೂರಕವಾಗಿರಬಲ್ಲ, 20 ಸಾವಿರ ವೆಚ್ಚದಲ್ಲಿ ನಿರ್ಮಿಸಿರುವ “ಕೀಟ(ಇನ್‌ಸೆಕ್ಟ್) ಕೆಫೆ’ಯನ್ನು ಲಾಲ್‌ಬಾಗ್‌ ಬ್ಯಾಂಡ್‌ ಸ್ಯಾಂಡ್‌ ಬಳಿ ಸ್ಥಾಪಿಸಲಾಗಿದೆ. ನಿತ್ಯ ನೂರಾರು ವಿವಿಧ ಕೀಟಗಳು ಆಶ್ರಯ ಪಡೆಯುತ್ತಿವೆ.

3 ಸಾವಿರಕ್ಕೂ ಹೆಚ್ಚು ಪ್ರಭೇದಗಳ ಆಗರವಾಗಿರುವ ಸಸ್ಯಕಾಶಿ ಲಾಲ್‌ಬಾಗ್‌, ಅಸಂಖ್ಯಾತ ಜೀವರಾಶಿ ಹೊಂದಿರುವ ನಗರದ ಪ್ರಮುಖ ಜೀವ ವೈವಿಧ್ಯತಾ ಕೇಂದ್ರವಾಗಿದೆ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಪರಿ ಸರ ಹಾಗೂ ಜೀವ-ಜಂತುಗಳಿಗೆ ಸುರಕ್ಷಿತ ನೆಲೆ ಇಲ್ಲದಂತಾಗಿದೆ. ಆದ್ದರಿಂದ ಮರದ ತುಂಡು ಗಳಿಂದ ಸಣ್ಣ ಮನೆಯಾಕಾರದಲ್ಲಿ ಕೀಟ ಕೆಫೆಯನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಕಡ್ಡಿ ಹುಳ, ಗಲ ಗಂಜಿ ಹುಳ, ವಾಡೆ ಹುಳ, ಜೀರುಂಡೆ, ಕಣಜ ಸೇರಿ 15-20ಕ್ಕೂ ಹೆಚ್ಚು ಕೀಟಗಳು ವಾಸವಾಗಿವೆ.

ಅನುಕೂಲಗಳು: ಇಂದಿನ ದಿನಗಳಲ್ಲಿ ಕ್ರಿಮಿ- ಕೀಟಗಳು ನಾಶವಾಗುತ್ತಿದ್ದು, ಅವುಗಳ ಸಂತಾ ನೋತ್ಪತ್ತಿ ಕಡಿಮೆಯಾಗಿದೆ. ಈ ಕೀಟ ಕೆಫೆಯಿಂದಾಗಿ ಗಾಳಿ-ಮಳೆಯ ಅಡೆತಡೆಗಳಿಲ್ಲದೇ, ಕೀಟಗಳ ಸಂತಾನೋತ್ಪತ್ತಿ ಆಗುವ ಜತೆಗೆ ಅವುಗಳ ವೃದ್ಧಿಯೂ ಹೆಚ್ಚಾಗುತ್ತದೆ. ಇದರಿಂದಾಗಿ ಇತರೆ ಗಿಡಗಳ ಪಾಲಿನೇಷನ್‌(ಪರಾಗಸ್ಪರ್ಶ)ಗೆ ಸಹಕಾರಿಯಾಗಲಿದೆ. ಗಿಡ-ಮರಗಳ ಅಭಿವೃದ್ಧಿಯೂ ಆಗುತ್ತದೆ. ಅಷ್ಟೇ ಅಲ್ಲದೇ, ಪ್ರಾಣಿ-ಪಕ್ಷಿಗಳಿಗೂ ಆಹಾರ ದೊರೆಯುತ್ತದೆ. ಪರಿಸರ ಏಳಿಗೆಗೆ ಒಂದು ಸೂಕ್ಷ ಜೀವಿಯೂ ಪ್ರಾಮುಖ್ಯತೆ ವಹಿಸುತ್ತದೆ.

Advertisement

ಏನಿದು ಕೀಟ ಕಫೆ ಕೀಟ ಕೆಫೆಯನ್ನು ಹಲವು ವಿಭಾಗಗಳಾಗಿ ವರ್ಗೀಕರಿಸಿ, ಪ್ರತಿ ವಿಭಾಗದಲ್ಲಿ ಸಣ್ಣ, ಮಧ್ಯಮ ಮರದ ತುಂಡು, ಒಣ ಹುಲ್ಲು, ಬಿದಿರು, ವಿವಿಧ ರೀತಿಯ ಮರಗಳ ಹಾಗೂ ಗಟ್ಟಿ ಕಟ್ಟಿಗೆ ಇತ್ಯಾದಿಗಳನ್ನು ಒಂದಕ್ಕೊಂದು ಅಂಡಿಕೊಂಡಿರುವಂತೆ ಜೋಡಿಸಿರುವ ಕೀಟಗಳಿಗೆ ಸುರಕ್ಷಿತ ಮನೆಯನ್ನು ಸಿದ್ಧಪಡಿಸಲಾಗಿದೆ. ಮಣ್ಣು ತುಂಬಿದ ಒಂದು ಬಾಕ್ಸ್‌ ಜತೆಗೆ ಸೂಕ್ಷ್ಮರಂಧ್ರದಿಂದ 2.5 ಇಂಚು ಇರುವ ರಂಧ್ರದವರೆಗೆ ಇರುವ ಈ ರಚನೆಯಿಂದಾಗಿ ಎಲ್ಲಾ ಬಗೆಯ ಕೀಟ, ದುಂಬಿಗಳು ನೆಲೆಸಲು ಮೂಲನೆಲೆ ಒದಗಿಸಲಾಗಿದೆ. ಮಳೆ, ಗಾಳಿಯಿಂದಲೂ ಯಾವುದೇ ತೊಂದರೆಯಾಗದಂತೆ ಕೀಟಗಳಿಗೆ ಸುರಕ್ಷಿತವಾಗಿದ್ದು, ಸಂತಾನೋತ್ಪತ್ತಿ ಮತ್ತು ಅವುಗಳ ಬೆಳವಣಿಗೆಗೆ ಸಹಕಾರಿಯಾಗಿದೆ.

ಲಾಲ್‌ಬಾಗ್‌ನಲ್ಲಿ ಕಳೆದ ತಿಂಗಳು ಸ್ಥಾಪಿಸಿರುವ “ಕೀಟ ಕೆಫೆ’ಯಿಂದ ಅನೇಕ ಕೀಟಗಳಿಗೆ ಮತ್ತು ಪರಿಸರಕ್ಕೆ ಉಪಯೋಗವಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಲಾಲ್‌ಬಾಗ್‌ನಲ್ಲಿ ನಾಲ್ಕು, ಕಬ್ಬನ್‌ ಪಾರ್ಕಿನಲ್ಲಿ ಐದು ಸೇರಿ ರಾಜ್ಯಾದ್ಯಂತ 20 “ಕೀಟ ಕೆಫೆ’ ಸ್ಥಾಪಿಸಲಾಗುತ್ತದೆ. ಇದಕ್ಕೆ ಅಗತ್ಯವಿರುವ ಸಿದ್ಧತೆಗಳು ಪ್ರಗತಿಯಲ್ಲಿದೆ. ● ಡಾ.ಜಗದೀಶ್‌, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ(ಲಾಲ್‌ಬಾಗ್‌).

●ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next