Advertisement
ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ರಾಜ್ಯದ ಸರಾಸರಿ ಫಲಿತಾಂಶ ಶೇ.75 ರಷ್ಟಿದ್ದು, ಮೈಸೂರು ಜಿಲ್ಲೆಯ ಸರಾಸರಿ ಫಲಿತಾಂಶ ಶೇ.72ರಷ್ಟಿತ್ತು.
Related Articles
Advertisement
ಅದರಲ್ಲೂ ಕೊಠಡಿ ಕೊರತೆ ಇದೆ, ಸಾಕಷ್ಟು ಪ್ರೌಢಶಾಲೆಗಳಲ್ಲಿ ಉಪ ಪ್ರಾಂಶುಪಾಲರ ಹುದ್ದೆಗಳು ಖಾಲಿ ಇವೆ. ಜತೆಗೆ ಸರ್ಕಾರಿ ಕಿರಿಯ ಕಾಲೇಜುಗಳಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ದುಡಿಮೆ ಮುಗಿಸಿದ ನಂತರ ಶಾಲೆಗೆ ಬರುವವರು, ಹೀಗಾಗಿ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದಿಲ್ಲ,
ನಿಯಮಿತವಾಗಿ ತರಗತಿಗೆ ಬರುವವರ ಸಂಖ್ಯೆಯೂ ಕಡಿಮೆ. ಹುಣಸೂರು ತಾಲೂಕಿನ ಬಿಳಿಕೆರೆ ಕಿರಿಯ ಕಾಲೇಜಿನಲ್ಲಿ ಎಷ್ಟೇ ಪ್ರಯತ್ನ ಹಾಕಿದರೂ ಅಲ್ಲಿನ 19 ವಿದ್ಯಾರ್ಥಿಗಳು ಉತ್ತೀರ್ಣರಾಗುವುದು ಕಷ್ಟ ಎಂದು ಉಪಾಧ್ಯಾಯರುಗಳು ತಿಳಿಸಿದ್ದಾರೆ.
ಆದರೂ ನಾವು ಜಿಲ್ಲೆಯಲ್ಲಿ ಶೇ.100 ಫಲಿತಾಂಶದ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿಯೇ ಈ ಬಾರಿ 9ನೇ ತರಗತಿ ಪರೀಕ್ಷೆಯನ್ನೇ ಕಠಿಣವಾಗಿಸಿದ್ದೆವು, ಆಸಕ್ತಿಯಿಂದ ಕಲಿಯುವ ಮಕ್ಕಳನ್ನೇ ಪ್ರತ್ಯೇಕಗೊಳಿಸಿ ಬೋಧನೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಒಂದು ವರ್ಷದ ಪ್ರಯತ್ನ ಸಾಲು: ಜಿಪಂ ಸಿಇಒ ಪಿ.ಶಿವಶಂಕರ್ ಪ್ರತಿಕ್ರಿಯಿಸಿ, ಎಸ್ಸೆಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ತರಬೇಕಾದರೆ, ಒಂದು ವರ್ಷದ ಪ್ರಯತ್ನ ಸಾಲದು. 8ನೇ ತರಗತಿಯಿಂದಲೇ ವಿಶೇಷ ಪ್ರಯತ್ನ ಹಾಕಬೇಕು. ಪೋಷಕರ ಸಭೆ ಕರೆದು ಅವರಿಗೂ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ವರದಿಕೊಡಿ: ಮತಗಟ್ಟೆ ಸ್ಥಾಪಿಸುವ ಶಾಲೆಗಳಲ್ಲಿ ನೀರು, ವಿದ್ಯುತ್, ಶೌಚಾಲಯ, ಅಂಗವಿಕಲರಿಗಾಗಿ ರ್‍ಯಾಂಪ್ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕು. ಫೆ.28ರೊಳಗೆ ಮತಗಟ್ಟೆ ಇರುವ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಿ ವರದಿ ಕೊಡುವಂತೆ ಎಲ್ಲಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು.
ತಾತ್ಕಾಲಿಕ ಸಂಖ್ಯೆ ನೀಡಿ: ಫೆ.25ರೊಳಗೆ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಬೇಕಿದೆ. ನಂಜನಗೂಡಲ್ಲಿ ಶೌಚಾಲಯ ನಿರ್ಮಿಸಿಕೊಡಲು ಪಡಿತರ ಚೀಟಿ ಕಡ್ಡಾಯ ಮಾಡಿರುವುದರಿಂದ ಅರ್ಜಿ ಹಾಕಿ ಇನ್ನೂ ಪಡಿತರ ಚೀಟಿ ಬಾರದವರಿಗೆ ತಾತ್ಕಾಲಿಕ ಸಂಖ್ಯೆಯನ್ನಾದರೂ ನೀಡಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಅವರಿಗೆ ಹೇಳಿದರು.
ಡೀಸಿ ವಿರುದ್ಧ ಬಸವಣ್ಣ ಗರಂ: ಮಳೆ ಅಭಾವದಿಂದ ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಸ್ಥಾಪಿಸಲಾದ ಮೇವುಬ್ಯಾಂಕ್‌ಗಳಿಗೆ ನಡೆಸಿದ ಮೇವು ಖರೀದಿಯಲ್ಲಿ ಹಣ ದುರುಪಯೋಗವಾಗಿದೆ ಎಂದು ಜಿಪಂ ನ ಹಲವಾರು ಸಭೆಗಳಲ್ಲಿ ಪ್ರಸ್ತಾಪಿಸಿದರೂ ಜಿಲ್ಲಾಧಿಕಾರಿಯವರು ಸಭೆಗೆ ಬಂದು ಉತ್ತರ ನೀಡುವುದಿಲ್ಲ. ವಿವರ ಕೇಳಿದರೆ, ನಿಯಮ ಹೇಳುತ್ತಾರೆ. ಜಿಲ್ಲೆಯ ದಂಡಾಧಿಕಾರಿಯಾಗಿ ಇವರ ಪಾತ್ರ ಏನು?
ಜಿಪಂ ವ್ಯವಸ್ಥೆ ಬಗ್ಗೆ ಅವರಿಗೇಕೆ ಇಷ್ಟೊಂದು ನಿರ್ಲಕ್ಷ್ಯ? ಜಿಪಂ ಸಭೆಗಿಂತ ಡೀಸಿ ದೊಡ್ಡವರಾ? ನಾವು ಕೂಡ ಜನರಿಂದ ಚುನಾಯಿತರಾಗಿ ಬಂದಿಲ್ಲವೇ? ಬರ ಪರಿಹಾರ ನಿಧಿಯನ್ನು ಏಳು ತಾಲೂಕುಗಳಿಗೂ ಹಂಚಿಕೆ ಮಾಡಿರುವ ಜಿಲ್ಲಾಧಿಕಾರಿಯವರು, ಮೇವು ಖರೀದಿಯಲ್ಲಿ ಹಣ ದುರುಪಯೋಗ ನಡೆದಿದೆ ಎಂದು ಆರೋಪ ಮಾಡಿದರೂ ಉತ್ತರ ಕೊಡದಿದ್ದರೆ ಹೇಗೆ ಎಂದು ಜಿಲ್ಲಾಧಿಕಾರಿ ರಂದೀಪ್ ಅವರು ಬರೆದಿದ್ದ ಪತ್ರವನ್ನು ಪ್ರದರ್ಶಿಸುತ್ತಾ ಹರಿಹಾಯ್ದರು.
ಕಂದಾಯ ಇಲಾಖೆ ಸಾಮಾಜಿಕ ಭದ್ರತಾ ಯೋಜನೆಯ ಸಹಾಯಕ ನಿರ್ದೇಶಕ ಅನಂತಕೃಷ್ಣ ಅವರಿಗೆ ಜಿಲ್ಲಾಧಿಕಾರಿಗಳ ಪರವಾಗಿ ಉತ್ತರ ನೀಡುವಂತೆ ತಾಕೀತು ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅನಂತಕೃಷ್ಣ, ಜಿಲ್ಲಾಧಿಕಾರಿಯವರ ಪರವಾಗಿ ನಾನು ಸಭೆಗೆ ಬಂದಿಲ್ಲ. ಹೀಗಾಗಿ ಅವರ ಪತ್ರದ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಆಗಲ್ಲ. ಸಾಮಾಜಿಕ ಭದ್ರತೆ ಯೋಜನೆಗಳ ಬಗ್ಗೆ ವರದಿ ನೀಡಲಷ್ಟೇ ನಾನು ಬಂದಿರುವುದು, ಇಷ್ಟವಿಲ್ಲ ಎಂದರೆ ಹೇಳಿ ನಾನೂ ಹೋಗುತ್ತೇನೆ ಎಂದರು.
ಡೀದಿ ಗಮನಕ್ಕೆ ತರುತ್ತೇನೆ: ಮಧ್ಯ ಪ್ರವೇಶಿಸಿದ ಆಹಾರ ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಅವರು, ಇದರಲ್ಲಿ ಸಂವಹನದ ಕೊರತೆ ಇದೆ. ಹಿಂದೆ ಕೂಡ ಜಿಲ್ಲಾ ಪಂಚಾಯ್ತಿಯಲ್ಲಿ ಈ ತರಹದ ಘಟನೆಗಳಾಗಿವೆ. ಡೀಸಿಯವರಿಗೆ ಸಭೆಗೆ ಬನ್ನಿ ಅಂದರೆ ಬರುತ್ತಾರೆ. ಇದಕ್ಕಾಗಿ ಉದ್ವೇಗಕ್ಕೆ ಒಳಗಾಗಿ ಮಾತನಾಡುವುದು ಬೇಡ. ನಾನು ಇಂದೇ ಈ ವಿಚಾರವನ್ನು ಡೀಸಿಯವರ ಗಮನಕ್ಕೆ ತರುತ್ತೇನೆ ಎಂದು ಸಮಾಧಾನಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಪಂ ಸಿಇಒ, ಈ ವಿಷಯ ಕಳೆದ 7-8 ತಿಂಗಳಿಂದ ಎಲ್ಲಾ ಸಭೆಗಳಲ್ಲೂ ಪ್ರಸ್ತಾಪವಾಗುತ್ತಿದೆ. ಅದೇ ಗ್ರಾಮದಲ್ಲಿ ಮೇವು ಖರೀದಿಸಿದ್ದರೂ ಸಾಗಣೆ ವೆಚ್ಚ ಸೇರಿಸಲಾಗಿದೆ ಎಂಬುದು ದೂರು ಎಂದು ವಿವರಿಸಿದರು.
ಬೀರಿಹುಂಡಿ ಗ್ರಾಮದಲ್ಲೇ ಮೇವು ಖರೀದಿಸಿ, ರಾಮನಗರದಿಂದ ಖರೀದಿಸಿ ತರಲಾಗಿದೆ ಎಂದು 125 ಕಿ.ಮೀ ಸಾಗಣೆ ವೆಚ್ಚವನ್ನು ಪಡೆಯಲಾಗಿದೆ. ಈ ಬಗ್ಗೆ ಉತ್ತರ ಕೇಳಿದರೆ, ವಿಪತ್ತು ನಿರ್ವಹಣೆ ಇಲಾಖೆ ಕಾರ್ಯದರ್ಶಿ ವ್ಯಾಪ್ತಿಗೆ ಬರುತ್ತದೆ. ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಉತ್ತರ ನೀಡಲಾಗಲ್ಲ ಎಂದು ಡೀಸಿ ಉತ್ತರ ಬರೆಯುತ್ತಾರೆ ಎಂದರೆ, ಪ್ರಶ್ನೆ ಮಾಡಲು ನಮಗೇನು ಉಳಿದಿದೆ. ಡೀಸಿಗೆ ಮತ್ತೆ ಪತ್ರ ಬರೆದು ಸಭೆಗೆ ಬಂದು ಉತ್ತರ ನೀಡಲು ಹೇಳಿ ಎಂದು ಸಿಇಒ ಗೆ ತಾಕೀತು ಮಾಡಿದರು.
ಇದಕ್ಕೆ ಉತ್ತರಿಸಿದ ಸಿಇಒ, ಕೆಡಿಪಿ ಸಭೆಗೆ ಡೀಸಿಯವರು ಸದಸ್ಯರಲ್ಲ, ಆಹ್ವಾನಿತರು ಮಾತ್ರ. ಬರಗಾಲದ ವಿಚಾರ ಇಲ್ಲಿ ಚರ್ಚೆ ಆಗುವುದಿಲ್ಲ. ಈ ಸಭೆಗೆ ತನ್ನದೇ ಆದ ಇತಿಮಿತಿ ಇದೆ. ಅಭಿವೃದ್ಧಿ ವಿಚಾರ ಚರ್ಚೆ ಮಾಡಬಹುದೇ ವಿನಾ, ತನಿಖೆ ಮಾಡಿ ಎಂದು ಕೇಳಲಾಗಲ್ಲ ಎಂದು ಸಮಜಾಯಿಷಿ ನೀಡಿದರು. ಇದರಿಂದ ಅಸಮಾಧಾನಗೊಂಡ ಬೀರಿಹುಂಡಿ ಬಸವಣ್ಣ ಸಭೆಯಿಂದ ಹೊರನಡೆದರು. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಲಕ್ಷಿ ರಾಜಣ್ಣ, ಜಿಪಂ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಹಾಜರಿದ್ದರು.