Advertisement
ಸರಸ್ವತಿ ಪ್ರತಿಮೆ ಜಾಗದಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪನೆ ವಿಚಾರ ಪ್ರತಿಷ್ಠೆಯಾಗಿ ಮಾರ್ಪಟ್ಟಿದ್ದು, ಸರಸ್ವತಿ ಪ್ರತಿಮೆ ಅಕ್ಕ ಪಕ್ಕದಲ್ಲಿ ಬುದ್ಧ ಹಾಗೂ ಬಸವಣ್ಣನ ಪ್ರತಿಮೆಯೂ ಪ್ರತಿಷ್ಠಾಪನೆ ಮಾಡಬೇಕು ಎಂಬ ವಿಚಾರದಲ್ಲಿ ಹಗ್ಗ ಜಗ್ಗಾಟ ನಡೆದಿದೆ.
Related Articles
Advertisement
ಸರಸ್ವತಿ ಪ್ರತಿಮೆ ಇರುವ ಜಾಗದಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪನೆ ಮಾಡಿರುವುದು ಯಾರು ಎಂಬುದು ಬೆಂವಿವಿ ಆಡಳಿತ ಮಂಡಳಿಯವರಿಗೆಲ್ಲರಿಗೂ ತಿಳಿದಿದೆ. ಸಿಸಿ ಕ್ಯಾಮೆರಾದ ದೃಶ್ಯಾವಳಿಗಳು ವಿವಿಯ ಬಳಿ ಇದೆ. ಆದರೆ, ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸರಸ್ವತಿ ಪ್ರತಿಮೆಯನ್ನು ಅಲ್ಲೇ ಪಕ್ಕದಲ್ಲಿ ಪ್ರತಿಷ್ಠಾಪಿಸಿ, ಆದರೆ, ಬುದ್ಧನ ಪ್ರತಿಮೆ ತೆಗೆಯಕೂಡದು ಎಂಬ ತಾಕೀತು ಕೂಡ ಹಾಕುತ್ತಿದ್ದಾರೆ ಮತ್ತು ಈ ವಿಚಾರದಲ್ಲಿ ಬೆಂವಿವಿ ತನ್ನ ಸಿಂಡಿಕೇಟ್ ನಿರ್ಣಯಕ್ಕೆ ತಕ್ಕಂತೆ ನಡೆದುಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ ಎಂದು ಹೇಳಲಾಗಿದೆ.
ಬುದ್ಧನ ಪ್ರತಿಮೆ ಎಲ್ಲಿಂದ ಬಂತು?: ಬುದ್ಧನ ಪ್ರತಿಮೆ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಪೀಠದ ಮುಂಭಾಗದಲ್ಲಿ ಬುದ್ಧನ ವಿಗ್ರಹ ಪ್ರತಿಷ್ಠಾಪಿಸಿ, ಬುದ್ಧವಿಹಾರ ನಿರ್ಮಿಸಲು ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿತ್ತು. ಅದಕ್ಕಾಗಿ ಬುದ್ಧನ ಕಲ್ಲಿನ ಪ್ರತಿಮೆಯನ್ನು ಕೆತ್ತಿಡಲಾಗಿತ್ತು.
ಆದರೆ, ವಿವಿಯ ತಾಂತ್ರಿಕ ಕಾರಣಗಳಿಂದಾಗಿ ಪ್ರತಿಮೆಯನ್ನು ಪ್ರತಿಷ್ಠಾಪಿಸಿರಲಿಲ್ಲ. ಇದೇ ಸಮಯನ್ನು ಬಳಸಿಕೊಂಡು ವಿಶ್ವವಿದ್ಯಾಲಯದ ಕೆಲವು ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿಕೊಂಡು ಸರಸ್ವತಿ ಪ್ರತಿಮೆ ಇದ್ದ ಜಾಗದಲ್ಲಿ ಬುದ್ಧನ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ.
ವಿವಾದ ಹೇಗಾಯ್ತು?: ಬುದ್ಧನ ವಿಗ್ರಹ ಪ್ರತಿಷ್ಠಾಪಿಸಲು ಪ್ರತ್ಯೇಕ ಸ್ಥಳ ಈಗಾಗಲೇ ನಿರ್ಧರಿಸಿದ್ದರೂ, ಸರಸ್ವತಿ ಪ್ರತಿಮೆ ಇರುವ ಜಾಗದಲ್ಲಿ ಅದನ್ನು ಏಕಾಏಕಿ ತಂದಿಟ್ಟು, ವಿವಾದ ಸೃಷ್ಟಿಸುವುದೇ ಅವರ ಉದ್ದೇಶವಾಗಿತ್ತು. ಅಲ್ಲದೆ, ಸರಸ್ವತಿ ಪ್ರತಿಮೆಗೂ ಬುದ್ಧನ ಪ್ರತಿಮೆಗೂ ಸಂಬಂಧವೇ ಇಲ್ಲ.
ಬೆಂವಿವಿ ಆಡಳಿತ ಕಚೇರಿಯ ಮುಂಭಾಗದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಇದೆ. ಗಾಂಧಿ ಅಧ್ಯಯನ ಪೀಠದಲ್ಲಿ ಗಾಂಧೀಜಿಯವರ ಪ್ರತಿಮೆ ಇದೆ. ಆಯಾ ವಿಭಾಗಕ್ಕೆ ಸಂಬಂಧಿಸಿದ ಜಾಗದಲ್ಲಿ ಪ್ರತಿಮೆ ಸ್ಥಾಪಿಸುವುದು ತಪ್ಪಲ್ಲ.
ಆದರೆ, ಸರಸ್ವತಿ ಪ್ರತಿಮೆ ಇರುವ ಜಾಗದಲ್ಲಿ ಬುದ್ಧನ ಪ್ರತಿಮೆ ಇಟ್ಟು ಅದನ್ನು ತೆಗೆಯಬಾರದು ಎಂದು ಆಡಳಿತ ಮಂಡಳಿಗೆ ತಾಕೀತು ಮಾಡುವುದು ನೋಡಿದರೆ, ಇಡೀ ಪ್ರಕರಣದ ಹಿಂದೆ ಯಾರೋ ಪ್ರಭಾವಿಗಳಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಉದ್ದೇಶ ಪೂರ್ವಕವಾಗಿಯೇ ಹೀಗೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವರದಿ ಕೇಳಿದ್ದೇನೆ – ಎಂ.ಬಿ.ಪಾಟೀಲ್: ಬೆಂಗಳೂರು ವಿವಿ ಆವರಣದಲ್ಲಿ ಸರಸ್ವತಿ ಮೂರ್ತಿ ತೆರವು ಮಾಡಿ ಬುದ್ಧ ಪ್ರತಿಮೆ ಸ್ಥಾಪನೆ ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿರುವ ವಿವಾದ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಂದ ವರದಿ ಕೇಳಿದ್ದೇನೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಯಾವುದೇ ಮೂರ್ತಿ ತೆಗೆದು ಬೇರೆ ಮೂರ್ತಿ ಸ್ಥಾಪನೆ ಮಾಡುವುದು ಸರಿಯಲ್ಲ. ಸರಸ್ವತಿ, ಬುದ್ಧ ಎಲ್ಲರ ಮೇಲೂ ಗೌರವವಿದೆ ಎಂದು ಹೇಳಿದರು. ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು. ಅಲ್ಲಿ ಯಾವುದೇ ವಿವಾದಕ್ಕೆ ಅವಕಾಶ ಮಾಡಿಕೊಡಬಾರದು. ಎಂದು ಸೂಚನೆ ನೀಡಲಾಗಿದೆ ಎಂದರು.
“ಬೆಂಗಳೂರು ವಿಶ್ವವಿದ್ಯಾಲಯ ಕುಲಸಚಿವರು ತಮ್ಮ ಕಚೇರಿ ಮುಂಭಾಗ ಭದ್ರತೆ ಒದಗಿಸುವಂತೆ ಕೋರಿದ್ದು ಸ್ಥಳೀಯ ಠಾಣೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ’-ರವಿ ಡಿ ಚೆನ್ನಣ್ಣವರ್, ಡಿಸಿಪಿ, ಪಶ್ಚಿಮ ವಿಭಾಗ