Advertisement

ಪರ –ವಿರೋಧ ಆರಂಭ : ಇಂಗ್ಲೆಂಡ್‌ನ‌ಲ್ಲಿ ಶಿಕ್ಷಣ ಸಂಸ್ಥೆಗಳ ಆರಂಭ; ಅಧ್ಯಯನಕ್ಕೆ ನಿರ್ಧಾರ

02:14 PM Jun 10, 2020 | mahesh |

ಲಂಡನ್‌: ದೀರ್ಘ‌ಕಾಲದ ಲಾಕ್‌ಡೌನ್‌ನಿಂದ ಹೊರಬಂದು ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವ ಬಗ್ಗೆ ದೇಶದ ಜನರಲ್ಲಿ ಭಿನ್ನ ಅಭಿಪ್ರಾಯವಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಮಟ್ಟ್ ಹ್ಯಾನ್‌ಕಾಕ್‌ ಅವರು ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ವೈರಸ್‌ ಹರಡುವ ಬಗೆಗೆ ಅಧ್ಯಯನ ನಡೆಸಲು ನಿರ್ಧರಿಸಿದ್ದು, ಅದು ಈಗಾಗಲೇ ಆರಂಭವಾಗಿದೆ. ಕೋವಿಡ್ ಸಂಬಂಧಿ ಸಾವಿನಲ್ಲಿ ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿರುವ ಈ ರಾಷ್ಟ್ರದಲ್ಲಿ ಸೋಂಕಿನ ಎರಡನೇ ಅಲೆ ಕಾಣಸಿಕೊಳ್ಳದಿರಲು ಇಂಥದ್ದೊಂದು ಅಧ್ಯಯನದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

Advertisement

ಮಕ್ಕಳಲ್ಲಿ ಈ ಸೋಂಕು ಯಾವ ರೀತಿಯಲ್ಲಿ ಹರಡಲಿದೆ. ಯಾವೆಲ್ಲ ರೀತಿಯಲ್ಲಿ ಅದರ ಪ್ರಾಥಮಿಕ ಲಕ್ಷಣಗಳಿರಲಿವೆ ಅಥವಾ ಲಕ್ಷಣರಹಿತ ಸೋಂಕು ಇರಬಹುದೇ ಮತ್ತು ಎಷ್ಟು ಪರಿಣಾಮಕಾರಿಯಾಗಿ ಇನ್ನೊಬ್ಬರಿಗೆ ಹರಡಲಿದೆ ಎಂಬಿತ್ಯಾದಿ ಮಾಹಿತಿಗಳನ್ನು ಈ ಅಧ್ಯಯನದಲ್ಲಿ ಸಂಗ್ರಹಿಸಲಾಗುವುದು. ಇದಕ್ಕಾಗಿ ನಾವು ಹೆತ್ತವರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬಂದಿಯನ್ನು ಬೆಂಬಲಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ. ಆಯ್ದ ವಯೋಮಾನದ ವಿದ್ಯಾರ್ಥಿಗಳಿಗೆ ಈ ತಿಂಗಳ ಆರಂಭದಿಂದ ತರಗತಿ ನಡೆಸಲಾಗುವುದು ಎಂದು ನಿರ್ಧರಿಸಲಾಗಿತ್ತು. ಆದರೆ ಕೆಲವು ಶಿಕ್ಷಣ ಸಂಸ್ಥೆಯವರು ಸುರಕ್ಷೆಯ ಕಾರಣ ಮುಂದೊಡ್ಡಿ ಸಂಸ್ಥೆಯನ್ನು ತೆರೆಯಲು ಒಪ್ಪಿರಲಿಲ್ಲ. ಮತ್ತೂಂದು ಹಂತದಲ್ಲಿ ಜೂ. 15ರಿಂದ ತರಗತಿ ಆರಂಭವಾಗಬೇಕಿತ್ತು.

ಇಂಗ್ಲಂಡಿನ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಏಜೆನ್ಸಿಯು ಸ್ವಯಂಪ್ರೇರಿತ ಅಧ್ಯಯನ ನಡೆಸಲಿದ್ದು, ಸುಮಾರು 100 ಇಂಗ್ಲಿಷ್‌ ಶಾಲೆಗಳ ಸುಮಾರು 200 ಸಿಬಂದಿ ಮತ್ತು ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸಲಿದೆ. ಈ ಸಂದರ್ಭದಲ್ಲಿ ಪ್ರಸ್ತುತ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ತಿಳಿಯಲು ಗಂಟಲದ್ರವ ಪರೀಕ್ಷೆ ಮತ್ತು ಈ ಹಿಂದೆ ಸೋಂಕಿಗೆ ಒಳಗಾಗಿದ್ದಾರೆಯೇ ಮತ್ತು ರೋಗ ನಿರೋಧಕ ಶಕ್ತಿ ಹೇಗೆ ವೃದ್ಧಿಯಾಗಿದೆ ಎಂದು ತಿಳಿಯಲು ರಕ್ತ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ.

ಇದೊಂದು ಸಮುದಾಯ ಮಟ್ಟದಲ್ಲಿ ದೊಡ್ಡ ಸರಕಾರಿ ಕಾರ್ಯಕ್ರಮವಾಗಿರಲಿದ್ದು, ಹೊಸ ಪರೀಕ್ಷೆ ಮತ್ತು ಚಿಕಿತ್ಸೆಗೆ ಹೊಸ ನೀತಿ ರೂಪಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next