ಹಿರೇಕೆರೂರ: ವಿದ್ಯಾರ್ಥಿಗಳು ಕಠಿಣ ಶ್ರಮದಿಂದ ವ್ಯಾಸಂಗ ಮಾಡಿ ಶೈಕ್ಷಣಿಕ ಅಭಿವೃದ್ಧಿ ಹೊಂದಿ, ಉನ್ನತ ಸಾಧನೆಗೈದು ದೇಶಕ್ಕೆ ಕೀರ್ತಿ ತರಬೇಕು ಎಂದು ಭಾರತೀಯ ಸೇನೆಯ ಕರ್ನಲ್ ಪುಟ್ಟನಗೌಡ ಸಾಂತಗೌಡ್ರ ಹೇಳಿದರು.
ರಟ್ಟೀಹಳ್ಳಿ ತಾಲೂಕಿನ ಸತ್ತಗೀಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರ ದೇಣಿಗೆಯಿಂದ ಪ್ರಾರಂಭಿಸಿದ ಸ್ಮಾರ್ಟ್‌ಕ್ಲಾಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಆಧುನಿಕ ಜಗತ್ತಿನಲ್ಲಿ ಶಿಕ್ಷಣ ಅತೀ ಅವಶ್ಯವಿದೆ. ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಮಕ್ಕಳು ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸಿಕೊಂಡು ಪ್ರಸ್ತುತದ ಮುಂದುವರೆದ ಜಗತ್ತಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಆಧುನಿಕತೆ, ವೈಜ್ಞಾನಿಕ ಮತ್ತು ತಾಂತ್ರಿಕತೆಯ ಅರಿವು ಮೂಡಿಸಿಕೊಳ್ಳಬೇಕು. ದೇಶದ ಬಗ್ಗೆ ಗೌರವ ಭಾವನೆ ಹೊಂದಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಕ್ಷೇತ್ರ ಸಮನ್ವಾಧಿಕಾರಿ ಜಗದೀಶ ಬಳಿಗಾರ ಮಾತನಾಡಿ, ಇಂದಿನ ಮಕ್ಕಳು ನಾಳಿನ ಅಮೂಲ್ಯ ರತ್ನಗಳು. ಗುಣಾತ್ಮಕ ಶಿಕ್ಷಣ ಪಡೆಯಲು ಅಗತ್ಯ ಸೌಲಭ್ಯಗಳು ಅವಶ್ಯವಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜವಾಬ್ದಾರಿ ತೋರಿ ಗ್ರಾಮದ ಯೋಧರಾದ ಪುಟ್ಟನಗೌಡ ಶಾಲೆಗೆ ದೇಣಿಗೆ ನೀಡಿರುವುದು ಸಂತಸದ ವಿಷಯ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ನಕುಲಪ್ಪ ಓಲೇಕಾರ, ಉಪಾಧ್ಯಕ್ಷೆ ವಿಶಾಲಾಕ್ಷಿ ಗಡದವರ, ಸುಮಾ ಸಾಂತಗೌಡ್ರ, ಗ್ರಾಪಂ ಸದಸ್ಯರಾದ ಬೂದಿಗೌಡ ಮರಿಗೌಡ್ರ, ನಾಗಮ್ಮ ಮೇದೂರ, ಶಿಕ್ಷಣ ಸಂಯೋಜಕ ಎನ್.ವಿ. ನಾಯಕ, ಸಿಆರ್‌ಪಿ ಎಚ್.ಬಿ.ಮಕರಿ, ಮುಖ್ಯಶಿಕ್ಷಕ ಎಸ್. ಶೇಖರಪ್ಪ, ಶಿಕ್ಷಕಿ ಎಸ್.ಎಂ.ಸೀತಿಕೋಡದ, ಶಿಕ್ಷಕ ಎಚ್.ಬಿ.ಸಾಂತಗೌಡ್ರ, ಚಂದ್ರಶೇಖರ ಸಾಂತಗೌಡ್ರ, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಮತ್ತು ಮಕ್ಕಳು ಇದ್ದರು.