Advertisement

ಪ್ರಬಂಧ: ಪತ್ರ ವಾತ್ಸಲ್ಯ

06:21 PM Jul 06, 2019 | mahesh |

ವೇಗವಾಗಿ ಬರುತ್ತಿರುವ ಕಾರನ್ನು ತಡೆದು ನಿಲ್ಲಿಸಿದ ಪೊಲೀಸ್‌. ಗರ್ವದಿಂದ ಚಾಲಕನ ಸೀಟಿನತ್ತ ಬರುತ್ತ ಡ್ರೈವಿಂಗ್‌ ಲೈಸನ್ಸ್‌ ತೋರಿಸುವಂತೆ ಕೇಳಿದ. ಆತ ಕಂದಾಯ ಇಲಾಖೆಯ ಉದ್ಯೋಗಿ. ಎಲ್ಲ ಕಾಗದಪತ್ರಗಳನ್ನು ತೋರಿಸಿದ. ಇನ್ಶೂರೆನ್ಸ್‌ ಮಾತ್ರ ಲ್ಯಾಪ್ಸ್‌ ಆಗಿತ್ತು. ಪೊಲೀಸ್‌, ಕಂದಾಯ ಇಲಾಖೆಯ ಉದ್ಯೋಗಿಯ ಮುಖ ನೋಡಿದ.

Advertisement

ಪರಸ್ಪರ ನಕ್ಕರು.
“ಸರಿ, ಹೋಗಿ’ ಎಂದು ಪೊಲೀಸ್‌ ಅವನನ್ನು ಬಿಟ್ಟ.
ಮತ್ತೂಮ್ಮೆ ಪೊಲೀಸ್‌ನ ಮಗನಿಗೆ ಅರ್ಜೆಂಟಾಗಿ ಜಾತಿ ಪ್ರಮಾಣ ಪತ್ರ ಬೇಕಾಗಿತ್ತು. ಆಫೀಸ್‌ ಕಡೆ ಹೋದರೆ ಅಲ್ಲಿನ ಅಲ್ಲಿದ್ದ ಸಿಬಂದಿ “ಒಂದು ವಾರ ಬೇಕಾಗುತ್ತದೆ. ಈಗ ಕಂಪ್ಯೂಟರೈಸ್ಡ್ ಆಗಿರೋದ್ರಿಂದ ಎಲ್ಲ ಶಿಸ್ತುಬದ್ಧವಾಗಿ ನಡೀತಿದೆ’ ಎಂದು ಹೇಳಿದರು.

ಈ ಹಿಂದೆ ತನ್ನ “ಔದಾರ್ಯ’ದ ಲಾಭವನ್ನು ಪಡೆದಿದ್ದ ಕಂದಾಯ ಇಲಾಖೆಯ ಉದ್ಯೋಗಿಯ ನೆನಪಾಯಿತು. ಅವನನ್ನು ಭೇಟಿಯಾದ. ಇಬ್ಬರೂ ಪರಸ್ಪರ ಮುಖ ನೋಡಿ ನಕ್ಕರು.
ಆತನಲ್ಲಿ ಉಪಕಾರ ಸ್ಮರಣೆ ಇತ್ತು.
ಆ ದಿನ ಸಂಜೆಯೇ ಜಾತಿಪ್ರಮಾಣ ಪತ್ರ ಪೊಲೀಸನ ಕೈ ಸೇರಿತು.
ರೂಲ್ಸ್‌ ಪಾಲಿಸಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ರೂಲ್ಸ್‌ ಬ್ರೇಕ್‌ ಮಾಡುವುದರಿಂದಲೂ ಎಷ್ಟೆಲ್ಲ ಪ್ರಯೋಜನ ಇದೆ ನೋಡಿ, ಯಾರಿಗೆಲ್ಲ ಎಂದು ಕೇಳಬೇಡಿ !

ಟ್ರಿಣ್‌ ಟ್ರಿಣ್‌ ಟ್ರಿಣ್‌. 3 ಗಂಟೆ 10 ನಿಮಿಷಕ್ಕೆ ಸರಿಯಾಗಿ ನಮ್ಮ ಮನೆ ಅಂಗಳದಲ್ಲಿ ಸೈಕಲ್‌ ಗಂಟೆ ಸದ್ದು ಕೇಳುತ್ತಿತ್ತು. ಕೂಡಲೇ ಮಾಡುತ್ತಿದ್ದ ಕೆಲಸವನ್ನು ಅಲ್ಲೇ ಬಿಟ್ಟು ದಡಬಡ ಎಂದು ಹೊರಗೆ ಓಡುತ್ತಿದ್ದೆ. ಸೈಕಲ್ಲಿನಲ್ಲಿ ಉದ್ದದ ಖಾದಿ ಕೈ ಚೀಲವನ್ನು ಬಗಲಲ್ಲಿ ನೇತಾಡಿಸಿಕೊಂಡು ಬಂದ ಅಂಚೆಯಣ್ಣ ಚೀಲದೊಳಗಿನಿಂದ ಕಾಗದಗಳ ಕಟ್ಟು ತೆಗೆದು ಪಟಪಟ ಹುಡುಕುತ್ತಿದ್ದರು. ಅದರೊಳಗಿನಿಂದ ಒಂದೆರಡು ಕಾಗದ ನನ್ನ ಕೈಗೆ ಬರುತ್ತಿತ್ತು. ತತ್‌ಕ್ಷಣ ಯಾರ ಕಾಗದ ಎಂದು ಕುತೂಹಲದಿಂದ ಹಿಂಭಾಗ ನೋಡುತ್ತಿದ್ದೆ. ಅಷ್ಟರಲ್ಲಿ ಅಮ್ಮ, ಅಪ್ಪ, ಅಣ್ಣ ಎಲ್ಲಾ ಅಲ್ಲಿಗೆ ಬಂದು ಸೇರುತ್ತಿದ್ದರು. “ಬರುತ್ತೇನೆ’ ಎಂದು ಹೊರಟುನಿಲ್ಲುವ ಅಂಚೆಯಣ್ಣನನ್ನು “ಒಳಗೆ ಬನ್ನಿ’ ಎಂದು ಕರೆದು, ಕುಳ್ಳಿರಿಸಿ, ಕ್ಷೇಮ ವಿಚಾರಿಸಿ ಕಾಫಿ ಕೊಟ್ಟು ಕಳಿಸುತ್ತಿದ್ದುದು ನಮ್ಮ ಮನೆಪದ್ಧತಿಯಾಗಿತ್ತು. ಆಮೇಲೆ ಆ ಕಾಗದವನ್ನು ಎಲ್ಲರ ಮುಂದೆ ಗಟ್ಟಿಯಾಗಿ ಓದಿ ಹೇಳುವ ಅವಕಾಶ ನನ್ನದು. ನನ್ನ ಓದುಗಾರಿಕೆಯ ಕೌಶಲವನ್ನು ಎಲ್ಲರ ಮುಂದೆ ಪ್ರದರ್ಶಿಸಬಹುದೆಂಬ ಹೆಮ್ಮೆ ನನಗೆ. ಬಹುತೇಕ ಅದು ಬೆಂಗಳೂರಿನಲ್ಲಿದ್ದ ಅಕ್ಕ ಬರೆದ ಕಾಗದವಾಗಿರುತ್ತಿತ್ತು. ಅದು ಮೂಡಿಸುತ್ತಿದ್ದ ಕುತೂಹಲ, ನೆಮ್ಮದಿ, ಸಂಭ್ರಮ, ಮತ್ತೆ-ಮತ್ತೆ ಓದಿಸುವ ಪರಿ ಎಷ್ಟು ವರ್ಣಿಸಿದರೂ ಮುಗಿಯದ್ದು. ವಾರಗಟ್ಟಲೆ ಅಕ್ಕನ ಕಾಗದ ಬಂದಿತ್ತು ಎನ್ನುವುದೇ ಅಕ್ಕಪಕ್ಕದವರ ಜೊತೆ ಮಾತಿನ ವಿಷಯವಾಗಿರುತ್ತಿತ್ತು. ಅದು ಬಿಟ್ಟರೆ ಅಮ್ಮನ ತಾಯಿ ಮನೆಯಿಂದ ಮಾವನ ಮಕ್ಕಳು ಬರೆಯುತ್ತಿದ್ದ ಪತ್ರಗಳು ಹೆಚ್ಚಾಗಿ ಬರುತ್ತಿದ್ದವು. ಅಲ್ಲದೇ ಮದುವೆ, ಉಪನಯನದ ಆಹ್ವಾನ ಪತ್ರಿಕೆಗಳು, ವೈಕುಂಠ ಸಮಾರಾಧನೆ ಪತ್ರಿಕೆಗಳು, ಅಡಿಕೆ ಮಂಡಿಯಿಂದ ಬರುವ ವಾರ್ಷಿಕ ವರದಿಗಳು, ಜಾತ್ರೆ, ರಥೋತ್ಸವದ ಕರೆಯೋಲೆಗಳು ಹೀಗೆ ತರತರದ ಪತ್ರಗಳು!

ಕ್ರಮೇಣ ಪತ್ರಗಳ ಸಾಲಿಗೆ ನನ್ನ ಗೆಳತಿಯರಿಂದ ಬರುತ್ತಿದ್ದ ಪತ್ರಗಳು ಸೇರಿಕೊಂಡವು. ಪತ್ರ ಬರೆಯಲು ಕಾರಣ ಬೇಕಿರಲಿಲ್ಲ. ಅವುಗಳಲ್ಲಿ ಪರೀಕ್ಷೆಯ ಪ್ರಬಂಧದ ವಿಷಯಗಳು, ಭಾಷಣ ಸ್ಪರ್ಧೆಯ ವಿಷಯಗಳು ವಿನಿಮಯವಾಗುತ್ತಿದ್ದವು. ಮನಸ್ಸಿನ ಭಾವನೆಗಳೆಷ್ಟೋ ಹರಿದಾಡುತ್ತಿದ್ದವು. ಅವು ಮನೆಮಂದಿಯ ಕ್ಷೇಮ-ಸಮಾಚಾರದೊಂದಿಗೆ ಊರಿನ ವಿಷಯಗಳನ್ನೆಲ್ಲ ಬಿಚ್ಚಿಡುತ್ತಿದ್ದವು. ವಿರಾಮದ ಸಮಯದಲ್ಲಿ ಕುಳಿತು ಪುಟಗಟ್ಟಳೆ ಬರೆಯುತ್ತಿದ್ದ ಪತ್ರಗಳಲ್ಲಿ ಪ್ರೀತಿ-ಕಾಳಜಿ, ಮಾರ್ದವತೆ ತುಂಬಿರುತ್ತಿತ್ತು. ನನ್ನ ಪಾಲಿಗಂತೂ ಅದೊಂದು ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. ನಿರ್ದಿಷ್ಟ ಅವಧಿಗೊಮ್ಮೆ ಪತ್ರ ಬರೆಯುವುದು ಕರ್ತವ್ಯ ಎಂಬ ಪ್ರಜ್ಞೆ, ಜೊತೆಗೆ ಬಂದ ಪತ್ರಗಳಿಗೆ ತಕ್ಷಣ ಮರು ಉತ್ತರ ಬರೆಯುವ ಬದ್ಧತೆ ನನ್ನದಾಗಿತ್ತು.

Advertisement

ಪತ್ರಗಳನ್ನು ಜೋಡಿಸಿಡಲೆಂದೇ ಮನೆಯಲ್ಲಿ ಒಂದು ನಿರ್ದಿಷ್ಟ ಸ್ಥಾನ ಮೀಸಲಾಗಿರುತ್ತಿತ್ತು. ಗೋಡೆ ಮೂಲೆಯಲ್ಲಿ ತಂತಿ ನೇತುಹಾಕಿ, ಬಂದ ಕಾಗದಗಳನ್ನೆಲ್ಲ ಅದಕ್ಕೆ ಚುಚ್ಚಿ ಇಡುತ್ತಿದ್ದೆವು. ಅದು ತುಂಬಿ ತುಳುಕತೊಡಗಿದಾಗ, ಸಮಿತಿಯವರೆಲ್ಲ ಸೇರಿ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿ ಒಡೆಯುವಂತೆ ಮನೆ ಮಂದಿಯೆಲ್ಲ ಕುಳಿತು ಒಂದೊಂದೇ ಪತ್ರವನ್ನು ಪರಿಶೀಲಿಸುತ್ತಿದ್ದೆವು.

ಯಾವುದನ್ನು ಸಂಗ್ರಹಿಸಿಡಬೇಕು, ಯಾವುದು ಬೇಡ ಎಂದು ಚರ್ಚೆಯಾಗುತ್ತಿತ್ತು. ಕೆಲವು ಪತ್ರಗಳ ವಿಳಾಸವನ್ನು ಬರೆದಿಟ್ಟುಕೊಳ್ಳುತ್ತಿದ್ದೆವು. ಅವುಗಳಲ್ಲಿ ಖಾಸಗಿ ಪತ್ರಗಳು ಭಾವಪೂರ್ಣವೆನಿಸುತ್ತಿದ್ದುದರಿಂದ ಜೋಪಾನವಾಗಿ ಎತ್ತಿಟ್ಟುಕೊಳ್ಳುವ ಅಭ್ಯಾಸ ನನಗಿತ್ತು. ಆದ್ದರಿಂದಲೇ ಇಂದಿಗೂ ನನ್ನ ಬಳಿ ತರತರಹದ ಪತ್ರಗಳ ಸಂಗ್ರಹವಿದೆ. ಆ ಪತ್ರಗಳನ್ನು ಇಂದು ತೆರೆದು ನೋಡಿದರೆ ಎಂಥ ಆನಂದವಾಗುತ್ತದೆ ಗೊತ್ತೇ? ಉಳಿದ ಪತ್ರಗಳೆಲ್ಲ ಹಳೆಯ ಪುಸ್ತಕಗಳೊಂದಿಗೆ ಗುಜರಿಗೆ ಹೋಗುತ್ತಿದ್ದವು, ತಂತಿ ಖಾಲಿಯಾಗಿ ಮತ್ತೆ ಹೊಸ ಪತ್ರಗಳನ್ನು ತುಂಬಿಸಿಕೊಳ್ಳಲು ಸಿದ್ಧವಾಗುತ್ತಿತ್ತು.

ಪತ್ರವನ್ನು ಯಾರಿಗೆ ಹೇಗೆ ಬರೆಯಬೇಕು ಎಂಬ ದೊಡ್ಡ ಪಾಠ ನಮ್ಮ ಶಾಲೆಯ ಕನ್ನಡ ಪಂಡಿತರಿಂದ ನನಗೆ ಲಭಿಸಿತ್ತು. ಎಲ್ಲೂ ತಪ್ಪಾಗದಂತೆ, ಸುಂದರವಾಗಿ ಬರೆಯುವ ಕಲೆ ನನಗೆ ರೂಢಿಯಾಗಿತ್ತು. ಪರಿಣಾಮವಾಗಿ, ನನ್ನ ಪತ್ರವನ್ನು ಮೆಚ್ಚಿಕೊಂಡ, ಕಾಯ್ದುಕೊಂಡ ದೊಡ್ಡ ಬಳಗ ನನ್ನೊಂದಿಗಿದೆ. ತೀರ್ಥರೂಪರಾದ ತಂದೆಯವರ ಚರಣಾರವಿಂದಗಳಿಗೆ ಪ್ರಣಾಮಗಳು, ತೀರ್ಥರೂಪು ಸಮಾನರಾದ ಅಣ್ಣನಿಗೆ, ಚಿರಂಜೀವಿ ತಮ್ಮನಿಗೆ, ಪೂಜ್ಯ ಮಾತೃಶ್ರೀಯವರಿಗೆ, ಅಕ್ಕರೆಯ ಸಹೋದರಿಗೆ, ಪೂಜ್ಯ ಗುರುಗಳಿಗೆ, ಆತ್ಮೀಯ ಸ್ನೇಹಿತೆಗೆ, ಉಭಯ ಕುಶಲೋಪರಿ ಸಾಂಪ್ರತ, ಬೇಡುವ ಆಶೀರ್ವಾದಗಳೊಂದಿಗೆ, ನಿಮ್ಮ ವಿಧೇಯ ವಿದ್ಯಾರ್ಥಿನಿ… ಇಂಥ ಪದಪುಂಜಗಳು ಗುರುಹಿರಿಯರಲ್ಲಿದ್ದ ಭಯ-ಭಕ್ತಿ-ಗೌರವಕ್ಕೆ, ಸಮವಯಸ್ಕರಲ್ಲಿದ್ದ ಸ್ನೇಹಕ್ಕೆ, ಸೋದರ-ಸೋದರಿಯರಲ್ಲಿದ್ದ ಆತ್ಮೀಯತೆಗೆ ಸಾಕ್ಷಿಯಾಗಿದ್ದವು.

ಕಾಲ ಎಲ್ಲವನ್ನೂ ಬದಲಾಯಿಸುತ್ತದೆ. ಇಂದಿನ ಪೀಳಿಗೆಯವರಿಗೆ ಪತ್ರ ಬರೆಯುವ ಕಲೆ ಇರಲಿ, ಪತ್ರಗಳನ್ನು ನೋಡಿಯೂ ಗೊತ್ತಿಲ್ಲವೆನ್ನಬಹುದು. ಮಕ್ಕಳು ಕೇವಲ ಪರೀಕ್ಷೆಯಲ್ಲಿ 5 ಅಂಕ ಗಳಿಸಲು ಪತ್ರಲೇಖನ ಕಲಿಯುತ್ತಿದ್ದಾರೆಯೇ ಹೊರತು ಪ್ರಾಯೋಗಿಕವಾಗಿ ಅವರಿಗದು ಅಪ್ರಸ್ತುತ ಎನ್ನಿಸಿಬಿಟ್ಟಿದೆ. ಮೊಬೈಲ್‌ನ ಸಂದೇಶಗಳನ್ನು ಕೆಲವರು ಪತ್ರಗಳಿಗೆ ಹೋಲಿಸುವುದುಂಟು. ಮೊಬೈಲ್‌ ಕ್ಷಣಮಾತ್ರದಲ್ಲಿ ದ್ವಿಮುಖೀ ಸಂಭಾಷಣೆಗೆ ಅವಕಾಶ ತೆರೆದಿಡುತ್ತದೆ ನಿಜ. ಅದು ಪತ್ರದಂತೆ ಭಾವಪೂರ್ಣವಾಗಿ ಬರಸೆಳೆಯುವುದಿಲ್ಲ.

ಪತ್ರಗಳೆಂದರೆ ನೆನಪುಗಳನ್ನು ಕಾಪಿಡುವ ಪುಟ್ಟ ಪೆಟ್ಟಿಗೆಗಳು.

ಅಂಜಲಿ ಅಶ್ವಿ‌ನ್‌

Advertisement

Udayavani is now on Telegram. Click here to join our channel and stay updated with the latest news.

Next