ಯಾದಗಿರಿ: ಜಿಲ್ಲೆಯಲ್ಲಿ ತಾಲೂಕಿಗೆ ಒಂದರಂತೆ ಜ್ವರ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಶನಿವಾರ ಕೋವಿಡ್-19 ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ಕನಿಷ್ಠ ಪಕ್ಷ ತಾಲೂಕಿಗೆ ಒಂದು ಜ್ವರ ತಪಾಸಣೆ ಕೇಂದ್ರ ಇರುವುದು ಸೂಕ್ತ. ಇದಲ್ಲದೇ ವಿಧಾನಸಭೆ ಕ್ಷೇತ್ರಕ್ಕೆ ಒಂದರಂತೆ ಸ್ಕ್ಯಾಬ್ ಸಂಗ್ರಹದ ಮೊಬೈಲ್ ವಾಹನ ಕಾರ್ಯ ನಿರ್ವಹಿಸಲು ಕ್ರಮ ವಹಿಸುವಂತೆ ಡಿಸಿಗೆ ಸೂಚಿಸಿದರು.
ಮುಂಬರುವ ದಿನಗಳಲ್ಲಿ ಕೊರೊನಾ ಹರಡುವಿಕೆ ತೀವ್ರ ಸ್ವರೂಪ ಪಡೆಯಬಹುದು ಎಂದು ಭಾವಿಸಿ ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಜ್ವರದ ಸೋಂಕು ಕಾಣಿಸಿಕೊಂಡ ಮತ್ತು ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರ ಪರೀಕ್ಷೆ ಮಾಡಬೇಕು ಮತ್ತು ಅವರ ಮೇಲೆ ನಿರಂತರ ನಿಗಾವಹಿಸಬೇಕು ಎಂದರು.
ಹೆಲ್ತ್ ವಾಚ್ ಆ್ಯಪ್ ಮೂಲಕ 2.57 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಿರುವುದು ಮೆಚ್ಚುಗೆಯ ಸಂಗತಿ. ಟಾಸ್ಕ್ಫೋರ್ಸ್ ಸಮಿತಿಗಳ ಮೂಲಕ ಹಿರಿಯ ನಾಗರಿಕರು ಮತ್ತು ಇತರ ರೋಗಿಗಳ ಮೇಲೆ ಸತತ ನಿಗಾವಹಿಸುವ ಮೂಲಕ ಜಿಲ್ಲಾಡಳಿತ ಆತಂಕ ನಿವಾರಿಸಿದೆ. ಗ್ರಾಮ ಮಟ್ಟದಲ್ಲಿ ಜನರ ಸಹಕಾರ ಉತ್ತಮವಾಗಿರುವುದು ಶ್ಲಾಘನೀಯ. ಹೊರಗಿನಿಂದ ಬಂದವರ ಮೇಲೆ ನಿಗಾ ವ್ಯವಸ್ಥೆ ಇದೇ ರೀತಿ ಮುಂದುವರಿದರೆ, ಕೊರೊನಾ ನಿಗ್ರಹ ಸಾಧ್ಯವಿದೆ ಎಂದು ಸಲಹೆ ನೀಡಿದರು. ಡಿಸಿ ಎಂ.ಕೂರ್ಮಾರಾವ್ ಮಾತನಾಡಿ, ಜಿಲ್ಲಾದ್ಯಂತ ಮತಗಟ್ಟೆ ಅಧಿಕಾರಿಗಳು, ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರಿಂದ “ಹೆಲ್ತ್ ವಾಚ್ ಆ್ಯಪ್’ ಮೂಲಕ ನಡೆಸುತ್ತಿರುವ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆ ಶೇ.90.60ರಷ್ಟು ಪೂರ್ಣಗೊಂಡಿದೆ ಎಂದು ತಿಳಿಸಿದರು.
ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ಶರಣಬಸಪ್ಪಗೌಡ ದರ್ಶನಾಪುರ, ಜಿಪಂ ಸಿಇಒ ಶಿಲ್ಪಾ ಶರ್ಮಾ, ಎಸ್ಪಿ ಋಷಿಕೇಶ ಸೋನಾವಣೆ ಮಾತನಾಡಿದರು. ಸಂಸದ ಡಾ| ಉಮೇಶ ಜಾಧವ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ| ಪಿ.ಜಿ. ಗಿರೀಶ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವಿಶೇಷ ಅಧಿಕಾರಿ ಡಾ| ಶಂಕರಗೌಡ ಐರೆಡ್ಡಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.