Advertisement

ಶೀಗಂಧ ಮಂಡಳಿ ರಚನೆಗೆ ಅಗತ್ಯ ಕ್ರಮ

06:28 AM Feb 26, 2019 | |

ಬೆಂಗಳೂರು: ಕರ್ನಾಟಕ ಶ್ರೀಗಂಧ ಮಂಡಳಿ ರಚಿಸುವ ಮೂಲಕ ಶ್ರೀಗಂಧ ಬೆಳೆಯುವ ರೈತರಿಗೆ ಸೂಕ್ತ ರಕ್ಷಣೆ ಹಾಗೂ ಉತ್ತೇಜನ ನೀಡುವುದಾಗಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತಿಳಿಸಿದರು.

Advertisement

ಸ್ಯಾಂಡಲ್‌ವುಡ್‌ ಸೊಸೈಟಿ ಆಫ್ ಇಂಡಿಯಾ, ಮಲ್ಲೇಶ್ವರದ ಜೆ.ಎನ್‌.ಟಾಟಾ ಸಭಾಂಗಣದಲ್ಲಿ ಆಯೋಜಿಸಿದ್ದ “ಶ್ರೀಗಂಧದ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಪ್ರಾಮುಖ್ಯತೆ’ ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದರು.

ಶ್ರೀಗಂಧದ ನಾಡಾಗಿರುವ ಕರ್ನಾಟಕದಲ್ಲಿಯೇ ಶ್ರೀಗಂಧಕ್ಕೆ ಕೊರತೆ ಉಂಟಾಗಬಾರದು. ಶ್ರೀಗಂಧ ಬೆಳೆಯಿಂದಾಗಿ ರೈತರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಅಲ್ಲದೆ, ರಾಜ್ಯ ಮತ್ತು ರಾಷ್ಟ್ರದ ಆದಾಯವೂ ಹೆಚ್ಚಳವಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಕೂಡ ಶೀಗಂಧ ಬೆಳೆಯಲು ಮುಂದಾಗಬೇಕು ಎಂದು ಹೇಳಿದರು.

ಶ್ರೀಗಂಧ ಮಂಡಳಿ ಸ್ಥಾಪಿಸುವಂತೆ ಸ್ಯಾಂಡಲ್‍ವುಡ್‌ ಸೊಸೈಟಿ ಆಫ್ ಇಂಡಿಯಾ ಮನವಿ ಮಾಡಿದೆ. ಈ ಸಂಬಂಧ ಅರಣ್ಯ ಇಲಾಖೆಗೆ ವರದಿ ನೀಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ವರದಿ ಬಂದ ಬಳಿಕ ತಜ್ಞರೊಂದಿಗೆ ಚರ್ಚಿಸಿ ಶ್ರೀಗಂಧ ಮಂಡಳಿ ಸ್ಥಾಪನೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಹಿಂದಿನ ದಿನಗಳಲ್ಲಿ ಎಲ್ಲರೂ ಶ್ರೀಗಂಧ ಮರ ಬೆಳೆಯಲು ಕಾನೂನಿನಲ್ಲಿ ಅವಕಾಶವಿರಲಿಲ್ಲ. 2001ರಲ್ಲಿ ಕಾಯಿದೆಗೆ ತಿದ್ದುಪಡಿ ಶ್ರೀಗಂಧ ಬೆಳೆಯಲು ಅವಕಾಶ ಮಾಡಿಕೊಡಲಾಯಿತು. ಆ ನಂತರ ರಾಜ್ಯದಲ್ಲಿ ಶ್ರೀಗಂಧ ಬೆಳೆ ಪ್ರಗತಿ ಕಂಡಿದ್ದು, ಪ್ರಸ್ತುತ 35,000 ಎಕರೆ ಜಾಗದಲ್ಲಿ ಬೆಳೆಯಲಾಗುತ್ತಿದೆ.

Advertisement

ಇನ್ನು ಶ್ರೀಗಂಧ ಬೆಳೆಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ಶ್ರೀಗಂಧ ಗಿಡಕ್ಕೆ 100 ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಸದ್ಯ ಇರುವ ಶ್ರೀಗಂಧದ ತಳಿಗಳು ಫ‌ಲ ನೀಡುವುದು ಸಾಕಷ್ಟು ನಿಧಾನ. ಆದ್ದರಿಂದ ಹೊಸ ತಳಿಗಳನ್ನು ಸಂಶೋಧನೆ ಮಾಡುವುದಕ್ಕಾಗಿ ರಾಜ್ಯದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸುವುದಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದರು.

ಸೊಸೈಟಿಯ ಅಧ್ಯಕ್ಷ ಕೋದಂಡ ರಾಮಯ್ಯ, ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಟಿ.ಚಂದ್ರಶೇಖರ್‌, ನಿರ್ದೇಶಕ ಡಾ.ಕೆ.ಎಸ್‌.ಶಶಿಧರ್‌, ತಮಿಳುನಾಡು ಪ್ರಾದೇಶಿಕ ನಿರ್ದೇಶಕ ಡಾ.ಮುರುಘಾ ಸೆಲ್ವಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಶ್ರೀಗಂಧ ಬೆಳೆದ ಸಾಧಕರಿಗೆ ಪ್ರಶಸ್ತಿ: ಶ್ರೀಗಂಧ ಬೆಳೆಯಲ್ಲಿ ಅತ್ಯುತ್ತಮ ಸಾಧನೆಗೈದ ಹಾಗೂ ಶ್ರೀಗಂಧ ಬೆಳೆಯಲು ಪ್ರೋತ್ಸಾಹಿಸಿದ ಕುಷ್ಠಗಿಯ ಎಸ್‌.ದೇವೇಂದ್ರಪ್ಪ, ಬೆಂಗಳೂರಿನ ವೆಂಕಟೇಶಗೌಡ, ಕೋಲಾರದ ವೆಂಕಟಪ್ಪ, ಅರಕಲಗೂಡಿನ ಎನ್‌.ಸಿ.ರಂಗಸ್ವಾಮಿ, ಮುಂಬೈ ಕಿಶೋರ್‌ರಾಥೋಡ್‌, ಹರಿಹಬ್ಬೆಯ ಬಿ.ಎಸ್‌.ರಘುನಾಥ್‌, ಡಾ.ಪಂಕಜ ಅಗರವಾಲ್‌, ಆರ್‌.ಟಿ.ಪಾಟೀಲ್‌, ಕವಿತಾ ಮಿಶ್ರಾ, ವಿನಯ್‌ ಅವರುಗಳಿಗೆ “ಸಿರಿಗಂಧವನ ಪ್ರಶಸ್ತಿ’ಯನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಪ್ರದಾನ ಮಾಡಿ ಗೌರವಿಸಿದರು.

ಕಾಡ್ಗಿಚ್ಚಿನ ಹಿಂದೆ ಸ್ಥಳೀಯರ ಕೈವಾಡ?: ಬಂಡೀಪುರ ಕಾಡ್ಗಿಚ್ಚಿನ ಹಿಂದೆ ಸ್ಥಳೀಯರ ಕೈವಾಡವಿದೆ ಎಂದು ಅನುಮಾನವಿದೆ. ಈ ಕುರಿತು ತನಿಖೆ ನಡೆಸಿ ಯಾರದ್ದೇ ಕೈವಾಡ ಇದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next