Advertisement
ಹೂವೆಂದರೆ ನನಗೆ ಅಷ್ಟೊಂದು ಇಷ್ಟ. ಬಾಲ್ಯದಲ್ಲಿ ಎಲ್ಲರೂ ನನಗೆ “ಹೂವಿನ ಹುಚ್ಚಿ’ ಎಂದು ಬಿರುದು ನೀಡಿದ್ದರು. ಅದೇ ಹೆಸರಿನಿಂದ ಕರೆಯುತ್ತಿದ್ದುದೂ ನೆನಪಾಯಿತು. ಹೂವುಗಳನ್ನು ಇಷ್ಟಪಡಲು ಅಥವಾ ಇಷ್ಟಪಡದೇ ಇರಲು ವಿಶೇಷವಾದ ಕಾರಣಗಳು ಬೇಕೇ?
Related Articles
Advertisement
ಮನೆಯಲ್ಲಿ ವಿಶೇಷ ಪೂಜೆಗಳೇನಾದರೂ ಆಗುವಂತಿದ್ದರೆ ಹಿಂದಿನ ದಿನದಿಂದಲೇ ನಾನು ಮತ್ತು ನನ್ನ ತಂಗಿ ಹೂವು ಕೊಯ್ಯುವ ಕೆಲಸ ಪ್ರಾರಂಭಿಸುತ್ತಿದ್ದೆವು. ಆಗೆಲ್ಲ ಅಂಗಡಿಯಿಂದ ಹೂ ತರುತ್ತಿದ್ದುದು ಬಹಳ ಕಡಿಮೆ. ಮನೆಯಲ್ಲಿಯೇ ಬೆಳೆದ ತುಳಸಿ, ಪಾರಿಜಾತ, ಮಲ್ಲಿಗೆ, ಕನಕಾಂಬರ, ಕೇಪಳ, ದಾಸವಾಳ, ಗುಲಾಬಿ, ಅಕ್ಕಪಕ್ಕ ಝರಿತೊರೆಯ ಬಳಿ ಸಿಗುವ ಕೇದಗೆ ಮುಂತಾದ ಹೂವುಗಳನ್ನೇ ದೇವರಿಗೆ ಅರ್ಪಿಸುತ್ತಿದ್ದೆವು.
ನನ್ನಜ್ಜಿ ಒಂದೊಂದು ದೇವರ ಒಂದೊಂದು ಫೇವರೆಟ್ ಹೂವುಗಳ ಬಗ್ಗೆ ಹಾರಗಳ ಬಗ್ಗೆ ನಮಗೆ ತಿಳಿಸಿ ಹೇಳುತ್ತಿದ್ದರು. ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದ್ದರೆ “ನೋಡಿ, ಶ್ರೀಕೃಷ್ಣದೇವರಿಗೆ ತುಳಸಿ ಅಂದರೆ ಇಷ್ಟ . ಒಂದು ಚಂದದ ತುಳಸಿಮಾಲೆ ಮಾಡು, ಒಳ್ಳೆಯ ಕೃಷ್ಣನಂತಹ ಗಂಡ ಸಿಗುತ್ತಾನೆ’ ಎಂದು ಆಮಿಷವೊಡ್ಡುತ್ತಿದ್ದರು.
ಅವರ ಮಾತು ಕೇಳಿ ಹೊರಗೆ ನಾಚಿಕೆ ತೋರ್ಪಡಿಸಿದರೂ ಒಳಗೊಳಗೇ ಅಜ್ಜಿ ಹೇಳಿದ್ದು ಸತ್ಯವಾ? ಅಂತ ಮನಸ್ಸು ಯೋಚಿಸುತ್ತಿತ್ತು, ಯಾವುದಕ್ಕೂ ಇರಲಿ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತ ಅಜ್ಜಿ ಹೇಳಿದ್ದಕ್ಕಿಂತಲೂ ದೊಡ್ಡದಾದ ಹಾರವನ್ನು ಮುಂದೊಂದು ದಿನ ಬರಲಿರುವ ಬಾಳಕೃಷ್ಣನಿಗಾಗಿ ಆಗಲೇ ಮನಸ್ಸು ಸಿದ್ಧಮಾಡುತ್ತಿತ್ತು.
ಮನೆಯಲ್ಲಿ ದೇವಿಗೆ ಸಂಬಂಧಿಸಿದ ಪೂಜೆಗಳೇನಾದರೂ ಇದ್ದರೆ ಅಂದು ಮಲ್ಲಿಗೆ, ಕೇಪಳ ಹೂವಿನ ಮಾಲೆ ದೇವಿಯ ಮುಡಿಗೆ ತಯಾರು. ಕಾಟುಕೇಪಳ ಹೂ ದೇವರಿಗೆ ತುಂಬಾ ಇಷ್ಟವಂತೆ. ಬಹುಶಃ ಅದನ್ನು ಕೊಯ್ಯಲು ಪಡುವ ಶ್ರದ್ಧೆಯೇ ದೇವರಿಗೆ ಪ್ರೀತಿ ಇರಬಹುದು. ಕಾಟುಕೇಪಳ ಹೂ ಕೊಯ್ಯಲು ನಾವೊಂದು ಏಳೆಂಟು ಮಂದಿ ಅಜ್ಜಿಯ ಮೊಮ್ಮಕ್ಕಳೆಲ್ಲ ಸೇರಿ ಸುತ್ತಮುತ್ತ ಇದ್ದ ಬೆಟ್ಟಗುಡ್ಡ, ತೋಟಗಳಿಗೆಲ್ಲ ಇಡೀ ದಿನ ತಿರುಗಿ, ಕಾಲಿಗೆ ನಾಲ್ಕೈದು ಮುಳ್ಳು ಚುಚ್ಚಿಸಿಕೊಂಡು, ಕೈಗೆ ನಾಲ್ಕೈದು ಮುಳ್ಳಿನಿಂದ ಬರೆ ಹಾಕಿಸಿಕೊಂಡು ಮನೆಗೆ ಬರುತ್ತಿದ್ದೆವು. ನಮ್ಮ ಬಳಲಿಕೆ ಅರ್ಥಮಾಡಿಕೊಂಡ ಅಮ್ಮ ಬೆಲ್ಲದ ಹುಣಸೆಹಣ್ಣಿನ ಪಾನಕ ಅಥವಾ ಎಳನೀರು ಸಿದ್ಧ ಮಾಡಿ ಇಡುತ್ತಿದ್ದರು. ನಾವೆಲ್ಲ ಗುಂಪಾಗಿ ಹೂಕೊಯ್ಯಲು ತಿರುಗುತ್ತಿದ್ದ ಆ ಸಮಯ ತುಂಬ ಖುಷಿಯ ಸಮಯ.
ನಮ್ಮ ನಮ್ಮ ಶಾಲೆ, ಕಾಲೇಜು, ಊಟ, ಆಟ-ಪಾಠ, ತಮಾಷೆ, ಎಲ್ಲಾ ವಿಷಯಗಳನ್ನು ಮೆಲುಕು ಹಾಕಿಕೊಂಡು ಹೊಟ್ಟೆ ತುಂಬಾ ನಕ್ಕು ಸುಸ್ತಾಗುತ್ತಿದ್ದೆವು. ಒಬ್ಬೊಬ್ಬರ ಬೊಗಸೆಯಲ್ಲಿ ತುಂಬುವಷ್ಟು ತುಂಬೆ ಹೂವು ತರದೇ ಹೋದರೆ ಅಜ್ಜಿ ಬಿಡುತ್ತಿರಲಿಲ್ಲ. ಈ ತುಂಬೆ ಹೂವು ಜೀವನದಲ್ಲಿ ತಾಳ್ಮೆಯ ಪಾಠವನ್ನು ನಮಗೆ ಕಲಿಸಿದೆ.
ಅಷ್ಟು ಸಣ್ಣ ಹೂವನ್ನು ಗಂಟೆಗಟ್ಟಲೆ ಕೊಯ್ಯು ವುದು, ಮತ್ತೆ ಅದನ್ನು ದಾರದಲ್ಲಿ ನಾಜೂಕಾಗಿ ಪೋಣಿಸುವುದು ಚಿಕ್ಕಂದಿನಲ್ಲಿ ಆ ಪುಟಾಣಿ ಬೆರಳಿಗಷ್ಟೇ ಕರಗತವಾಗಿದ್ದ ಕಲೆ ಇರಬೇಕು. ಸೋದರತ್ತೆ ಕೆಲವೊಂದು ಉಚಿತ ವಿಶೇಷ ಸಲಹೆ ಗಳನ್ನು ಕೊಡುತ್ತಿದ್ದರು. ಗಣಪತಿ ದೇವರಿಗೆ ಬಿಳಿ ಎಕ್ಕದ ಹೂವಿನ ಮಾಲೆ ಹಾಕಿದರೆ ವಿದ್ಯೆಗೆ ತುಂಬಾ ಒಳ್ಳೆಯದು, ಗರಿಕೆ ಮಾಲೆ ಅರ್ಪಿಸಿದರೆ ಒಳ್ಳೆಯ ಗಂಡ, ಅತ್ತೆ, ಮಾವ ಸಿಗುತ್ತಾರೆ ಎಂಬಂತಹ ಅವರ ಸಲಹೆ-ಸೂಚನೆಗಳನ್ನು ಶಿರಸಾವಹಿಸಿ ಪಾಲಿಸಿದೆ. ಆ ದಿನದಿಂದಲೇ ಮನೆಯ ಮುಂದಿರುವ ಎಕ್ಕದ ಗಿಡದಲ್ಲಿ ಪ್ರತಿದಿನ ಹೂವು ಅರಳಿದ ಕೂಡಲೇ ಮಾಯವಾಗುತ್ತಿತ್ತು. ಗಣಪತಿ ಮೂರ್ತಿಯ ಡೊಳ್ಳು ಹೊಟ್ಟೆಯನ್ನು ಮುಚ್ಚುವಷ್ಟು ದೊಡ್ಡ ಗರಿಕೆ ಮಾಲೆ ಸಿದ್ಧವಾಗುತ್ತಿತ್ತು.
ನನ್ನ ಹೂವಿನ ಹುಚ್ಚನ್ನು ನೋಡಿ ನನ್ನ ಆಪ್ತ ಸಂಬಂಧಿಕರು, “ಇವಳನ್ನು ಹೂ ಮಾರುವವನಿಗೇ ಮದುವೆ ಮಾಡಿಕೊಡಬೇಕು’ ಎಂದು ರೇಗಿಸುತ್ತಿದ್ದರು. ಪುಣ್ಯಕ್ಕೆ ಅಪ್ಪ ಆ ಮಾತುಗಳನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ ಅಂತ ಈಗ ಅನಿಸುತ್ತಿದೆ. ಅಪ್ಪನ ಯಾವ ನಿರ್ಧಾರಕ್ಕೂ ನಾನು ಬೇಡ ಎಂದು ಹೇಳುತ್ತಿರಲಿಲ್ಲ.
ಈಗಿನ ಧಾವಂತದ ಬದುಕಿಗೆ ನಾನೂ ಒಗ್ಗಿಕೊಂಡಿದ್ದೇನೆ. ಇಂದು ನನ್ನ ಮನೆಯಲ್ಲೇನಾದರೂ ವಿಶೇಷ ಪೂಜೆ-ಹವನ ಗಳಿದ್ದರೆ, ಮನೆಯಲ್ಲಿ ಗಂಟೆಗಟ್ಟಲೆ ಕುಳಿತು ಹೂಮಾಲೆ ಮಾಡುವ ತಾಳ್ಮೆ ಹಾಗೂ ಪುರುಸೊತ್ತು ನನಗಿಲ್ಲ. ಪೇಟೆಯಿಂದ ತಳುಕು-ಬಳುಕಿನ ಪ್ಲಾಸ್ಟಿಕ್ ಚೀಲದಲ್ಲಿ ಹೂ ತರುವುದೇ ಸುಲಭ. ಈಗಿನ ಸ್ಮಾರ್ಟ್ ಯುಗದಲ್ಲಿ ನಾನೂ ಸ್ಮಾರ್ಟ್ ಆಗಿದ್ದೇನೆ. ಹೂವಿನ ಅಂಗಡಿಯವನಿಗೆ ಪೂಜೆಯ ಲಿಸ್ಟ್ ಕೊಟ್ಟು ಟೋಟಲ್ ಬಜೆಟ್ ಹೇಳಿಬಿಡುತ್ತೇನೆ. ಮತ್ತಿನದೆಲ್ಲ ಆತನ ಸ್ವಾತಂತ್ರ್ಯಕ್ಕೆ ಬಿಟ್ಟದ್ದು. ಯಾವ ಪೂಜೆಗೆ, ಯಾವ ದೇವರಿಗೆ ಯಾವ ಹಾರ- ಇತ್ಯಾದಿಗಳೆಲ್ಲ ಆತನ ನಿರ್ಧಾರಕ್ಕೆ ಬಿಟ್ಟದ್ದು. ಕೃಷ್ಣ , ಗಣಪತಿ, ಶಿವ, ದೇವಿ ಇವರಿಗೆಲ್ಲ ನಾನು ಮೊದಲು ಕೊಟ್ಟಿದ್ದ ಮಾಲೆಗಳಿಗೆ ವರವಾಗಿ ಅವರು ನನಗೆ ಈಗ ಈ ಐಡಿಯಾ ಕೊಟ್ಟಿರಬಹುದು.
ಮನೆಯ ಕಾಂಪೌಂಡ್ ಗಿಡದಲ್ಲಿರುವ ದಾಸವಾಳಗಳನ್ನು ಬೆಳ್ಳಂಬೆಳಗ್ಗೆ ನಾವು ಏಳುವುದಕ್ಕಿಂತ ಮುಂಚೆಯೇ ಯಾರೋ ಕೊಯ್ದು ಅವರು ತಮ್ಮ ದೇವರಿಗೆ ಅರ್ಪಿಸುತ್ತಾರೆ. ನಾನು ಗಿಡ ಬರಿದಾದ್ದನ್ನು ನೋಡಿ ಸುಮ್ಮನೆ ಒಳಹೊಕ್ಕರೆ, ಅತ್ತೆ ಮಾತ್ರ ನೊಂದುಕೊಳ್ಳುತ್ತಿರುತ್ತಾರೆ. “ಹೋಗಲಿ ಬಿಡಿ ಅತ್ತೆ, ಅವರು ಕೊಯ್ದದ್ದು ದೇವರಿಗಾಗಿ. ನಾವೂ ಕೊಡುವುದೂ ಅವನಿಗೇ’ ಎಂದು ಭಾರೀ ಉದಾರಳಾಗಿ ಹೇಳುತ್ತೇನೆ.“ಆದರೆ ಒಂದು ಮಾತು ಹೇಳಿ ಕೊಯ್ಯಬಹುದಿತ್ತು ತಾನೆ, ನಾವೇನು ಬೇಡ ಅನ್ನುತ್ತಿ¨ªೆವೇ?’ ಎನ್ನುತ್ತ ಬೇಸರಿಸಿಕೊಳ್ಳುತ್ತಿದ್ದರು. ಆಗ ನನಗೆ “ದಿಸ್ ಪಾಯಿಂಟ್ ಟು ಬಿ ನೋಟೆಡ್’ ಎಂದು ಅನಿಸುತ್ತದೆ. ಮಳೆಗಾಲ ಬಂತೆಂದರೆ ಸಾಕು, ಸಿಕ್ಕ ಸಿಕ್ಕವರ ಬಳಿ ಹೂವಿನ ಗಿಡದ ರೆಂಬೆ-ಕೊಂಬೆ ಕೇಳಿ ಗಿಡ ನೆಡುವ ಕಾರ್ಯಕ್ರಮ ಶುರು. ಒಂದು ತಿಂಗಳು ಅದು ಚಿಗುರುವುದನ್ನು ಪ್ರತಿದಿನ ನೋಡಿ ಖುಷಿ ಪಡುವುದು. ಬೇಸಿಗೆಯಲ್ಲಿ ಕೈಕೊಡುವ ನೀರು ಒಂದು ಕಡೆಯಾದರೆ, ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಮಕ್ಕಳ ಪರೀಕ್ಷೆಯ ಒತ್ತಡ, ಶುಭಸಮಾರಂಭಗಳಿಗೆ ಹಾಜರಿ ಹಾಕಬೇಕಾದ ಅನಿವಾರ್ಯತೆ; ಮತ್ತೂಂದು ಕಡೆ ನನ್ನ ಉದ್ಯೋಗ ಕ್ಷೇತ್ರದಲ್ಲಿ ವರ್ಷಾಂತ್ಯದ ಒತ್ತಡ. ಈ ಎಲ್ಲ ಜಂಜಾಟಗಳ ಮಧ್ಯೆ ಆಸೆಯಿಂದ ನೆಟ್ಟ ಗಿಡಗಳು ಗುಟುಕು ನೀರು ಕಾಣದೇ ಬದುಕಿಗಾಗಿ ಹೋರಾಟ ನಡೆಸುತ್ತಿರುತ್ತವೆ. ಇತ್ತೀಚಿನ ವರ್ಷಗಳಲ್ಲಂತೂ ಜೂನ್ ತಿಂಗಳು ಬಂದರೂ, ಬಾರಲೊಲ್ಲೆನೆನ್ನುವ ಮಳೆರಾಯನ ನೆನೆದು ನೆನೆದು ಕೈ ಮುಗಿದು ಸುಸ್ತು. “ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ’ ಎಂದು ಗೋಗರೆಯುವುದು.
ಹೂವುಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ. ಅವುಗಳ ಸುತ್ತ ಇರುವ ಸೌಂದರ್ಯ ಭಾವ ಒಂದಾದರೆ, ಆಧ್ಯಾತ್ಮಿಕ ಒಲವು ಇನ್ನೊಂದು. ನಮ್ಮ ಸಂಸ್ಕೃತಿ- ನಂಬಿಕೆ ಮತ್ತು ಸತ್ಯ ಈ ಮೂರನ್ನು ಪ್ರತಿಪಾದಿಸಿದರೆ, ಈ ಸಂಪ್ರದಾಯಗಳ ಬಗ್ಗೆ ನಂಬಿಕೆ ಹೆಚ್ಚಬಹುದೇನೋ. ಈಗಂತೂ ಹೂವು ಇಲ್ಲದ ನಮ್ಮ ಆಚಾರ-ವಿಚಾರಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನನಗೆ ಹೂಕಟ್ಟಲು ಹೇಳಿಕೊಟ್ಟ ಅಜ್ಜಿ ಭೌತಿಕವಾಗಿ ದೂರವಾದರೂ, ಅವರ ಮಾತುಗಳು ಮನದಲ್ಲಿ ಅಚ್ಚಳಿಯದಂತೆ ಉಳಿದಿವೆ. ಒಂದು ದಿನ ಶ್ರೀಕೃಷ್ಣದೇವರಿಗೆ ತುಳಸಿ ಮಾಲೆಯನ್ನು ಮಾಡುತ್ತಾ, ಅಜ್ಜಿ ಅಂದು ಆಡಿದ ಮಾತುಗಳನ್ನು ನನ್ನವರಾದ ಕೃಷ್ಣನ ಬಳಿ ಕೇಳಿದೆ, “ರೀ ನನಗೆ ಅಜ್ಜಿ , ಅತ್ತೆ ಹೇಳಿದಂತೆ ನಿಮಗೆ ಯಾರೂ ಯಾವ ದೇವರಿಗೆ ಏನೇನು ಅರ್ಪಿಸಿದರೆ ಒಳ್ಳೆಯ ಹೆಂಡತಿ ಸಿಗುತ್ತಾಳೆ ಎಂದು ಹೇಳಿ¨ªಾರೆ? ಅಥವಾ ಇವೆಲ್ಲ ಹೆಂಗಸರಿಗೆ ಮಾತ್ರವೇ?’ ಎಂದು ಪ್ರಶ್ನಿಸಿದೆ. “ಇಲ್ಲ ಮಾರಾಯ್ತಿ, ನಂಗೆ ಯಾರೂ ಏನೊಂದೂ ಹೇಳಿಲ್ಲ, ಹೇಳಿದ್ದರೆ ನಾನೂ ದೇವರಿಗೆ ಮಾಲೆಗಳನ್ನು ಅರ್ಪಿಸುತ್ತಿದ್ದೆ. ಬಹುಶಃ ನನಗೂ ಒಳ್ಳೆಯ ಹೆಂಡತಿ…’ ಅವರ ವಾಕ್ಯ ಪೂರ್ತಿಯಾಗುವ ಮುನ್ನವೇ ನಾನು “ಆಪ್ತಮಿತ್ರ’ ಸಿನಿಮಾದ ನಾಗವಲ್ಲಿ ಪಾತ್ರಧಾರಿಣಿಯಂತೆ ಅವರೆಡೆಗೆ ದೃಷ್ಟಿ ಬೀರಿದೆ.
ರಾಯರು ನಾಪತ್ತೆ ! ವಿಭಾ ಕೃಷ್ಣಪ್ರಕಾಶ್