Advertisement
ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಫೆ. 15ರೊಳಗೆ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳು ಸೇರಿದಂತೆ ಇತರೆ ಕಡೆಗಳಲ್ಲೂ ಗೋಶಾಲೆ ಆರಂಭಿಸಬೇಕು ಎಂದರು.
Related Articles
Advertisement
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದು ಕೋಟಿ ರೂ. ಕುಡಿಯುವ ನೀರಿಗೆ ಬಂದಿದ್ದು, 3 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 1.33 ಕೋಟಿ ರೂ. ಖರ್ಚಾಗಿದೆ ಎಂದು ಸಿಇಒ ರವೀಂದ್ರ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಸಂಸದರು, ಸರ್ಕಾರ ಕೊಟ್ಟಿರುವ ಹಣವನ್ನು ಬೇಗ ಖರ್ಚು ಮಾಡಿ ಬಳಕೆ ಪ್ರಮಾಣಪತ್ರ ನೀಡಬೇಕು. ಆಗ ಮತ್ತಷ್ಟು ಅನುದಾನ ಬಿಡುಗಡೆ ಮಾಡಿಸಲು ಅನುಕೂಲವಾಗಲಿದೆ ಎಂದರು. ಸಚಿವ ವೆಂಕಟರಮಣಪ್ಪ, ಕುಡಿಯುವ ನೀರಿಗಾಗಿ ಎಷ್ಟೇ ಹಣ ಖರ್ಚಾದರೂ ತೊಂದರೆಯಿಲ್ಲ. ಬಿಡುಗಡೆ ಮಾಡಿಸೋಣ ಹೆದರಬೇಡಿ ಎಂದು ಭರವಸೆ ನೀಡಿದರು.
ಶುದ್ಧ ನೀರಿನ ಘಟಕ ಆರಂಭಿಸಲು ಟೆಂಡರ್ ಪಡೆದು ಆರು ತಿಂಗಳು ಕಳೆದರೂ ಹೈದರಾಬಾದ್ ಮೂಲದ ಸ್ಮಾರ್ಟ್ ಆಕ್ವಾ ಸಂಸ್ಥೆ ಇಂದಿಗೂ ಆರ್‌ಒ ಘಟಕ ಸ್ಥಾಪಿಸಿಲ್ಲ. ಆ ಸಂಸ್ಥೆ ಮೇಲೆ ಯಾಕೆ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ ಎಂದು ಶಾಸಕ ಚಂದ್ರಪ್ಪ ಸೇರಿದಂತೆ ಜಿಲ್ಲೆಯ ಬಹುತೇಕ ಶಾಸಕರು ಜಿಪಂ ಸಿಇಒಅವರನ್ನು ತರಾಟೆಗೆ ತೆಗೆದುಕೊಂಡರು.
ಸ್ಮಾರ್ಟ್ ಆಕ್ವಾ ಸಂಸ್ಥೆಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು ಉತ್ತರ ನೀಡುತ್ತಿಲ್ಲ. ಹಲವಾರು ಬಾರಿ ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಆದರೆ ವಿಳಾಸ ಸರಿಯಾಗಿಲ್ಲ ಎಂದು ಸಿಇಒ ಅಸಹಾಯಕತೆ ವ್ಯಕ್ತಪಡಿಸಿದರು.
ಇಡೀ ಜಿಪಂನಲ್ಲಿ ನಾವು ಏನೇ ಪ್ರಶ್ನೆ ಮಾಡಿದರೂ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುತ್ತದೆ, ಶಿಸ್ತುಕ್ರಮ ಜರುಗಿಸಲಾಗುತ್ತದೆ ಎನ್ನುವ ಸಬೂಬು ಉತ್ತರಗಳಿಂದ ಏನೂ ಪ್ರಯೋಜನವಿಲ್ಲ. ಸಂಸ್ಥೆ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಪೊಲೀಸ್ ದೂರು ನೀಡುವಂತೆ ಜಿಪಂನ ಬಿಜೆಪಿ ಸದಸ್ಯರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಎಷ್ಟು ಪಾಲಿಹೌಸ್, ಶೇಡ್‌ನಟ್‌ಗಳಿವೆ ಎಂಬ ಬಗ್ಗೆ ಸಮಗ್ರ ತನಿಖೆ ಮಾಡಿ ವರದಿ ಕೊಡುವಂತೆ ಒತ್ತಾಯಿಸಿದ್ದರೂ ಏಕೆ ನೀಡಿಲ್ಲ ಎಂದು ಶಾಸಕ ಚಂದ್ರಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರನ್ನು ಪ್ರಶ್ನಿಸಿದರು. ಕೂಡಲೇ ತನಿಖೆ ಮಾಡಿ ವರದಿ ನೀಡುವಂತೆ ಸಚಿವರು ಅಧಿಕಾರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೆರೆ, ಕಟ್ಟೆಗಳನ್ನು ಒತ್ತುವರಿ ಮಾಡಲಾಗಿದೆ. ಅದನ್ನು ತೆರವುಗೊಳಿಸಿ ಕೆರೆ ಅಂಗಳದಲ್ಲಿನ ಜಾಲಿ ಗಿಡ ತೆಗೆದು ಹೂಳೆತ್ತುವ ಕಾರ್ಯ ಮಾಡುವಂತೆ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒಗೆ ತಿಳಿಸಿದರು.
ನೂರು ಕೋಟಿ ರೂ.ಗಿಂತ ಅಧಿಕ ಹಣ ನರೇಗಾ ಅಡಿ ಬಾಕಿ ಇದೆ. ಕೂಲಿ ನೀಡದೆ ಕೆಲಸಕ್ಕೆ ಯಾರು ಬರುತ್ತಾರೆ, ಎಲ್ಲಿಯೂ ಕೆಲಸ ನಡೆಯುತ್ತಿಲ್ಲ ಎಂದು ಶಾಸಕರಾದ ರಘುಮೂರ್ತಿ, ತಿಪ್ಪಾರೆಡ್ಡಿ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಬಿ.ಎನ್. ಚಂದ್ರಪ್ಪ, ಕೇಂದ್ರ ಸರ್ಕಾರ 1200 ಕೋಟಿ ರೂ. ನರೇಗಾ ಬಾಕಿ ಹಣ ಬಿಡುಗಡೆ ಮಾಡಬೇಕಿದೆ. ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ ಎಂದರು.
ಸಭೆಯಲ್ಲಿ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಶಾಸಕರಾದ ಬಿ. ಶ್ರೀರಾಮುಲು, ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಶೇಖರ್, ವಿಧಾನಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ಜಯಮ್ಮ ಬಾಲರಾಜ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಎಸ್ಪಿ ಡಾ| ಕೆ. ಅರುಣ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.