ಗಜೇಂದ್ರಗಡ: ನೇಕಾರಿಕೆ ಉಳಿಸುವುದರ ಜೊತೆಗೆ ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಬದಾಮಿಯಲ್ಲಿ ಅಂತಾರಾಷ್ಟ್ರೀಯ ಕೈಮಗ್ಗ ಮಾರುಕಟ್ಟೆ ಸ್ಥಾಪನೆಗೆ ಸರಕಾರ ಮುಂದಾಗಬೇಕು ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಸರ್ಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ಮೈಸೂರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಅಖೀಲ ಭಾರತ ಕೈಮಗ್ಗ ನೇಕಾರರ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಪ್ರಸನ್ನ ಅವರ ಅಭಿನಂದನಾ ಸಮಾರಂಭ ಹಾಗೂ ಲಕ್ಷ್ಮವ್ವ ಕನಕೇರಿ ಸ್ಮಾರಕ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಮತ್ತು ನೇಕಾರಿಕೆಯನ್ನು ಬುನಾದಿಯನ್ನಾಗಿಸಿದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಸಾಧ್ಯವಾಗುತ್ತದೆ. ನೇಕಾರರಿಗೆ ಉತ್ಪಾದನೆ ಸಮಸ್ಯೆಯಲ್ಲ, ಬದಲಾಗಿ ಮಾರುಕಟ್ಟೆಯ ಸಮಸ್ಯೆಯಾಗಿದೆ. ಇದನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಸರಕಾರ ಬದಾಮಿ ಸುತ್ತಮುತ್ತ ಅಂತಾರಾಷ್ಟ್ರೀಯ ಕೈಮಗ್ಗ ಮಾರುಕಟ್ಟೆ ಸ್ಥಾಪನೆ ಮಾಡಿ, ಈ ಮಾರುಕಟ್ಟೆಯಲ್ಲಿ ರಾಜ್ಯದ ಎಲ್ಲ ನೇಕಾರರು ಬಾಗಿದಾರರಾಗಿ ನಡೆಯಬೇಕು. ಅದಕ್ಕೆ ಮೂಲ ಸೌಲಭ್ಯವನ್ನು ಸರಕಾರ ಕಲ್ಪಿಸಿ, ವಿಶ್ವದ ಎಲ್ಲ ಮಾರಾಟಗಾರರು ಬಂದು ಖರೀದಿಸುವಂತಾಗಬೇಕು. ಅಂದಾಗ ಮಾತ್ರ ನೇಕಾರಿಕೆ ಬೆಳೆಯಲು ಸಾಧ್ಯ ಎಂದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಬಲಹೀನತೆ ಬಗ್ಗೆ ಕಳೆದ ಎರಡು ವರ್ಷಗಳಿಂದ ತೀವ್ರ ಚರ್ಚೆಗಳಾಗುತ್ತಿವೆ. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಉತ್ತರ ಕರ್ನಾಟಕದವರೇ ಮೊದಲಿಗರಾಗಿದ್ದಾರೆ. ಆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಯಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಅಭಿವೃದ್ಧಿಯಿಂದ ಹಿನ್ನಡೆಯಾಗಿದೆ. ಕೃಷಿ ಮತ್ತು ನೇಕಾರಿಕೆಯನ್ನು ಹೊರತುಪಡಿಸಿದ ಆಲೋಚನೆಯೇ ಈ ಹಿನ್ನಡೆಗೆ ಕಾರಣವಾಗಿದೆ ಎಂದರು.
ನಿವೃತ್ತ ಉಪನ್ಯಾಸಕ ಬಿ.ಎ ಕೆಂಚರೆಡ್ಡಿ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಐ.ಎ. ರೇವಡಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು. ಸಂಗಪ್ಪ ಮಂಟೆ, ತಿಮ್ಮಣ್ಣ ವನ್ನಾಲ, ಸಿದ್ದಲಿಂಗಪ್ಪ ಕನಕೇರಿ, ಟಿ.ಎಸ್.ರಾಜೂರ, ವೀರಣ್ಣ ಬೇವಿನಮರದ, ಕೆ.ಎಸ್. ಗಾರವಾಡಹಿರೇಮಠ, ಎಂ.ಎಸ್. ಮಕಾನದಾರ, ಶರಣಮ್ಮ ಅಂಗಡಿ, ಎ.ಎನ್. ರೋಣದ, ಆರ್.ಕೆ. ಬಾಗವಾನ ಸೇರಿದಂತೆ ಇತರರು ಇದ್ದರು.