Advertisement
“ನಿದ್ದೆಯಿಲ್ಲದೇ ಬೆಳಗಾಗೋತು ಮಾರಾಯ’ ಎಂಬ ಮಾತು ನಮ್ಮ ಮಲೆನಾಡಲ್ಲೆಲ್ಲ ಕೇಳಿಬರುವುದು ಹೊಸದೇನಲ್ಲ. ಒಮ್ಮೊಮ್ಮೆ ನಿದ್ದೆ ವಿವಿಧ ಕಾರಣಗಳಿಂದ ಬರುವುದೇ ಇಲ್ಲ. ಅದು ಅವರವರು ಆ ರಾತ್ರಿ ತೊಡಗಿಸಿಕೊಂಡ ಕೆಲಸಗಳಿಗೂ ಅವರವರ ಆ ಹೊತ್ತಿನ ಮೂಡುಗಳಿಗೆ ಸಂಬಂಧಿಸಿರುತ್ತದೆ. ರಾತ್ರಿಯಿಡೀ ಯಕ್ಷಗಾನವನ್ನು ಬಿಟ್ಟ ಕಣ್ಣು ಬಿಟ್ಟು ನೋಡಿ ಮರುದಿನ ಆಫೀಸಿನಲ್ಲಿ ಕಂಪ್ಯೂಟರಿನ ಮುಂದೆ ಕುಳಿತರೆ ಕಣ್ಣು ಮುಷ್ಕರ ಹೂಡದೇ ಮತ್ತೇನು? ವಿನಾಕಾರಣವೋ ಸಕಾರಣವೋ ಯಾವುದೋ ಚಿಂತೆಯನ್ನು ತಲೆಬುರುಡೆಯೊಳಗೆ ಬಿಟ್ಟುಕೊಂಡರೆ ರಾತ್ರಿ ಹೊರಳಾಡಿ ಬೆಳಗು ಮಾಡುವುದೇ ಕೆಲಸ. ಇನ್ನು ನಾವು, ಭವಿಷ್ಯದ ಭವ್ಯ ಭಾರತದ ಸುಭದ್ರ ಕಂಬಗಳು. ಎಲ್ಲರನ್ನೂ ಎಳೆದು ತಂದು ನಮ್ಮನ್ನು ಹೊರಗಿಡಬಹುದೆ? ತಪ್ಪು ತಪ್ಪು. ಆ ನಿದ್ದೆಯನ್ನು ಎಂಟು ತಾಸಿಗೂ ಮಿಕ್ಕು ಮಾಡಿದರೂ ಸಹ ಕ್ಲಾಸುಗಳಲ್ಲಿ ಕಣ್ಣೆಳೆಯುವುದುಂಟು. ಹಾ, ಇದಕ್ಕೆ ಉಪನ್ಯಾಸಕರ ಕೊರೆತವೇ ಕಾರಣ ಎಂದರೆ ಜೋಕೆ! ಶಾಟೇìಜ್ ಲೀಸ್ಟಿನಲ್ಲಿ ಹೆಸರು ಬರಬಹುದು. ಇನ್ನು ನಮ್ಮಂತಹ ಪ್ರೇಮಿಗಳ ಕತೆ, ಅಯ್ಯೋ ಕೇಳಬೇಡಿ. ಪರೀಕ್ಷೆಯ ಹಿಂದಿನರಾತ್ರಿ ಗಂಟೆ ಮೂರರವರೆಗೂ ಒಮ್ಮೊಮ್ಮೆ ನಿದ್ದೆ ಬಿಟ್ಟು ಸರ್ಕಸ್ಸು ಮಾಡಿದ್ದುಂಟು. ರಿಸಲ್ಟ್ ಏನಾಯಿತೆಂದು ಕೇಳಿದರೆ ಖಂಡಿತ ಹೇಳಲ್ಲ.
Related Articles
Advertisement
ಕೆಲವು ಸಂಗೀತ ಕಛೇರಿಗಳು ಗಡದ್ದಾಗೇ ನಿದ್ದೆಯನ್ನು ಹೊತ್ತುತರುತ್ತವೆ. ಅಂದ ಹಾಗೆ ನಿದ್ರಾಹೀನತೆಗೆ ದರ್ಬಾರ್, ಕಾಫಿ, ಮತ್ತು ಖಮಾಜ್ ರಾಗಗಳು ಸಿದೌœಷಧವಂತೆ. ನಿದ್ದೆಮಾಡುವುದಕ್ಕೂ ನಿದ್ದೆ ಹೋಗುವುದಕ್ಕೂ ಎಂಥ ವ್ಯತ್ಯಾಸವಿರಬಹುದು? ನಂಗಂತೂ ಗೊತ್ತಿಲ್ಲ. ಈ ಲೇಖನವನ್ನು ಅಷ್ಟೆಲ್ಲ ಡೀಪ್ ಆಗಿ ಬರೆಯಬೇಕೆಂದು ಅಂದುಕೊಂಡವನೇ ಅಲ್ಲ. ಲೇಖನ ಬರೆಯುವ ಡೆಡ್‌ಲೈನ್ ಬಂದಾಗ ನಿದ್ದೆ ಬಿಟ್ಟು ಬರೆಯುತ್ತಿದ್ದೀನೀಗ. ನಾವು ಬಿಟ್ಟರೂ ನಿದ್ದೆ ನಮ್ಮನ್ನು ಬಿಡುತ್ತದೆಯೇ? ನಮ್ಮ ಮೇಲೆ ಆವಾಹನೆಯಾಗಲು ಆಕೆ ಸದಾಕಾಲ ತುದಿಕಾಲಲ್ಲಿ ನಿಂತಿರುತ್ತಾಳೆ. ಅವಳಿಗೆ ಮಾಡಲು ನಮ್ಮ ಹಾಗೆ ಮತ್ತೇನು ಕೆಲಸ? ನಿದ್ದೆಯೇ ಅವಳ ಕೆಲಸ.
ಮತ್ತೂಂದು ವಿಷಯವುಂಟು, ನಿದ್ದೆ ಮಾಡುವಾಗ ಏನಾದರೂ ಬಿದ್ದರೆ ಅದಕ್ಕೆ ಕನಸು ಎಂದು ಹೆಸರು. ಅಯ್ಯೋ ಮೈಮೇಲೆ ಬಿದ್ದರೆ ಅಂತ ತಿಳಿದುಕೊಂಡೀರಿ, ಮೈಮೇಲೆ ಹಳೆಯ ಕನ್ನಡ ಸಿನೆಮಾಗಳ ಥರ ನಾವು ಏಳಲಿ ಎಂದು ಅಮ್ಮ ತಣ್ಣೀರನ್ನು ಎರಚಬಹುದು. ಅದಲ್ಲ, ನಿದ್ದೆಯಲ್ಲಿ ಏನಾದರೂ ಬಿದ್ದರೆ ಅದು ಕನಸು-ಸ್ವಪ್ನ ಅಂತೆಲ್ಲ ಪ್ರಾಜ್ಞರು ಕರೆದಿ¨ªಾರೆ. ಪ್ರಾಜ್ಞರು ಅಂದರೆ ಯಾರು ಅಂತ ಕೇಳಬೇಡಿ ಮತ್ತೆ, ಅವರು ಅವರೇ. ನನಗೂ ಗೊತ್ತಿಲ್ಲ.
ಗೋಡೆಗೆ ನೇತುಬಿದ್ದ ಫೋಟೋಗಳಲ್ಲೆಲ್ಲ ನೋಡುತ್ತೇವಲ್ಲ, ಕ್ಷೀರಸಾಗರದಲ್ಲಿ ಶೇಷನ ಮೇಲೆ ಮಲಗಿರುವ ಸ್ಥಿತಿಕರ್ತ ಶ್ರೀಮನ್ನಾರಾಯಣನೂ ಆಗಾಗ ಅಲ್ಲಲ್ಲೇ ತೂಕಡಿಸುತ್ತಾನಂತೆ. ನಿದ್ದೆ ಮಾಡುವುದು ಒಂದು ಕಲೆ. ಅದು ಗಾಢನಿದ್ದೆಯಾದರೂ ಸರಿ, ತೂಕಡಿಕೆಯಾದರೂ ಸರಿ. ಅಥವಾ ಒಂದು ಕಣ್ಣು ತೆರೆದು ಒಂದು ಕಣ್ಣು ಮುಚ್ಚಿ ಮಾಡಿದರೂ ಸರಿ. ಅಯ್ಯೊ ಇದೆಂಥ ಮಹಾ! ಒಬ್ಬೊಬ್ಬರು ಎರಡೂ ಕಣ್ಣು ತೆರೆದೇ ನಿದ್ದೆ ಮಾಡುವುದುಂಟು. ಮತ್ತೆ ಕೆಲವರು ನಿದ್ದೆಯಲ್ಲೇ ವಾಕಿಂಗ್ ಹೋಗುವುದೂ ಉಂಟು. ಅವರೆಲ್ಲ ಮಹಾನ್ ಕಲಾವಿದರು ಬಿಡಿ. ಇದನ್ನು ಸ್ವಿಪ್ಟ್ ಹಕ್ಕಿಯೇನಾದರೂ ಕೇಳಿದರೆ ತಕರಾರರ್ಜಿ ಹಾಕೀತು ಜೋಕೆ! ಅದು ಮೋಡದೆತ್ತರದಲ್ಲಿ ಹಾರುತ್ತ ಹಾರುತ್ತಲೇ ನಿದ್ದೆಮಾಡುತ್ತದೆಯಂತೆ. ಎಷ್ಟು ಮಜಾವಾಗಿರಬಹುದು. ಇನ್ನು ಪ್ಲೆಮಿಂಗೋ ಎಂಬ ವಿಚಿತ್ರ ಪಕ್ಷಿಯೋ, ಒಂಟಿ ಕಾಲಲ್ಲಿ ಘೋರ ತಪಸ್ಸಿಗೆ ನಿಂತವರ ಹಾಗೆ ನಿಂತು ನಿದ್ರಿಸುತ್ತದಂತೆ! ಎರಡೂ ಕಾಲು ಬಳಸಿ ನಿದ್ರಿಸಲು ಯಾವ ಕಷ್ಟವೋ ಅದನ್ನೇ ಕೇಳಬೇಕು. ಇನ್ನು ನಮ್ಮ ನಿಮ್ಮ ಮನೆಯ ಮುದ್ದಿನ ಬೆಕ್ಕನ್ನು ಮರೆಯಲಾದೀತೇ?! ಇಡೀ ದಿನ ಬೆಚ್ಚನೆಯ ಒಲೆಯ ಮುಂದೆ ಕುಳಿತು ಧ್ಯಾನವನ್ನೋ ನಿದ್ದೆಯನ್ನೋ ಮಾಡುತ್ತಿರುತ್ತದೆ. ಒಟ್ಟಿನಲ್ಲಿ ಕಣ್ಣಂತೂ ಅರ್ಧಮರ್ಧ ಮುಚ್ಚಿರುತ್ತದೆ ಅಥವಾ ತೆರೆದಿರುತ್ತದೆ.
ಇಷ್ಟೆಲ್ಲ ನಿದ್ರಾಪುರಾಣ ಓದುತ್ತ ಓದುತ್ತ ನೀವು ನಿದ್ರೆಹೋದರೆ ನಾನು ಜವಾಬ್ದಾರನಲ್ಲ. ನಿದ್ದೆಯ ಮಹತ್ವವೇ ಅಂಥದ್ದು. ಪಕ್ಕದಲ್ಲಿದ್ದವನು ಆಕಳಿಸಿದರೆ ಶುರು ನನಗೂ ಆಕಳಿಕೆ. ಈ ಆಕಳಿಕೆಯೇ ನಿದ್ದೆಯ ಸೂಚನೆ. ನಾನು ಬರುತ್ತಿದ್ದೇನೆ, ನಾನು ಬರುತ್ತಿದ್ದೇನೆ ಎಂದು ಮುಂದೆ ಆಕಳಿಕೆಯನ್ನು ಡಂಗುರ ಬಾರಿಸಲು ಕಳಿಸಿ ನಿದ್ದೆ ಹಿಂದಿಂದ ಓಡೋಡಿ ಬರುತ್ತದೆ. ನೇರಾನೇರ ಬರಲು ಅದಕ್ಕೊಂಥರಾ ಮುಜುಗರ ಇರಬೇಕು. ಹೂಂ, ನನಗೂ ಕಣ್ಣೆಳೆಯುತ್ತಿದೆ. ಹಾಸಿಗೆ ಕರೆಯುತ್ತಿದೆ. ನಿದ್ರಾದೇವಿಯ ಕೃಪಾಕಟಾಕ್ಷ ಇದನ್ನು ಬರೆದ ನನ್ನನ್ನೂ ಓದಿದ ನಿಮ್ಮನ್ನೂ ಬಿಟ್ಟೂಬಿಡದೆ ಪೊರೆಯಲಿ ಎಂಬುದು ಮಾತ್ರವೇ ನನ್ನ ಹಾರೈಕೆ.
ಗುರುಗಣೇಶ ಡಬ್ಲುಳಿ