ಧಾರವಾಡ: ಅಂತರ್ಜಲ ಕುಸಿತ, ಕೃಷಿಗೆ ಕಲುಷಿತ ನೀರು ಬಳಕೆ ಮತ್ತು ಕೃಷಿಯಲ್ಲಿ ನೀರಿನ ಹೆಚ್ಚಿನ ಬಳಕೆಯಿಂದ ಭೂ ಫಲವತ್ತತೆ ನಾಶವಾಗುತ್ತಿದೆ ಎಂದು ಪರಿಸರ ಅರ್ಥಶಾಸ್ತ್ರಜ್ಞ ಡಾ| ಗೋಪಾಲ ಕಡೇಕೋಡಿ ಹೇಳಿದರು.
ವಾಲ್ಮಿ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಸ್ಥೆಯ 34ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೀರು ಮತ್ತು ನೆಲದ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು ಅನೇಕ ಸಂಶೋಧನೆಗಳನ್ನು ಕೈಕೊಂಡು ಕೆಲವು ಮಾದರಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಬೆಳೆಗೆ ಬೇಕಾದಷ್ಟು ನೀರನ್ನು ಮಾತ್ರ ಹೇಗೆ ಬಳಕೆ ಮಾಡಬೇಕು ಮತ್ತು ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ ಎನ್ನುವ ಬಗ್ಗೆ ಅಧ್ಯಯನಗಳನ್ನು ಕೈಕೊಳ್ಳಬೇಕಾಗಿದೆ. ರಾಜ್ಯದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳು ಇರುವುದರಿಂದ ಸಹಭಾಗಿತ್ವದಲ್ಲಿ ನೀರನ್ನು ಬಳಸಿ ಅಭಿವೃದ್ಧಿಯೆಡೆಗೆ ನಡೆಯಲು ಅನುಕೂಲವಾಗುತ್ತದೆ. ಹೀಗಾಗಿ ಹೆಚ್ಚಿನ ಅಧ್ಯಯನಕ್ಕಾಗಿ ವಾಲ್ಮಿಯಲ್ಲಿ ಜಲ ಪೀಠವನ್ನು ಸ್ಥಾಪಿಸುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ ಮಾತನಾಡಿ, ನೀರಿಲ್ಲದೆ ಬರಗಾಲ ಒಂದೆಡೆಯಾದರೆ ಅತೀ ನೀರಾವರಿಯಿಂದ ಭೂಮಿ ಹಾಳಾಗುತ್ತಿರುವುದು ಇನ್ನೊಂದೆಡೆಯಾಗಿದೆ. ಮುಂದಿನ ಜಾಗತಿಕ ಮಹಾಯುದ್ಧ ನೀರಿಗಾಗಿಯೇ ಎನ್ನುವಂತಾಗಿದೆ. ಇಂಥಹ ಸಂದರ್ಭದಲ್ಲಿ ನೀರು ಮತ್ತು ಮಣ್ಣಿನ ಸಂರಕ್ಷಣೆ-ಸದ್ಬಳಕೆ ಸಂಸ್ಥೆಗೆ ಸವಾಲಾಗಿ ಪರಿಣಮಿಸಿದೆ. ಜಾಗತಿಕ ಸರ್ವೇ ಪ್ರಕಾರ ಜಲ ಸಂಕಷ್ಟ ಮೊದಲನೇ ಸಮಸ್ಯೆಯಾಗಿದ್ದರೂ ಈ ವಿಷಯ ಚರ್ಚೆಗೆ ಬರದೇ ಇರುವುದು ವಿಷಾದನೀಯ ಎಂದು ಹೇಳಿದರು.
ಮಲಪ್ರಭಾ ಯೋಜನಾ ವಲಯದ ಮುಖ್ಯ ಅಭಿಯಂತ ಮಹಜರ ಜಾವೀದ ಮಾತನಾಡಿ, ಕೃಷಿಯಲ್ಲಿ ನೀರು ಮಿತವಾಗಿ ಬಳಸುವ ಅಗತ್ಯವಿದೆ. ಕಾಲುವೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿಯೇ ಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಕೃಷಿಗೆ ಲಭ್ಯವಿರುವ ಸ್ವಲ್ಪ ನೀರನ್ನು ತುಂತುರು ಮತ್ತು ಹನಿ ನೀರಾವರಿ ಪದ್ಧತಿಗಳನ್ನು ಅಳವಡಿಸಬೇಕಾದ ಅವಶ್ಯಕತೆ ಇದೆ ಎಂದರು.
ವಿಜಯಪುರ ಜಿಪಂ ಮಾಜಿ ಉಪಾಧ್ಯಕ್ಷ ಸುಮನ್ ಕೋಲಾರ ಮಾತನಾಡಿ, ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಜಲ ಮತ್ತು ನೆಲ ಸಂರಕ್ಷಣೆ ವಿಷಯವಾಗಿ ತರಬೇತಿ ಪಡೆಯುವ ಅವಶ್ಯಕತೆ ಇದೆ. ರಾಜ್ಯದಲ್ಲಿ ಅನೇಕ ಸ್ತ್ರೀ ಶಕ್ತಿ ಸಂಘಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜಲ-ನೆಲ ಸಂರಕ್ಷಣೆ ಕೆಲಸದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಡಾ| ಬಾಲಚಂದ್ರ ತೆಂಬೆ, ಎಸ್.ಡಿ. ನಾಯ್ಕರ್, ಆರ್.ಎ. ನಾಗಣ್ಣ ಮೊದಲಾದವರು ಭಾಗವಹಿಸಿದ್ದರು. ಜಲ-ನೆಲ ಕ್ಷೇತ್ರದ ಎಂಟು ಜನ ಸಾಧಕರಿಗೆ ಸನ್ಮಾನ ಮಾಡಲಾಯಿತು. ರವೀಂದ್ರ ಭಟ್ ನಿರೂಪಿಸಿದರು. ಕೃಷ್ಣಾಜಿರಾವ್ ವಂದಿಸಿದರು.