Advertisement
ನನಗೆ ಮೋಡ ಅಂದ್ರೆ ಅದೇನೋ ಆನಂದ. ಹೇಳತೀರದ ಸಂತೋಷ. ರಜಾ ದಿನಗಳಲ್ಲಿ ಸಂಜೆ ಯಾವಾಗ ಆಗುವುದೋ ಎಂದು ಕಾದಿರುತ್ತೇನೆ. ಏಕೆಂದರೆ ಆ ಸಂದರ್ಭದಲ್ಲಿ ಮೋಡಗಳನ್ನ, ಆಕಾಶವನ್ನ ನೋಡೋ ಮಜಾನೇ ಬೇರೆ. ಅದನ್ನ ಅನುಭವಿಸಿದವರಿಗೆ ಮಾತ್ರ ಗೊತ್ತು. ಅದು ಎಷ್ಟು ಮಾದಕ ಅಂತ. ಸೂರ್ಯೋದಯದ ಸಂದರ್ಭದಲ್ಲೂ ಈ ರೀತಿಯ ಸವಿಯನ್ನ ಸವಿಯಬಹುದು. ಆದರೆ ಇದನ್ನು ಕೈಗೊಳ್ಳಲು ಮಹಾನ್ ಧ್ಯೇಯದ ಅಗತ್ಯವಿರುತ್ತದೆ. ಏಕೆಂದರೆ ನಿದ್ದೆಗೆಡುವಂತಹ ದೊಡ್ಡ ಸಾಹಸಿ ಕೆಲಸದ ಅಗತ್ಯವಿರುತ್ತದೆ. (ಎಲ್ಲರಿಗಲ್ಲದಿದ್ದರೂ ನನ್ನ ಪಾಲಿಗಂತೂ ಅದು ಮಹಾನ್ ಸಾಹಸ)
Related Articles
Advertisement
ಮೋಡಗಳು ನನಗೆ ಕಂಡಂತೆ ನನ್ನ ಪಕ್ಕದಲ್ಲಿದ್ದವರಿಗೆ ಕಾಣಬೇಕೆಂಬುವ ಕಟ್ಟುಪಾಡೇನೂ ಇಲ್ಲ. ಎಲ್ಲವೂ ಅವರವರ ಭಾವಭಕುತಿಗೆ ಬಿಟ್ಟದ್ದು. ಆದರೂ ದೃಷ್ಟಿಕೋನವೂ ಜೀವನದಲ್ಲಿ ಒಂದು ಮಹತ್ವದ ಪಾಠವನ್ನು ಕಲಿಸುತ್ತದೆ. ಕಾಮಾಲೆ ಕಣ್ಣಿಗೆ ಲೋಕವೆಲ್ಲಾ ಹಳದಿ ಎನ್ನುವ ಹಾಗೇ. ಮೇಘ ಸಂದೇಶ ಎಂಬುವ ಕಲ್ಪನೆಯೂ ಬಹುಶಃ ಇಂತಹದ್ದೇ ಒಂದು ದೃಷ್ಟಿಕೋನದ ಕಾಣಿಕೆ ಎಂದೆನಿಸುತ್ತದೆ.
ನಾನು ನನಗೆ ಕಾಣುವ ಆ ಮೋಡಗಳ ಚಿತ್ತಾರವನ್ನು ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತೇನೆ. ಆದರೆ ಪ್ರತಿ ಬಾರಿಯೂ ನನ್ನ ಕಣ್ಣಿನ ಕ್ಯಾಮೆರಾದಲ್ಲಿ ಸೆರೆಯಾದ ಚಿತ್ರಕ್ಕೂ ನನ್ನ ಮೊಬೈಲ್‌ನಲ್ಲಿ ಸೆರೆಯಾದ ಚಿತ್ರಕ್ಕೂ ಅಜಗಜಾಂತರ ವ್ಯತ್ಯಾಸ. ಎಷ್ಟೇ ಟೆಕ್ನಾಲಜಿ ಮುಂದುವರೆದಿದ್ದರೂ ಪ್ರಕೃತಿಯನ್ನು ಹಿಮ್ಮೆಟ್ಟಿಸಲು ಯಾವುದಕ್ಕೂ ಸಾಧ್ಯವಿಲ್ಲ. ಆದರೂ ಆ ಹುಚ್ಚು ಮಾತ್ರ ನನ್ನನ್ನು ಬಿಟ್ಟಿಲ್ಲ. ಈಗಲೂ ಯಾವಾಗಲಾರದೂ ಸಮಯ ಸಿಕ್ಕಾಗ ಮೋಡಗಳನ್ನು ನೋಡಲು ಹೋದಾಗ ನನ್ನ ಫೋನ್ ನನ್ನಜೊತೆಯಲ್ಲಿದ್ದೇ ಇರುತ್ತದೆ.
ಇನ್ನೊಂದು ಕಿವಿ ಮಾತಿದೆ. ಮೋಡಗಳನ್ನ ಅಥವ ಆಕಾಶವನ್ನ ಕಾಣುವಾಗ ನಮ್ಮಲ್ಲಿನ ಮುಗ್ಧತೆ ಹೆಚ್ಚಿ ಮನಸ್ಸನ್ನು ತಿಳಿಯಾಗಿಸುತ್ತದೆ. ಅದು ಒಂದು ರೀತಿ ನಮ್ಮಲ್ಲಿನ ಗೊಂದಲಗಳಿಗೆ ಪರಿಹಾರದಂತೆ. ಕೆಲವು ನಿಮಿಷಗಳ ಕಾಲ ನಮ್ಮ ತೊಂದರೆಯ ಬುತ್ತಿಯ ನೆನಪೇ ಆಗುವುದಿಲ್ಲ. ತುಂಬಾ ಬೇಜಾರಾದ ಸಂದರ್ಭದಲ್ಲಿ ಹಲವಾರು ಮಂದಿ ಆಕಾಶವನ್ನು ನೋಡಿ ತಿಳಿಯಾಗುತ್ತಾರೆ. ಮನಸ್ಸಿನ ಭಾವಗಳನ್ನು ಪ್ರಕೃತಿಯ ಹೊರತು ಬೇರಾವುದು ತಿಳಿಯಾಗಿಸಲು ಸಾಧ್ಯವಿಲ್ಲ. ಹಾಗೆಯೇ ಖುಷಿಯಾದಾಗ ಮೋಡಗಳೊಂದಿಗೆ ಹಂಚಿಕೊಂಡು ಸಂತೋಷವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಎಲ್ಲಕ್ಕಿಂತಲೂ ಭಾವಗಳ ಗೆಳತಿ ನಮ್ಮ ಪ್ರಕೃತಿ ಎಂಬುದು ನಮಗೆ ಈ ಮೂಲಕ ಅರ್ಥವಾಗುತ್ತದೆ. ಎಲ್ಲವೂ ಜಗತ್ತಿನ ಸೋಜಿಗ ಎಂದೆನಿಸುತ್ತದೆ.
ಇಷ್ಟೆಲ್ಲಾ ಹೇಳಿದ ಮೇಲೆ ಒಂದು ಸಲಹೆಯಿದೆ. ಆಧುನಿಕ ಬದುಕಿನ ಒಡಲಲ್ಲಿ ಬೇಯುತ್ತಿರುವ ನೀವೂ ಕೂಡ ಒಮ್ಮೆ ಮನಸ್ಸನ್ನು ಎಲ್ಲಾ ಗೊಂದಲಗಳಿಂದ ಮುಕ್ತಗೊಳಿಸಿಕೊಂಡು ಇಳಿಸಂಜೆಯ ಮೋಡಗಳನ್ನು ಕಂಡು ಸವೆಯಿರಿ. ಒಮ್ಮೆ ಕಂಡು ಮತ್ತೆ ಕಾಣದಾದಾಗ ಬಹಳ ಬೇಸರವಾಗುತ್ತದೆ ಎಚ್ಚರ!
– ಆಶಾ ಅನಂತರಾಮ್ವಿಜ್ಞಾನ ವಿಭಾಗ,
ಸೈಂಟ್ ಜೋಸೆಫ್ ಕಾಲೇಜು,
ಬೆಂಗಳೂರು.