ಕೆಜಿಎಫ್: ಬಿಜಿಎಂಎಲ್ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರಕ್ಕೆ ಶನಿವಾರ ಭೇಟಿ ನೀಡಿದ ಅವರು, ಕೈಗಾರಿಕೆ ಸ್ಥಾಪನೆಗೆ ಲಭ್ಯವಿರುವ ಸ್ಥಳಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಶುಕ್ರವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಬಿಜಿಎಂಎಲ್ ಪ್ರದೇಶದಲ್ಲಿ 3200 ಎಕರೆ ಪ್ರದೇಶವನ್ನು ಕೈಗಾರಿಕೆ ಅಭಿವೃದ್ಧಿಗೆ ನೀಡಬೇಕೆಂದು ಕೇಂದ್ರ ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಕೋರಲಾಗಿತ್ತು ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಜೋಷಿ ಅವರು, ಗಣಿ ಪ್ರದೇಶದಲ್ಲಿ ಚಿನ್ನ, ಪೆಲ್ಲಾಡಿಯಂ ಮೊದಲಾದ ಖನಿಜಗಳು ಇನ್ನೂ ಸಿಗುವ ಸಾಧ್ಯತೆ ಬಗ್ಗೆ ಸರ್ವೆ ಮಾಡಲು ಎಂಇಸಿಎಲ್‌ಗೆ ಒಪ್ಪಿಸಲಾಗುವುದು. ಆರು ತಿಂಗಳಲ್ಲಿ ಸರ್ವೆ ಮುಗಿಸಲಾಗುವುದು ಎಂದು ಸಚಿವರು ಹೇಳಿದ್ದರು. ಅದಕ್ಕೆ ಉತ್ತರವಾಗಿ ಗಣಿಗಾರಿಕೆ ನಡೆಯದೆ ಇರುವ 3200 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಅಭಿವೃದ್ಧಿ ಮಾಡಬಹುದು ಎಂದು ನಾವು ಕೇಳಿದ್ದೆವು ಎಂದರು.
ಇದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಉತ್ತರ ಕೊಟ್ಟಿದ್ದಾರೆ. ಇದುವರೆಗೂ ಸ್ವಾಭಾವಿಕ ಸಂಪತ್ತುಗಳು ಇರುವ ಬಗ್ಗೆ ಸರ್ವೆ ನಡೆಯುತ್ತದೆ. ಇದಕ್ಕೆ 6 ತಿಂಗಳು ಬೇಕಾಗುತ್ತದೆ. ನಂತರ ಕೈಗಾರಿಕೆ ಸ್ಥಾಪನೆಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಮೈನಿಂಗ್ ಚಟುವಟಿಕೆ ನೀಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಎಲ್ಲರ ಸಹಕಾರ ಬೇಕಾಗುತ್ತದೆ ಎಂದು ಸಲಹೆ ನೀಡಿದರು. ಹಿಂದೆ ಹಲವು ಸಮಿತಿಗಳು, ಯೋಜನೆಗಳು ಇದ್ದಿರಬಹುದು. ಎಲ್ಲೋ ತಪ್ಪುಗಳಾಗಿತ್ತು. ಅದಕ್ಕೆ ಜಾರಿಗೆ ಬರಲಿಲ್ಲ. ಈಗ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ರಾಜ್ಯ ಸರ್ಕಾರ ಕೈಗಾರಿಕೆ ಘಟಕಕ್ಕೆ ಒಲವು ತೋರಿದೆ. ಮುಖ್ಯಮಂತ್ರಿಗಳ ಸಭೆಯಲ್ಲಿ ಎಂಇಸಿಎಲ್ ಎಂಡಿ ಕೂಡ ಬಂದಿದ್ದರು. ಅವರಿಗೆ ಆರು ತಿಂಗಳು ಸಮಯ ಕೊಟ್ಟಿದ್ದೇವೆ. ವರದಿ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೆಜಿಎಫ್ನಲ್ಲಿ ಕೈಗಾರಿಕೆ ಸ್ಥಾಪನೆ ಯೋಗ್ಯ ಪ್ರದೇಶವಾಗಿದೆ. ಚೆನ್ನೆç ಬಂದರು, ವಿಮಾನ ನಿಲ್ದಾಣ, ಎಕ್ಸ್‌ಪ್ರೆಸ್ ಕಾರಿಡಾರ್ ಪ್ರದೇಶಗಳು, ಬೆಂಗಳೂರು ಹತ್ತಿರವಿದೆ. ಎಲ್ಲಾ ದೃಷ್ಟಿಯಿಂದ ಕೈಗಾರಿಕೆ ಬೆಳವಣಿಗೆಗೆ ಅನುಕೂಲವಾಗಿದೆ ಎಂದು ಸಚಿವರು ತಿಳಿಸಿದರು.
ಕೆಜಿಎಫ್ನಲ್ಲಿ ಪ್ರಾರಂಭವಾಗುವ ಕೈಗಾರಿಕೆ ವಲಯಕ್ಕೆ ಇದೇ ರೀತಿಯ ಕೈಗಾರಿಕೆ ಬರಬೇಕೆಂಬ ನಿರ್ದಿಷ್ಟ ಯೋಜನೆ ಏನೂ ಇಲ್ಲ. ಮೊದಲು ನಮ್ಮ ಕೈಗೆ ಜಮೀನು ಬರಲಿ. ನಂತರ ಕೈಗಾರಿಕೆ ರೂಪರೇಷೆಗಳ ಬಗ್ಗೆ ಮಾತನಾಡಬಹುದು. ಕೈಗಾರಿಕೆ ಸ್ಥಾಪನೆಯಾದರೆ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಕೊಡಲಾಗುವುದು. ತಾಂತ್ರಿಕ ವಿಭಾಗದಲ್ಲಿ ಶೇ.70 ಕನ್ನಡಿಗರಿಗೇ ಕೊಡಬೇಕು ಎಂದು ಹೇಳಿದರು.