Advertisement

ಉದ್ಯೋಗ ಸೃಷ್ಟಿಗೆ ಕೈಗಾರಿಕಾ ಕಾರಿಡಾರ್‌ ಸ್ಥಾಪನೆ ಗುರಿ

09:29 PM Oct 12, 2020 | mahesh |

ಪುತ್ತೂರು: ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ ಪುತ್ತೂರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಇಕ್ಕೆಲೆಗಳ 100 ಎಕರೆಯಲ್ಲಿ ವಿಶಾಲ ಕೈಗಾರಿಕಾ ಕಾರಿಡಾರ್‌ ನಿರ್ಮಾಣಗೊಂಡು ಉದ್ಯೋಗ ಸೃಷ್ಟಿಯ ತಾಣವಾಗಿ ಬದಲಾಗಲಿದೆ. ಶಾಸಕ ಸಂಜೀವ ಮಠಂದೂರು ಅವರ ನವ ಪುತ್ತೂರಿನ ನಿರ್ಮಾಣದ ಕನಸಿಗೆ ಪೂರಕವಾಗಿ ಈಗಾಗಲೇ ಕಂದಾಯ ಇಲಾಖೆ ಮೂಲಕ ಜಾಗ ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

Advertisement

ಕೈಗಾರಿಕಾ ಕಾರಿಡಾರ್‌
ಪುತ್ತೂರನ್ನು ದ.ಕ. ಜಿಲ್ಲೆಯ ಗ್ರಾಮಾಂತರ ಜಿಲ್ಲೆಯಾಗಿ ಘೋಷಿಸುವ ನಿಟ್ಟಿನಲ್ಲಿ ಮೂಲ ಸೌಕರ್ಯ ಜತೆಗೆ ಉದ್ಯೋಗ ಸೃಷ್ಟಿಸಲು ಶಾಸಕರು ಮುಂದಡಿ ಇರಿಸಿದ್ದಾರೆ. ಅದರ ಪ್ರಯತ್ನ ಎಂಬಂತೆ ಬಹು ನಿರೀಕ್ಷಿತ ಕೈಗಾರಿಕಾ ಕಾರಿಡಾರ್‌ ಸ್ಥಾಪನೆಯ ಕನಸು. ಸ್ಥಳ ಗುರುತಿಸುವಿಕೆ ಅಂತಿಮಗೊಂಡರೆ ಪುತ್ತೂರು-ಉಪ್ಪಿನಂಗಡಿ 14 ಕಿ.ಮೀ. ರಸ್ತೆಯ ಇಕ್ಕೆಲೆಗಳ ನಡುವೆ 100 ಎಕರೆ ವಿಶಾಲ ಕಾರಿಡಾರ್‌ ಎದ್ದು ನಿಲ್ಲಲಿದೆ.

ಏನಿದು ಕಾರಿಡಾರ್‌?
ಕೈಗಾರಿಕಾ ಕಾರಿಡಾರ್‌ ವಲಯ ನಿರ್ಮಾಣದಿಂದ ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ. ಈ ಕಾರಿಡಾರ್‌ ವ್ಯಾಪ್ತಿಯೊಳಗೆ ಹಾಳೆ ತಟ್ಟೆ ತಯಾರಿ, ಕೃಷಿ ಮೌಲ್ಯವರ್ಧಿತ ಉತ್ಪನ್ನಗಳು, ಸಿಮೆಂಟ್‌, ಗಾರ್ಮೆಂಟ್ಸ್‌, ಕ್ಯಾಶೊÂà, ಪೆಟ್ರೋಲಿಯಂ ಉಪ ಉತ್ಪನ್ನಗಳ ತಯಾರಿ ಕೈಗಾರಿಕಾ ಘಟಕ ಸೇರಿ ದಂತೆ ಹಲವು ಉದ್ಯೋಗ ಸಂಬಂಧಿತ ಸಂಸ್ಥೆಗಳ ಸ್ಥಾಪನೆ ಸಾಧ್ಯವಾಗಲಿದೆ.

ಕಾರಿಡಾರ್‌ನಲ್ಲಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿ ಮೂರು ವರ್ಷದೊಳಗೆ ಕನಿಷ್ಠ 1.5 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಸುವ ಚಿಂತನೆ ನಡೆದಿದೆ. ಇದರಿಂದ ಉದ್ಯೋಗಕ್ಕಾಗಿ ಪುತ್ತೂರು ಹಾಗೂ ಆಸುಪಾಸಿನವರು ಹೊರ ಜಿಲ್ಲೆ, ರಾಜ್ಯ, ದೇಶವನ್ನು ಆಶ್ರಯಿಸಬೇಕಾದ ಪ್ರಮೇಯ ತಪ್ಪಲಿದೆ ಎನ್ನುವುದು ಲೆಕ್ಕಚಾರ.

ಕಾರಿಡಾರ್‌ ರಸ್ತೆ ನಿರ್ಮಾಣ
ಕೈಗಾರಿಕಾ ವಲಯ ನಿರ್ಮಾಣಕ್ಕೆ ಪೂರಕವಾಗಿ ಪ್ರಥಮ ಹಂತದಲ್ಲಿ ಪುತ್ತೂರು-ಉಪ್ಪಿನಂಗಡಿ ನಡುವಿನ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಪರಿವರ್ತಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು 12 ಕೋ. ರೂ. ವೆಚ್ಚದಲ್ಲಿ ನಡೆಯುವ ವಿಸ್ತರಣೆ ಕಾಮಗಾರಿ 2021 ಜನವರಿಯಲ್ಲಿ ಪೂರ್ಣಗೊಳ್ಳಲಿದೆ. ಪುತ್ತೂರಿನಿಂದ-ಉಪ್ಪಿನಂಗಡಿ ತನಕದ 14 ಕಿ.ಮೀ. ದೂರ ನಾಲ್ಕು ಪಥದ ರಸ್ತೆ, ದಾರಿದೀಪ ಅಳವಡಿಕೆ ಉದ್ದೇಶ ಹೊಂದಿದ್ದು, ಪ್ರಸ್ತುತ ಬೊಳುವಾರಿನಿಂದ ಪಡೀಲು ತನಕ ಈ ಕಾರ್ಯ ಪೂರ್ಣಗೊಂಡಿದೆ.

Advertisement

ರಾಜ್ಯ ರಸ್ತೆಯಾಗಿ ಮೇಲ್ದರ್ಜೆಗೆ
ಈಗಾಗಲೇ ಪುತ್ತೂರು ಮತ್ತು ಉಪ್ಪಿನಂಗಡಿಯನ್ನು ಸಂಪರ್ಕಿಸುವ 10.2 ಕಿ.ಮೀ. ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯ ಹೆದ್ದಾರಿ-118ಕ್ಕೆ ಸೇರ್ಪಡೆಗೊಳಿಸಿ ರಾಜ್ಯ ಹೆದ್ದಾರಿ ಆಗಿ ಮೇಲ್ದರ್ಜೆಗೇರಿಸಲಾಗಿದೆ. ಗುರುವಾಯನಕೆರೆ-ಉಪ್ಪಿನಂಗಡಿ ಸಂಪರ್ಕಿಸುವ 26 ಕಿ.ಮೀ. ರಸ್ತೆ ರಾಜ್ಯ ಹೆದ್ದಾರಿ ಆಗಿದ್ದು, ಇದೇ ಹೆದ್ದಾರಿಯನ್ನು ಪುತ್ತೂರು ತನಕ ವಿಸ್ತರಿಸಲಾಗಿದೆ. ಈ ಮೂಲಕ 36 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಆಗಿ ಪರಿವರ್ತನೆಗೊಂಡಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಿ ಅನುಷ್ಠಾನಗೊಳಿಸಲಾಗಿದೆ.

ಸಮುದ್ರ ಉತ್ಪನ್ನಗಳ ಉದ್ದಿಮೆ ಘಟಕ
ಉದ್ದೇಶಿತ ಕೈಗಾರಿಕಾ ಕಾರಿಡಾರ್‌ ವ್ಯಾಪ್ತಿಯೊಳಗೆ 50 ಎಕರೆಯಲ್ಲಿ ಸಮುದ್ರ ಉತ್ಪನ್ನಗಳ ಉದ್ದಿಮೆ ಘಟಕ ಸ್ಥಾಪನೆಗೆ ಚಿಂತನೆ ನಡೆದಿದೆ. ಇದರಿಂದ ಕರಾವಳಿ ಭಾಗದಲ್ಲಿ ಹೇರಳವಾಗಿರುವ ಸಮುದ್ರ ಉತ್ಪನ್ನಗಳಿಗೆ ಪುತ್ತೂರು ಉದ್ದಿಮೆ ಘಟಕವಾಗಿ ರೂಪುಗೊಂಡು ಉದ್ಯೋಗದ ಜತೆಗೆ ಮಾರುಕಟ್ಟೆ ಸೃಷ್ಟಿಸುವ ಅವಕಾಶ ಒದಗಲಿದೆ.

ಮೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ರಸ್ತೆ
ಹೊಸ ರಾಜ್ಯ ಹೆದ್ದಾರಿಯು ಜಿಲ್ಲೆಯ ಪ್ರಮುಖ ರಸ್ತೆಯಾಗಿದ್ದು, 3 ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಕಾರಣ ಈ ರಾಜ್ಯ ಹೆದ್ದಾರಿ ಮುಖ್ಯ ಹೆದ್ದಾರಿ ಆಗಲಿದೆ. ಇವೆಲ್ಲವೂ ಕೈಗಾರಿಕಾ ಕಾರಿಡಾನ್‌ ನಿರ್ಮಾಣದ ಕನಸಿಗೆ ಪೂರಕ ಪ್ರಕ್ರಿಯೆ ಎಂದೇ ಪರಿಗಣಿಸಲಾಗಿದೆ.

ಉದ್ದಿಮೆ ಘಟಕ ನಿರ್ಮಾಣದ ಗುರಿ
ಪುತ್ತೂರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ನಡುವಿನ ಇಕ್ಕೆಲೆಗಳಲ್ಲಿನ 100 ಎಕರೆಯಲ್ಲಿ ಕೈಗಾರಿಕಾ ಕಾರಿಡಾರ್‌ ನಿರ್ಮಿಸಬೇಕು ಎಂಬ ಚಿಂತನೆ ಹೊಂದಿದ್ದು, ಸ್ಥಳ ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜತೆಗೆ ಸಮುದ್ರ ಉತ್ಪನ್ನಗಳ ಉದ್ದಿಮೆ ಘಟಕ ನಿರ್ಮಾಣದ ಗುರಿಯೂ ಇದೆ. ಈಗಾಗಲೇ ಸಂಪರ್ಕ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
-ಸಂಜೀವ ಮಠಂದೂರು, ಶಾಸಕರು

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next