Advertisement

ಪ್ರಬಂಧ: ಜಾಸ್ಮಿನ್‌ ಆಂಟಿ

08:08 PM Nov 16, 2019 | mahesh |

ಸಿಹಿತಿಂಡಿ ಕೊಳ್ಳಲು ಅಂಗಡಿಗೆ ಹೋಗಿದ್ದೆ. ಗ್ರಾಹಕರು ಬಯಸಿದ ತಿನಿಸುಗಳನ್ನು ಪ್ಯಾಕ್‌ ಮಾಡುವುದರಲ್ಲಿ ನಿರತನಾಗಿದ್ದ ಸೇಂಗೊಟ್ಟವನ್‌ ಪರಿಚಯದ ನಗು ತೂರಿದ. ಅವನ ಕೈಗಳ ಲಾಘವವನ್ನೇ ಗಮನಿಸುತ್ತ, ಬೆಳಗಾದರೆ ಬಂದಿಳಿಯುವ ಅತಿಥಿಗಳು ತುಸು ಮುನ್ನವೇ ತಿಳಿಸಿದ್ದರೆ ಮನೆಯಲ್ಲೇ ಏನಾದರೂ ಮಾಡಬಹುದಿತ್ತಲ್ವ ಅಂತ ಅದೆಷ್ಟನೆಯ ಬಾರಿಗೋ ಅಂದುಕೊಳ್ಳುತ್ತ ನಿಂತಿದ್ದೆ.

Advertisement

ದೇವಲೋಕದ ದಿವ್ಯ ಪರಿಮಳವೊಂದು ಆವರಿಸಿತು! ಥಟ್ಟನೆ ಕತ್ತು ಹೊರಳಿಸಿದೆ. ಆಹಾ! ಸಂತಸವೆಂಬುದು ಈ ರೂಪದಲ್ಲೂ ಎಟಕುವುದೆ! ಅಮ್ಮ-ಮಗಳ ಜೋಡಿಯೊಂದು ಸೆಲ್ಫ್ ಸರ್ವೀಸ್‌ ಕೌಂಟರಿನಿಂದ ಪಡೆದ ಸಮೋಸಾ ಪ್ಲೇಟ್‌ ಕೈಲಿಟ್ಟುಕೊಂಡು ಟೇಬಲು ಅರಸುತ್ತಿತ್ತು. ತ‌ರತ‌ರದ ಸಿಹಿಗಳ ಪರಿಮಳವನ್ನು ಮೀರಿ ಆ ದಿವ್ಯಗಂಧ ಸುತ್ತಿ ಸುತ್ತಿ ಸುಳಿಯುತ್ತಿತ್ತು !

ನನಗೆ ಹತ್ತಿರವಿದ್ದ ಟೇಬಲಿನ ಮುಂದೆ ಅವರಿಬ್ಬರೂ ಕುಳಿತಾಗ ನೇರವಾಗಿ ದಿಟ್ಟಿಸುವುದರಲ್ಲಿ ಅಸಭ್ಯತೆಯೆನಿಸುವುದೋ ಎನಿಸಿದರೂ ಅವರಿಂದ ಕಣ್ಣು ಕೀಳದಾದೆ. ಅಮ್ಮ-ಮಗಳ ಮಾತುಕತೆ ತಮಿಳು- ಆಂಗಿಲದಲ್ಲಿ ಹೊರಳುತ್ತಿತ್ತು. ಹತ್ತು-ಹನ್ನೆರಡಿರಬಹುದಾದ ಮಗಳದು ಕಾಲಕ್ಕೆ ತಕ್ಕ ಉಡುಪು. ಅಮ್ಮನದು ಗಂಜಿಯಲ್ಲಿ ಮಿಂದ ಹತ್ತಿಯ ಸೀರೆ. ಮಗಳ ಎರಡೂ ಕಿವಿಗಳ ಪಕ್ಕ ಮೇಲೆತ್ತಿ ಕಟ್ಟಿದ ಜಡೆಗಳಿಗೆ ಸೇತುವೆಯಾದ ಜಾಜಿ ಹೂ. ತುದಿಗೆ ಕೆಂಡಸಂಪಿಗೆ. ಅಮ್ಮನ ಎಡಭುಜದಿಂದ ಜಡೆಯುದ್ದಕ್ಕೂ ಇಳಿಬಿದ್ದ ಜಾಜಿ ಜಲಪಾತ.

ಅಮ್ಮನ ನಾಡಲ್ಲಿ ಮುಡಿಯಲ್ಲಿ ಹೂವಿಟ್ಟ ಮಾನಿನಿಯರು ಅಪರೂಪವೇನಲ್ಲ. ಬೆಳಗಿನ ಸಮಯ ಟೌನ್‌ಸ್ಟಾಂಡ್‌ ತುಂಬೆಲ್ಲ ಗಂಧ ಹೂದಂಡೆಯ ಮಹಿಳೆಯರೇ. ಆದರೂ ನನ್ನಂತೆಯೇ ಜಾಜಿಯ ಮೋಹದಲ್ಲಿ ಬಿದ್ದ ಅಮ್ಮ-ಮಗಳನ್ನ ನೋಡುತ್ತಾ ಎವೆಯಾಡಿಸುವಷ್ಟರಲ್ಲಿ ಬಾಲ್ಯಕ್ಕೆ ತಲುಪಿದ್ದೆ.

ಜಾಜಿ ಬಳ್ಳಿಯೆಂದರೆ ನಿರ್ಜೀವ ಲತೆಯಲ್ಲ- ನನ್ನ ಬಾಲ್ಯಸಖೀ. ಆಟ, ಊಟ, ಓದು, ಕಿತ್ತಾಟ… ಜಾಜಿ ಬಳ್ಳಿಯೆದುರು ನಾ ಮಾಡದೆ ಬಿಟ್ಟದ್ದಾದರೂ ಏನಿತ್ತು ? ದಿನಕ್ಕೊಂದು ಫ್ಯಾಂಟಮ್‌ನ ಸಾಹಸ, ಭಾನುವಾರದ ಪದಬಂಧ, ಮೆಂತ್ಯ ಮೆತ್ತಿದ ತಲೆಯಲ್ಲಿ ಲೆಕ್ಕದ ಹೋಮ್‌ವರ್ಕ್‌, ಕುಂಟೇಬಿಲ್ಲೆ, ಷಟ್ಲ…ಕಾಕ್‌ … ಕೊನೆಗೆ ನಾ ಬಾಲ್ಯದಿಂದ ಹೆಣ್ತನಕ್ಕೆ ಕಾಲಿಟ್ಟದ್ದಕ್ಕೂ ಜಾಜಿಯೇ ಸಾಕ್ಷಿ.

Advertisement

ಬೀಸಿದ ಚಿನ್ನಿ ಹಿಂದಿನ ರಸ್ತೆಯ ಕೃಷ್ಣಶಾಸ್ತ್ರಿಗಳ ಹಣೆಗೆ ಬಡಿದು ಶಾಸ್ತ್ರಿಗಳು ಅತ್ತೆಯೆದುರು ನಿಂತಾಗ ಸಿಕ್ಕ ಶಿಕ್ಷೆ- ಒಂದು ವಾರ ಆಟಕ್ಕೆ ನಿಷೇಧ. ಆಗ ಇದೇ ಜಾಜಿ ಪೊದೆಯೆದುರಿನ ಕಲ್ಲುಬೆಂಚಿನ ಮೇಲೆ ಕೂತು ಮೊಗ್ಗರಳುವ ಪರಿಮಳದಿ ಮೀಯುತ್ತ ಮೊದಲ ಮಿಲ್ಸ… ಅಂಡ್‌ ಬೂನ್‌ ರುಚಿ ಕಂಡಿದ್ದು.

ಆಮೇಲಾಮೇಲೆ ದಾಂಡು ಗೋಲಿಗಳಿಗಿಂತ ಪುಸ್ತಕದ ಪುಟಗಳೇ ಹಿತವೆನಿಸತೊಡಗಿ ಗೆಳತಿಯರೆಲ್ಲ ಎನಿಡ್‌ ಬ್ಲೆ ಟನ್‌, ಬಾಲಮಿತ್ರದಲ್ಲಿರುವಾಗ ದಿನಕ್ಕೆರಡು ಕಾದಂಬರಿ ತಿಂದು ಮುಗಿಸಿದ್ದು ಜಾಜಿ ಪರಿಮಳದ ಎದುರಲ್ಲೇ ತಾನೆ !

ಬಳ್ಳಿ ತುಂಬಿ ಸೂಸುವ ಅರ್ಧ ಬಿಡಿಸುವಷ್ಟರಲ್ಲಿ ಇನ್ನರ್ಧ ಅರಳಿ ಹಸಿರು ಬಳ್ಳಿಯೊಡಲಲ್ಲಿ ನಕ್ಷತ್ರ ಲೋಕ. ನೀರಿನ ಬಟ್ಟಲು ಮುಂದಿಟ್ಟುಕೊಂಡು ಹಸಿನೂಲಲ್ಲಿ ಕಟ್ಟಿದಷ್ಟೂ ಮುಗಿಯದ ಪರಿಮಳದ ಮಾಲೆ. ರಾತ್ರಿ ಜಡೆಯಿಳಿದು ಮಲ್ಲಿಗೆ ಹಂಬಿನ ಇಬ್ಬನಿ ಶಯೆಯ ಮೇಲೆ ಮಲಗಿದ ದಂಡೆ ಬೆಳಗ್ಗೆ ಮತ್ತೆ ಮುಡಿಗೆ.

ಅಂಗಳದ ತುಂಬೆಲ್ಲ ದುಂಡುಮಲ್ಲಿಗೆ, ಸೂಜಿಮಲ್ಲಿಗೆ, ಮರುಗ ಸಾಲದ್ದಕ್ಕೆ ಮೈತುಂಬ ಕಂಬಳಿ ಹುಳುಗಳ ಹೊದ್ದು ಹೂಹಾಸು ಸುರಿಯುತ್ತಿದ್ದ ಪಾರಿಜಾತ. ಟೊಳ್ಳು ಸಂಪಿಗೆಯೊಂದು ಬಿಟ್ಟು ಮಿಕ್ಕೆಲ್ಲ ಹೂಗಳಿದ್ದರೂ ನನ್ನ ಸೆಳೆದಿದ್ದು ಜಾಜಿ ಮತ್ತು ಜಾಜಿ ಮಾತ್ರವೇ. ಹಾಗೆಂದೇ ಕಾಲೇಜು ಬದುಕಿನ ಕೊನೆಯ ದಿನವೂ ಅಮ್ಮ ಬಿಗಿಯಾಗಿ ಹೆಣೆದ ಜಡೆಯೇರಿ ನಕ್ಕಿದ್ದು ಇದೇ ಜಾಜಿ.

ಪ್ಯಾಕ್‌ ಮಾಡಿದ ಸಿಹಿಯನ್ನೂ ಮಿಕ್ಕ ಹಣವನ್ನೂ ವಣಕ್ಕಂನೊಡನೆ ಕೈಗಿತ್ತವನೆಡೆಗೊಂದು ನಗುವಿತ್ತು ಅಮ್ಮ-ಮಗಳತ್ತ ಮತ್ತೂಮ್ಮೆ ನೋಡಿ ಹೊರಗಡಿಯಿಟ್ಟೆ.

ಪದ್ಮಜಾ ಕನ್ನಂಬಾಡಿ

Advertisement

Udayavani is now on Telegram. Click here to join our channel and stay updated with the latest news.

Next