ಬೀದರ: ಮಹಿಳೆ ಮೇಲಾಗುವ ದೌರ್ಜನ್ಯ, ಅತ್ಯಾಚಾರ, ಶೋಷಣೆ ಹತ್ತಿಕ್ಕಲು ಪ್ರತಿ ಗ್ರಾಮ ಮಟ್ಟದಲ್ಲೂ ಜಾನಪದ ಘಟಕ ತೆರೆದು ಅಲ್ಲಿ ಕಲೆ, ಸಾಹಿತ್ಯ ಮತ್ತು ಸಂಗೀತ ಸಂರಕ್ಷಿಸುವುದು ಜಾನಪದ ಪರಿಷತ್ ಉದ್ದೇಶವಾಗಿದೆ ಎಂದು ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ|ಧನಲಕ್ಷ್ಮೀ ಪಾಟೀಲ ಹೇಳಿದರು.
ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ ಮನ್ನಳ್ಳಿ ವಲಯ ಮಹಿಳಾ ಘಟಕ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ಸಂಸ್ಕೃತಿ ಜೀವಂತವಾಗಿಡುವಲ್ಲಿ ಮಹಿಳೆ ಪಾತ್ರ ಪ್ರಮುಖವಾಗಿದೆ.
ಪ್ರಾಚೀನ ಕಾಲವನ್ನು ಜನಪದ ಕಾಲ ಎಂದು ಕರೆಯಲ್ಪಡುತ್ತದೆ. ಬೆಳಗ್ಗೆಯಿಂದ ಸಂಜೆವರೆಗೆ ಗರತಿ ತನ್ನ ಏರು ಧ್ವನಿಯಲ್ಲಿ ಯಾವುದಾದರೊಂದು ಹಾಡು ಹಾಡುತ್ತ, ಇಡೀ ಕುಟುಂಬವನ್ನು ಸಂತೋಷಪಡಿಸುತ್ತಿದ್ದರು. ಪರಸ್ಪರ ಪ್ರೀತಿ, ವಿಶ್ವಾಸ, ಐಕ್ಯತೆ ಹಾಗೂ ಮಾನವಿಯ ಮೌಲ್ಯಗಳ ಬೆಳವಣಿಗೆಗೆ ಜಾನಪದ ಬದುಕು ಶ್ರೇಷ್ಠವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ ಕಾರ್ಯದರ್ಶಿ ರಾಜಕುಮಾರ ಹೆಬ್ಟಾಳೆ ಮಾತನಾಡಿ, ಜಾನಪದ ಜೀವಂತಿಕೆಗೆ ಗ್ರಾಮೀಣ ಕಲಾವಿದರ ಕೊಡುಗೆ ಬಹಳಷ್ಟಿದೆ. ಆದರೆ ಯುವ ಕಲಾವಿದರ ಕೊರತೆ ಎದ್ದು ಕಾಣುತ್ತಿರುವ ಇಂದಿನ ದಿನಮಾನಗಳಲ್ಲಿ ನಗರ ಮತ್ತು ಪಟ್ಟಣಗಳಲ್ಲಿ ಯುವಜನರ ಸರ್ವಾಂಗಿಣ ವಿಕಾಸಕ್ಕೆ ಪಠ್ಯೇತರ ಚಟುವಟಿಕೆಗಳು ಹೆಚ್ಚು ಹಮ್ಮಿಕೊಳ್ಳುವ ಅಗತ್ಯತೆ ಇದೆ ಎಂದು ಹೇಳಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ರಾಜಕುಮಾರ ಪಸಾರ ಮಾತನಾಡಿ, ಈಗ ಯುವ ಜನರು ಮೊಬೈಲ್ ವೀಕ್ಷಣೆಯಲ್ಲಿ ಕಾಲಹರಣ ಮಾಡುತ್ತ ನೈಜ ಸಂಸ್ಕೃತಿ ಮರೆಯುತ್ತಿರುವರು. ಪಾಶ್ಚಾತ್ಯರು ನಮ್ಮ ಸಂಸ್ಕೃತಿ ಅನುಸರಿಸಿದರೆ ಭಾರತೀಯರು ಪರಕೀಯರ ಜೀವನ ಅನುಕರಿಸುತ್ತಿದ್ದು, ಇಂಥ ದುರಂತ ತಪ್ಪಿಸಬೇಕಿದೆ ಎಂದು ಹೇಳಿದರು.
ತಾಪಂ ಸದಸ್ಯ ಚಂದ್ರಕಾಂತ ಮಡಕಿ ಮಾತನಾಡಿ, ಜಿಲ್ಲೆಯಲ್ಲಿ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಜೀವಂತವಾಗಿಡಲು ಪರಿಷತ್ ಪಾತ್ರ ಬಹಳಷ್ಟಿದೆ. ಈ ಭಾಗದಲ್ಲಿ ಜಾನಪದ ಘಟಕಗಳ ಸ್ಥಾಪನೆಗೆ ಹಾಗೂ ದೇಶಿ ಸಂಸ್ಕೃತಿ, ಸಂಪ್ರದಾಯಗಳ ರಕ್ಷಣೆಗೆ ಸರ್ವ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪರಿಷತ್ ಬೀದರ ದಕ್ಷಿಣ ಕ್ಷೇತ್ರದ ಅಧ್ಯಕ್ಷ ರಾಜಕುಮಾರ ಮಡಕಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ರಾಗಾ, ಎನ್ಎಸ್ಎಸ್ಕೆ ನಿರ್ದೇಶಕ ಚಂದ್ರಕಾಂತ ವಗದಾಳೆ, ಎಪಿಎಂಸಿ ನಿರ್ದೇಶಕ ಅನಿಲ ಪನ್ನಾಳೆ, ಪ್ರಗತಿಪರ ರೈತ ವೀರಭೂಷಣ ನಂದಗಾಂವ, ಬಿಎಸ್ಎಸ್ಕೆ ನಿರ್ದೇಶಕ ಅಶೋಕ ಮೂಲಗೆ, ಪ್ರಮುಖರಾದ ಜಗನ್ನಾಥ ಮೂಲಗೆ, ಶಿವಶರಣಪ್ಪ ಗಣೇಶಪುರ, ಎಸ್.ಬಿ. ಕುಚಬಾಳ ಇದ್ದರು.
ಚನ್ನಬಸವ ಕಾಮಣ್ಣ ಸ್ವಾಗತಿಸಿದರು. ಶ್ರೀಕಾಂತ ತೂಗೆ ನಿರೂಪಿಸಿದರು. ವಿವೇಕಾನಂದ ಕೋಟೆ ವಂದಿಸಿದರು. ನಂತರ ಓಂ ಡ್ಯಾನ್ಸ್ ಅಕಾಡೆಮಿಯಿಂದ ಸುಗ್ಗಿ ಕುಣಿತ ಹಾಗೂ ಬರೂರ ರಾಮರೆಡ್ಡಿ ತಂಡದಿಂದ ಚಕ್ರ ಭಜನೆ ನಡೆಯಿತು.