ಅರಸೀಕೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾರತೀಯ ಗೋ ಸಂಪತ್ತನ್ನು ಉಳಿಸಿಬೆಳೆಸುವ ಉದ್ದೇಶದಿಂದ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಅಲ್ಲದೆ, ವಯಸ್ಸಾದ ಹಾಗೂ ಬೇಡವಾದ ಗೋವುಗಳನ್ನು ಸಾಕಲಾಗದವರು ಅವುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡದೇ ಸರ್ಕಾರ ಸ್ಥಾಪಿಸುವ ಗೋ ಶಾಲೆಗಳಿಗೆ ತಂದು ಒಪ್ಪಿಸಬೇಕೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರದ ಗೋ ಶಾಲೆಯನ್ನು ಪ್ರಾರಂಭಿಸುತ್ತಿದೆ.
ತಾಲೂಕಿನ ಅಚ್ಚು ಮೆಚ್ಚಿನ ಅಮೃತ್ ಮಹಲ್ ಕಾವಲ್ ವ್ಯಾಪ್ತಿಯ ಪ್ರದೇಶವಾದ ಬೋರನಕೊಪ್ಪಲು ಗ್ರಾಮ ಸಮೀಪ ಗೋಶಾಲೆ ಸ್ಥಾಪನೆಗೆ ಹಸಿರು ನಿಶಾನೆ ನೀಡಿದೆ. ತಾಲೂಕಿನ ಕಸಬಾ ಹೋಬಳಿ ಬೋರನಕೊಪ್ಪಲು ಸಮೀಪದಲ್ಲಿರುವ ನಂದಿನಿ ಹಾಲಿನ ಡೇರಿ ಮತ್ತು ಹಣ್ಣು ತರಕಾರಿ, ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣದ ಹತ್ತಿರದ ಅಮೃತ್ ಮಹಲ್ ಕಾವಲ್ ಪ್ರದೇಶಕ್ಕೆ ಸೇರಿರುವ ಸುಮಾರು 25 ಎಕರೆ ಪ್ರದೇಶದಲ್ಲಿ ಸರ್ಕಾರ ಗೋ ಶಾಲೆಯನ್ನು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ಪ್ರಥಮ ಹಂತದಲ್ಲಿ ಸರ್ಕಾರ 36 ಲಕ್ಷ ರೂ. ಮಂಜೂರು ಮಾಡಿದೆ. ಜ.30ರಂದು ಸಚಿವ ಗೋಪಾಲಯ್ಯ ಅವರಿಂದ ನಡೆಯಬೇಕಾಗಿದ್ದ ಶಂಕುಸ್ಥಾಪನೆ ಕಾರಣಾಂತರಗಳಿಂದ ಮುಂದುಡಿದ್ದು, ಫೆ.7ರ ಸೋಮವಾರ ಕಾಮಗಾರಿಗೆ ಭೂಮಿ ಪೂಜೆಯನ್ನು ಸಚಿವರು ನೆರವೇರಿಸಲಿದ್ದಾರೆ.
ಗೋ ಶಾಲೆ ಅಭಿವೃದ್ಧಿಗಾಗಿ ವಿಶೇಷ ಅನುದಾನ: ತಾಲೂಕಿನ ಬೋರನಕೊಪ್ಪಲು ಹತ್ತಿರದಲ್ಲಿ ಸರ್ಕಾರ ನಿರ್ಮಿಸಲಿರುವ ಗೋಶಾಲೆ ಪ್ರಾಥಮಿಕ ಹಂತದಲ್ಲಿ 40 ಮತ್ತು 140 ಅಳತೆಯಲ್ಲಿ ಗೋವುಗಳ ವಾಸಕ್ಕೆ ಶೆಡ್ ನಿರ್ಮಿಸಲಾಗುವುದು. ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ವ್ಯವಸ್ಥೆಗಾಗಿ ಸುಮಾರು 25 ಎಕರೆ ಭೂ ಪ್ರದೇಶವನ್ನು ಬಳಸಿಕೊಳ್ಳುವ ಸಾಧ್ಯತೆಗಳಿದ್ದು, ಮುಂದಿನ ಬಜೆಟ್‌ನಲ್ಲಿ ರಾಜ್ಯದ ಜಿಲ್ಲೆಗಳಲ್ಲಿ ಸರ್ಕಾರ ಸ್ಥಾಪಿಸಲಿರುವ ಪ್ರತಿ ಗೋ ಶಾಲೆಗಳ ಸಮಗ್ರ ಅಭಿವೃದ್ಧಿಗಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು 2 ಕೋಟಿ ವಿಶೇಷ ಅನುದಾನ ನೀಡಲಿದೆ.
ಗೋವುಗಳ ಪೋಷಣೆ ನಮ್ಮ ಕರ್ತವ್ಯ: ತಾಲೂಕಿನ ಅಮೃತ್ ಮಹಲ್ ಕಾವಲ್ ಪ್ರದೇಶದಲ್ಲಿ ಸರ್ಕಾರ ಗೋ ಶಾಲೆಯನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ಸ್ಥಾಪಿಸಲಿದೆ. ಮುಂದಿನ ವರ್ಷಗಳಲ್ಲಿ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಹಂತ ಹಂತವಾಗಿ ಅಭಿವೃದ್ಧಿಪಡಿಸಲಿದೆ. ಆದರೆ, ರೈತಾಪಿ ಜನ ತಮ್ಮ ಜೀವಕ್ಕೆ ಜೀವವಾಗಿರುವ ಗೋವುಗಳ ಪಾಲನೆ ಹಾಗೂ ಪೋಷಣೆ ನಮ್ಮ ಕರ್ತವ್ಯ ಎಂಬುದನ್ನು ಎಂದಿಗೂ ಮರೆಯಬಾರದು. ಗೋವುಗಳನ್ನು ಸಾಕಲು ಸಾಧ್ಯವಿಲ್ಲ ಎನ್ನುವ ಕೊನೆ ಹಂತದಲ್ಲಿ ಅವುಗಳನ್ನು ಸಂತೆಯಲ್ಲಿ ಮಾರಾಟ ಮಾಡದೇ ಗೋ ಶಾಲೆಗೆ ತಂದು ಒಪ್ಪಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿನಿರ್ವಹಿಸಬೇಕು ಎಂದು ತಹಶೀಲ್ದಾರ್ ಸಂತೋಷ್ ಕುಮಾರ್ ಮನವಿ ಮಾಡಿದ್ದಾರೆ.
ಗೋವುಗಳಿಗೆ ಜೀವದಾನ: ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಿ ಜಿಲ್ಲೆಗೆ ಒಂದು ಗೋಶಾಲೆಯನ್ನು ಪ್ರಾರಂಭಿಸುತ್ತಿರುವುದು ಸ್ವಾಗತರ್ಹ ಸಂಗತಿಯಾಗಿದೆ.ಸಂಕಷ್ಟದ ಪರಿಸ್ಥಿತಿಯಲ್ಲಿರುವ ರೈತರು ಗಂಡು ಕರುಗಳು, ವಯಸ್ಸಾದ ಮತ್ತು ಅಂಗವೈಕಲ್ಯ ಜಾನುವಾರುಗಳನ್ನು ಮನೆಯಲ್ಲಿ ಸಾಕಲು ಸಾಧ್ಯವಾಗಪರಿಸ್ಥಿತಿಯಲ್ಲಿ ಮಾರಾಟ ಮಾಡುತ್ತಿದ್ದರು. ಈಗಗೋಶಾಲೆಯನ್ನು ಸರ್ಕಾರ ಪ್ರಾರಂಭಿಸುತ್ತಿರುವುದು ಅಂತಹ ಗೋವುಗಳಿಗೆ ಜೀವದಾನ ಮಾಡಿದಂತಾಗಿದೆ. ಎಂದು ರೈತ ಸಂಘದ ಮುಖಂಡ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಗೋವುಗಳ ಪಾಲನೆ, ಪೋಷಣೆಗೆ ಸೂಕ್ತ ವ್ಯವಸ್ಥೆ :
ರಾಜ್ಯ ಸರ್ಕಾರದಿಂದ ಪ್ರತಿ ಜಿಲ್ಲೆಯಲ್ಲೂ ಒಂದು ಗೋಶಾಲೆ ಸ್ಥಾಪಿಸುವ ಉದ್ದೇಶವಿದೆ. ಅರಸೀಕೆರೆ ತಾಲೂಕಿನ ಬೋರನಕೊಪ್ಪಲು ಪ್ರದೇಶ ಗೋಶಾಲೆ ಸ್ಥಾಪನೆಗೆ ಉತ್ತಮ ಪ್ರದೇಶವಾಗಿದೆ. ಫೆ.7ರಂದು ಸಚಿವರು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಶೆಡ್ ಕಟ್ಟಡ ಕಾಮಗಾರಿ, ಮೂಲ ಸೌಲಭ್ಯಗಳನ್ನು ಕಲ್ಪಿಸಿದ ನಂತರ ಗೋವುಗಳ ಪಾಲನೆ, ಪೋಷಣೆಗೆ ಸೂಕ್ತ ವ್ಯವಸ್ಥೆಯನ್ನು ಇಲಾಖೆವತಿಯಿಂದ ಮಾಡಲಾಗುವುದು. ಸಾರ್ವಜನಿಕರು ಸಾಕಲಾಗದ ಗೋವುಗಳನ್ನ ಇತರರಿಗೆ ಮಾರಾಟ ಮಾಡದೇ ಸರ್ಕಾರದ ಗೋ ಶಾಲೆಗೆ ತಂದು ಒಪ್ಪಿಸಿದರೆ ಆದರ ಪೋಷಣೆ ಮಾಡಲಾಗುತ್ತದೆ ಎಂದು ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕ ಡಾ.ರಮೇಶ್ ತಿಳಿಸಿದ್ದಾರೆ.
– ರಾಮಚಂದ್ರ