Advertisement

ಫೆ.15ರಿಂದ ವೀರಗೋಟ್ದಲ್ಲಿ ಇಷ್ಟಲಿಂಗ ಪೂಜೆ

10:34 AM Jan 19, 2019 | |

ಲಿಂಗಸುಗೂರು: ದೇವದುರ್ಗ ತಾಲೂಕಿನ ವೀರಗೋಟ್ ಸುಕ್ಷೇತ್ರದಲ್ಲಿ ಫೆ.15ರಿಂದ 19ರವರೆಗೆ 1.96 ಲಕ್ಷ ಗಣ ಇಷ್ಟಲಿಂಗ ಪೂಜಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ ಎಂದು ವೀರಗೋಟದ ಅಡವಿಲಿಂಗ ಮಹಾರಾಜರು ಹೇಳಿದರು.

Advertisement

ಪಟ್ಟಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ನೆರವೇರಿಸಿದ ಇಷ್ಟಲಿಂಗ ಪೂಜೆಯನ್ನು 1969ರಲ್ಲಿ ಲಚ್ಯಾಣದಲ್ಲಿ ಸಂಗನಬಸವ ಮಹಾಶಿವಯೋಗಿಗಳ ನೇತೃತ್ವದಲ್ಲಿ ಇಂತಹ ಪೂಜೆ ನೆರವೇರಿಸಲಾಗಿತ್ತು. ಇದರ 50ನೇ ವರ್ಷದ ಸ್ಮರಣೋತ್ಸವ ಅಂಗವಾಗಿ ದೇವದುರ್ಗ ತಾಲೂಕಿನ ವೀರಗೋಟ್ ಸುಕ್ಷೇತ್ರದಲ್ಲಿ 1.96 ಲಕ್ಷ ಗಣ ಇಷ್ಟಲಿಂಗ ಪೂಜಾ ಸಮಾರಂಭ ಆಯೋಜಿಸಲಾಗಿದೆ. ವಿಶ್ವಶಾಂತಿಗಾಗಿ, ಬರ ತೊಲಗಿ ಸಕಾಲಕ್ಕೆ ಮಳೆಯಾಗಿ ಸಮೃದ್ಧಿ ನೀಡಲಿ ಎನ್ನುವ ಉದ್ದೇಶದಿಂದ ಇಷ್ಟಲಿಂಗ ಪೂಜೆ ನೆರವೇರಿಸಲಾಗುತ್ತಿದೆ ಎಂದರು.

ಸಮಾರಂಭ ನಡೆಸುವ ಉದ್ದೇಶದಿಂದ ವೀರಗೋಟ್ ಗ್ರಾಮದಲ್ಲಿನ ರೈತರು ಸ್ವಯಂ ಪ್ರೇರಿತವಾಗಿ 1200 ಎಕರೆ ಜಾಗ ಒದಗಿಸಿದ್ದಾರೆ. ವೇದಿಕೆಗಾಗಿ 225*80 ಅಡಿ ಅಳತೆಯಲ್ಲಿ ವೇದಿಕೆ ನಿರ್ಮಿಸಲಾಗುತ್ತಿದೆ. 65 ಎಕರೆಯಲ್ಲಿ ಇಷ್ಟಲಿಂಗ ಪೂಜೆ ನಡೆಸಲಾಗುತ್ತಿದೆ. 11 ಸಾವಿರ ಭಕ್ತರು ಏಕಕಾಲಕ್ಕೆ ಕೂರಲು ಒಟ್ಟು 19 ಕೌಂಟರ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದರ ಪಶ್ಚಿಮಕ್ಕೆ 200 ಎಕರೆ ಜಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ತಿಂಥಣಿ ಬ್ರಿಜ್‌ ಆ ಭಾಗದಲ್ಲಿ 500 ಎಕರೆ ಜಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. 200 ಎಕರೆ ಜಾಗದಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಬಂಕಲದೊಡ್ಡಿಯಲ್ಲಿನ ಪಾರ್ಕಿಂಗ್‌ ಸ್ಥಳದಿಂದ ವೇದಿಕೆವರೆಗೆ 50 ಬಸ್‌ ವ್ಯವಸ್ಥೆ ಮಾಡಲಾಗಿದೆ. ವಿವಿಪಿ ಹಾಗೂ ಸ್ವಾಮೀಜಿಗಳಿಗೆ ವಿಶೇಷ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಸಮಾರಂಭಕ್ಕೆ 1100ಕ್ಕೂ ಅಧಿಕ ಮಠಾಧೀಶರು ಆಗಮಿಸಲಿದ್ದಾರೆ. ಮಠಾಧೀಶರಿಗಾಗಿ ಅಮರೇಶ್ವರ ಸುಕ್ಷೇತ್ರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದ 224 ಶಾಸಕರಿಗೂ ಆಹ್ವಾನ ನೀಡಲಾಗಿದೆ. ಈ ಸಮಾರಂಭಕ್ಕೆ 25 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭಕ್ಕೆ ಆಗಮಿಸಬೇಕು ಎಂದರು.

ಮುಖಂಡರಾದ ವೆಂಕಟೇಶ ಗುತ್ತೇದಾರ, ಶಿವಣ್ಣ ಕೋಠಾ, ಸಿದ್ದಲಿಂಗಯ್ಯಸ್ವಾಮಿ, ಶಾಂತಯ್ಯ, ಬಸವರಾಜ, ಶಿವನಗೌಡ, ಮಹಾದೇವಪ್ಪ ಪೇರಿ, ಬಾಬು ಗುರುಗುಂಟಾ ಹಾಗೂ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next