Advertisement

ಉಡುಪಿಯಲ್ಲಿ ಅಂಗವೈಕಲ್ಯ ಪತ್ತೆ ಕೇಂದ್ರ ಸ್ಥಾಪನೆ: ಆಯುಕ್ತ ಬಸವರಾಜ್‌

12:30 AM Feb 21, 2019 | |

ಉಡುಪಿ: ಜಿಲ್ಲೆಯ ಅಂಗವಿಕಲರ ಸಮಸ್ಯೆಗಳನ್ನು ತಳಮಟ್ಟದಲ್ಲಿಯೇ ಪರಿಹರಿಸಲು ಅನುಕೂಲವಾಗುವಂತೆ ಶೀಘ್ರ ಅಂಗವೈಕಲ್ಯ ಪತ್ತೆ ಹಚ್ಚುವ ಕೇಂದ್ರವನ್ನು (ಅರ್ಲಿ ಇಂಟರ್ವೆನ್ಶನ್‌ ಸೆಂಟರ್‌) ಆರಂಭಿಸಲಾಗುವುದು ಎಂದು ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತ ಬಸವರಾಜ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಮಕ್ಕಳಲ್ಲಿನ ಅಂಗವೈಕಲ್ಯಗಳನ್ನು ಪತ್ತೆಹಚ್ಚಲು ಪೋಷಕರು ಹಲವು ವೈದ್ಯರನ್ನು ಸಂದರ್ಶಿಸಬೇಕಾಗುತ್ತದೆ ಮತ್ತು ಸೂಕ್ತ ಚಿಕಿತ್ಸೆ ಕೊಡಿಸಲು ಹಲವು ಕಡೆ ತೆರಳಬೇಕಾಗುತ್ತದೆ. ಮಕ್ಕಳ ತಜ್ಞರು, ಮೂಳೆ ತಜ್ಞರು, ಫಿಸಿಯೋಥೆರಪಿಸ್ಟ್‌, ಆಡಿಯೋಲಾಜಿಸ್ಟ್‌, ಮಾನಸಿಕ ತಜ್ಞರು, ಸ್ಪೆಶಲ್‌ ಎಜುಕೇಟರ್‌ ಮೊದಲಾದ ತಜ್ಞರು ಒಂದೆಡೆ ಇರುವ ಕೇಂದ್ರ ಇದಾಗಿದೆ. ಆದ್ದರಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿ ಕೇಂದ್ರವನ್ನು ತೆರೆದರೆ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ. ಇಲ್ಲವಾದರೆ ಸಮೀಪದಲ್ಲಿಯಾದರೂ ಜಾಗ ಗುರುತಿಸಲು ತಿಳಿಸಿದ್ದೇನೆ. ಕಟ್ಟಡ ಕಟ್ಟುವವರೆಗೆ ಕಾಯದೆ ಇರುವ ಕಟ್ಟಡದಲ್ಲಿ ಆರಂಭಿಸಲು ತಿಳಿಸಿದ್ದೇನೆ ಎಂದರು.

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದೇನೆ. ವೈದ್ಯರು ರೋಗಿಗಳಿಗೆ ಮಾಹಿತಿಯನ್ನು ಕೊಟ್ಟರೆ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ. ಕೇಂದ್ರಕ್ಕೆ ಬರುವ ಮಗುವಿನ ಅಂಗವೈಕಲ್ಯವನ್ನು ಪತ್ತೆಹಚ್ಚಿ ಮಗುವಿಗೆ ನೀಡಬೇಕಾದ ಚಿಕಿತ್ಸೆ ಮತ್ತು ತರಬೇತಿ ಮತ್ತು ಪೋಷಕರಿಗೆ ಅಗತ್ಯ ಸಲಹೆ ನೀಡಲಾಗುವುದು. ಕೇಂದ್ರ ತೆರೆಯಲು ಜಾಗಕ್ಕಾಗಿ ಜಿಲ್ಲೆಯಿಂದ ರಾಜ್ಯಕ್ಕೆ ಪತ್ರ ಬರೆಯಲು ತಿಳಿಸಿದ್ದೇನೆ. ಜಿಲ್ಲಾ ಸರ್ಜನ್‌, ಜಿಲ್ಲಾ ಆರೋಗ್ಯಾಧಿಕಾರಿಯವರು ಒಪ್ಪಿದ್ದಾರೆ ಎಂದರು.

16,000 ಅಂಗವಿಕಲರು
ಜಿಲ್ಲೆಯಲ್ಲಿ ಸುಮಾರು 16,000 ಅಂಗವಿಕಲರಿದ್ದಾರೆ. ಗುರುತಿಸದವರು ಸೇರಿದಂತೆ ಒಟ್ಟು ಸಂಖ್ಯೆ 25,000 ಆಗಬಹುದು. ಅವರಿಗೆ ಪುನರ್ವಸತಿ ಆಗಬೇಕಾಗಿದೆ. ವಿಶೇಷವಾಗಿ ಅಂಗವಿಕಲರಿಗೆ ಗುಣ ಮಟ್ಟದ ಶಿಕ್ಷಣ ದೊರಕಬೇಕು. ವಿಶೇಷ ಶಾಲೆಗಳು ಕಡಿಮೆಯಾಗಿ ಸಾಮಾನ್ಯ ಶಾಲೆಗಳಲ್ಲಿ ಕಲಿಯುವಂತಾದರೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.

ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಅವರನ್ನು ಸರಿಯಾಗಿ ನೋಡುತ್ತಿಲ್ಲ, ಪಿಂಚಣಿ ದೊರಕುತ್ತಿಲ್ಲ ಎಂಬಿತ್ಯಾದಿ ದೂರುಗಳು ಪ್ರಗತಿ ಪರಿಶೀಲನ ಸಭೆಯಲ್ಲಿ ಬಂದಿವೆ. ಇದಕ್ಕೆ ವಿವಿಧ ಕಾರಣಗಳೂ ಇವೆ. ಇವುಗಳನ್ನು ಪರಿಹರಿಸಲಾಗುವುದು. ಎಂಡೋಸಲ್ಫಾನ್‌ಗೆ ಸಂಬಂಧಿಸಿ 36 ಹೊಸ ಪ್ರಕರಣಗಳು ಪತ್ತೆಯಾಗಿವೆ. ಗುರುವಾರ ಎಂಡೋಸಲ್ಫಾನ್‌ ಸಂತ್ರಸ್ತ ಪ್ರದೇಶಕ್ಕೆ ತೆರಳುತ್ತೇನೆ ಎಂದರು.ಸಹಾಯಕ ಆಯುಕ್ತ ಪದ್ಮನಾಭ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್‌, ಅಂಗವಿಕಲರ ಸಬಲೀಕರಣ ಇಲಾಖೆ ಅಧಿಕಾರಿ ನಿರಂಜನ ಭಟ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

ಅಂಗವಿಕಲರು ಸರಿಯಾದ ಶಬ್ದ
ವಿಕಲಾಂಗರು, ದಿವ್ಯಾಂಗರು, ವಿಶೇಷ ಚೇತನರು ಹೀಗೆ ವಿವಿಧ ಶಬ್ದಗಳನ್ನು ಬರೆಯಲಾಗುತ್ತಿದೆ. ಆದರೆ ಕಾಯಿದೆ ಪ್ರಕಾರ ಅಂಗವಿಕಲರು ಎಂಬುದೇ ಸರಿಯಾದ ಶಬ್ದ. ಇಲಾಖೆಯವರಿಗೂ ಅಂಗವಿಕಲರ ಸಬಲೀಕರಣ ಇಲಾಖೆ ಎಂದು ಬದಲಾಯಿಸಲು ಸೂಚಿಸಿದ್ದೇನೆ. ರಾಜ್ಯ ಮತ್ತು ರಾಷ್ಟ್ರದ ಇಲಾಖೆಗಳಿಗೂ ತಿಳಿಸುತ್ತೇವೆ. ಇತರ ಯಾವುದೇ ಶಬ್ದಗಳನ್ನು ಬರೆದರೂ ಉದ್ದೇಶ “ಡೈಲ್ಯೂಟ್‌’ ಆಗುತ್ತದೆ. ಬುದ್ಧಿಮಾಂದ್ಯರು ಎನ್ನುವುದು ಅಂಗವೈಕಲ್ಯದ ಒಂದು ವಿಧ. ಹೀಗೆ ಒಟ್ಟು 21 ಬಗೆ ಇದೆ. ಇವರನ್ನು “ಮಂದಬುದ್ಧಿಯವರು’ ಎಂದು ಕರೆಯುವಂತಿಲ್ಲ. 
– ಬಸವರಾಜ್‌

Advertisement

Udayavani is now on Telegram. Click here to join our channel and stay updated with the latest news.

Next