Advertisement

ಮೈಸೂರಲ್ಲಿ ಅತ್ಯಾಧುನಿಕ ರೇಷ್ಮೆ ಮಾರುಕಟ್ಟೆ ಸ್ಥಾಪನೆ

07:30 AM Feb 25, 2019 | |

ಮೈಸೂರು: ಮೈಸೂರು ಭಾಗದ ರೇಷ್ಮೆ ಬೆಳೆಗಾರರಿಗೆ ಸಮರ್ಪಕ ಮಾರುಕಟ್ಟೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ನಗರದಲ್ಲಿ ಎರಡು ಎಕರೆ ವಿಸ್ತೀರ್ಣದ ಜಾಗದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಉನ್ನತ ರೇಷ್ಮೆ ಮಾರುಕಟ್ಟೆ ಸ್ಥಾಪಿಸಲಾಗುವುದು ಎಂದು ರೇಷ್ಮೆ ಸಚಿವ ಸಾ.ರಾ.ಮಹೇಶ್‌ ಹೇಳಿದರು. ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ಥಾಪಿಸಿರುವ ನೂತನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು. 

Advertisement

ಮೈಸೂರು ರೇಷ್ಮೆ ಎಂದೇ ಹೆಸರಾಗಿದ್ದರೂ ಮೈಸೂರು ನಗರದ ಕೇಂದ್ರ ಭಾಗದಲ್ಲಿ ಸೂಕ್ತ ರೇಷ್ಮೆ ಗೂಡು ಮಾರುಕಟ್ಟೆ ಇಲ್ಲದಿರುವುದನ್ನು ಗಮನಿಸಿದ್ದು, ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ 36 ಸಾವಿರ ರೇಷ್ಮೆ ಬೆಳೆಗಾರರು ಹಾಗೂ 735 ವ್ಯಾಪಾರಸ್ಥರಿಗೆ ಮಾರುಕಟ್ಟೆ ಒದಗಿಸುವುದಾಗಿ ಮುಂಗಡ ಪತ್ರದಲ್ಲಿ ಘೋಷಿಸಿರುವುದಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.  

ಇ-ಹಣ ಪಾವತಿ: ರಾಜ್ಯದಲ್ಲಿ 55 ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಸ್ಥಾಪಿಸಲಾಗಿದ್ದು, ಈ ಪೈಕಿ 20 ಬಿತ್ತನೆಗೂಡು ಹಾಗೂ 35 ವಾಣಿಜ್ಯ ಮಾರುಕಟ್ಟೆಗಳಿವೆ. ರೇಷ್ಮೆ ಮಾರುಕಟ್ಟೆಯಲ್ಲಿ ಇ-ಹಣ ಪಾವತಿಯನ್ನು ರಾಮನಗರದಲ್ಲಿ ಮಾದರಿಯಾಗಿ ಈಗಾಗಲೇ ಪ್ರಾರಂಭಿಸಲಾಗಿದೆ. ಮೈಸೂರಿನಲ್ಲಿ ಕರ್ನಾಟಕ ರೇಷ್ಮೆ ನೇಯ್ಗೆ ಕಾರ್ಖಾನೆ ಇರುವುದರಿಂದ ರಾಮನಗರ ಭಾಗದಿಂದ ತರುವ ಬದಲಿಗೆ ಇಲ್ಲಿಂದಲೇ ಇ-ಹಣ ಪಾವತಿಗೆ ಸಹಾಯಕವಾಗಲಿದೆ ಎಂದು ಹೇಳಿದರು.
 
ಮನೆ ಬಾಗಿಲಿಗೆ ಮಾರುಕಟ್ಟೆ: ಅಧ್ಯಕ್ಷತೆವಹಿಸಿದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಈ ಭಾಗದ ರೇಷ್ಮೆ ಬೆಳೆಗಾರರು ಕೊಳ್ಳೇಗಾಲ ಅಥವಾ ರಾಮನಗರ ಮಾರುಕಟ್ಟೆಗೆ ಹೋಗಬೇಕಿತ್ತು. ಅದನ್ನು ತಪ್ಪಿಸಲು ಮನೆ ಬಾಗಿಲಲ್ಲೇ ಮಾರುಕಟ್ಟೆ ಸ್ಥಾಪಿಸಲಾಗಿದೆ ಎಂದರು. 

ಮೇಯರ್‌ ಪುಷ್ಪಲತಾ ಜಗನ್ನಾಥ್‌, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಸದಸ್ಯರಾದ ಸೋಮಣ್ಣ, ರಮೇಶ್‌ ಮುದ್ದೇಗೌಡ, ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ಉಪಾಧ್ಯಕ್ಷ ಚಿಕ್ಕಜವರಯ್ಯ, ನಿರ್ದೇಶಕರಾದ ಆನಂದ್‌, ಸಿದ್ದೇಗೌಡ, ಕೋಟೆಹುಂಡಿ ಮಹದೇವು, ಪ್ರಕಾಶ್‌, ಸದಸ್ಯರಾದ ನಾಗರಾಜು, ರೇಷ್ಮೆ ಅಭಿವೃದ್ಧಿ ಆಯುಕ್ತ ಕೆ.ಎಸ್‌.ಮಂಜುನಾಥ್‌, ರೇಷ್ಮೆ ಅಪರ ನಿರ್ದೇಶಕಿ ಶಾಂತಲಾ, ಕೆಎಸ್‌ಐಸಿ ಪ್ರಧಾನ ವ್ಯವಸ್ಥಾಪಕ ಕೃಷ್ಣಪ್ಪ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮೈಸೂರು ರೇಷ್ಮೆಗೆ ಜಾಗತಿಕ ಮಾರುಕಟ್ಟೆ: ಜಾಗತಿಕ ಮನ್ನಣೆಗಳಿಸಿರುವ ಮೈಸೂರು ರೇಷ್ಮೆಯನ್ನು ಟಿಪ್ಪುಸುಲ್ತಾನ್‌ ತನ್ನ ಕಾಲದಲ್ಲಿ ಪರಿಚಯಿಸಿದ್ದು ವಿಶೇಷ. ಮೈಸೂರು ರೇಷ್ಮೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ ಎಂದು ಸಚಿವ ಸಾ.ರಾ. ಮಹೇಶ್‌ ತಿಳಿಸಿದರು.

Advertisement

ರಾಮನಗರ, ಚನ್ನಪಟ್ಟಣ, ಚಾಮರಾಜನಗರ ಭಾಗಗಳ ರೇಷ್ಮೆ ಬೆಳೆಗಾರರ ಸಬಲೀಕರಣಕ್ಕೆ ಪ್ರೋತ್ಸಾಹಧನ ನೀಡಲಾಗುವುದು. ರೇಷ್ಮೆ ಉದ್ಯಮವು ರಾಜ್ಯದ 12 ಲಕ್ಷ ಕುಟುಂಬಗಳಿಗೆ ಜೀವನಾಧಾರವಾಗಿದೆ. ರಾಜ್ಯದ ಆರ್ಥಿಕತೆಯಲ್ಲೂ ಮಹತ್ತರವಾದ ಪಾತ್ರವಹಿಸಿರುವ ರೇಷ್ಮೆ ಬೆಳೆಗಾರರು ಹಾಗೂ ಅವಲಂಬಿತ ಕಾರ್ಖಾನೆಗೆ ಅಗತ್ಯ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next