Advertisement
ಕೆಲವು ವರ್ಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಸ್ಥಳದಿಂದ ಪ್ರತಿದಿನ ಶಾಲೆ ಮುಗಿದ ಮೇಲೆ ಎರಡು-ಮೂರು ಶಾಲೆಯವರು ಒಟ್ಟಿಗೆ ಬಸ್ಸಿಗಾಗಿ ಕಾಯುತ್ತಿದ್ದೆವು. ಬಸ್ಸು ಬರುವ ತನಕ ಮಾತುಕತೆ ಆಡುತ್ತ ಸಮಯ ಕಳೆಯುತ್ತಿದ್ದೆವು. ಹಾಗೆ ಮಾತನಾಡುತ್ತ ಇದ್ದಾಗ ಒಂದು ದಿನ ಅಲ್ಲಿಗೆ ಚೆನ್ನಾಗಿ ಡ್ರೆಸ್ ಮಾಡಿಕೊಂಡಿದ್ದ ಯುವಕನೊಬ್ಬ ಬಂದ. ಅಲ್ಲಿದ್ದ ಪಕ್ಕದ ಶಾಲೆಯ ಮುಖ್ಯ ಶಿಕ್ಷಕಿಯವರು ನನ್ನೊಬ್ಬಳಿಗೆ ಮಾತ್ರ ಆ ಹುಡುಗನ ಪರಿಚಯ ಮಾಡಿಸಿ, ನನ್ನನ್ನೂ ಆತನಿಗೆ ಪರಿಚಯ ಮಾಡಿಸಿದರು. ಯಾಕೋ ಆ ಯುವಕ ವಿಶೇಷವಾಗಿ ಆಡ್ತಾ ಇದ್ದಾನೆ, ನೋಡ್ತಾ ಇದ್ದಾನೆ ಅಂತ ಅನ್ನಿಸಿತು. “ನನಗ್ಯಾಕೆ ಅದೆಲ್ಲ ’ ಅಂತ ತಲೆಕೆಡಿಸಿಕೊಳ್ಳದೆ ಬಸ್ಸು ಬಂದ ಕೂಡಲೇ ಹೊರಟು ಬಿಟ್ಟೆ. ಮಾರನೆಯ ದಿನ ಸಂಜೆ ಬಸ್ಸಿಗಾಗಿ ಎಲ್ಲರೂ ಕಾಯತ್ತಿದ್ದಾಗ ಪಕ್ಕದ ಶಾಲೆಯ ಮುಖ್ಯ ಶಿಕ್ಷಕಿಯವರು ನನ್ನ ಪಕ್ಕಕ್ಕೆ ಬಂದು, “ನಿನ್ನೆ ಪರಿಚಯ ಮಾಡಿಸಿಕೊಟ್ಟೆನಲ್ಲ , ಅವರ ಬಗ್ಗೆ ನಿಮ್ಮ ಅಭಿಪ್ರಾಯ ಏನು. ಆ ಹುಡುಗ ನಿಮ್ಮನ್ನು ಒಪ್ಪಿಕೊಂಡಿದ್ದಾನೆ. ನೀವು ಒಪ್ಪಿದರೆ ಅವರ ತಂದೆ-ತಾಯಿ ನಿಮ್ಮ ಮನೆಗೆ ಬರುತ್ತಾರೆ’ ಎಂದಾಗ ನನ್ನ ಸಹೋದ್ಯೋಗಿಗಳೆಲ್ಲ ಜೋರಾಗಿ ನಕ್ಕು ಬಿಟ್ಟರು. ಅವರು ನಗುತ್ತಲೇ “ಅವರ ಗಂಡ ಮತ್ತು ಮಗಳು ಒಪ್ಪಿದರೆ ಆಗಬಹುದು ಅನ್ನಿಸುತ್ತದೆ’ ಅಂತ ಹೇಳಿದರು. ಪಾಪ! ಆ ಮೇಡಂ ತಬ್ಬಿಬ್ಟಾಗಿ ಬಿಟ್ಟರು. ಅವರು ಅವರ ಶಾಲೆಗೆ ಬಂದು ಕೆಲವೇ ತಿಂಗಳಾಗಿತ್ತು. ನನಗೆ ಮದುವೆಯಾಗಿರುವ, ಮಗಳಿರುವ ವಿಚಾರ ಪಾಪ ಅವರಿಗೆ ತಿಳಿದಿರಲಿಲ್ಲ.
Related Articles
Advertisement
ಇತ್ತೀಚೆಗೆ, ನನ್ನ ಸ್ನೇಹಿತೆ ಒಬ್ಬರು ಏನೋ ಮಾತನಾಡುತ್ತ, “ಪಾಪ ಮೇಡಂ! ನಿಮಗೂ ನಿಮ್ಮ ಪತಿಯವರಿಗೂ ತುಂಬಾ ವಯಸ್ಸಿನ ಅಂತರ ಅಲ್ವಾ? ನಿಮಗೆ ಬೇಗ ಮದುವೆ ಮಾಡಿಬಿಟ್ಟಿ¨ªಾರೆ ಅನ್ನಿಸುತ್ತದೆ’ ಅಂತ ಹೇಳಿದಾಗ ನನಗೆ ಆ ಪಾಪ ಎಂಬ ಪದ ಕೇಳಿ ತುಂಬಾ ಕೋಪ ಬಂದು ಬಿಟ್ಟಿತು. ತಕ್ಷಣವೇ, “ನಿಮಗ್ಯಾರು ಹೇಳಿದ್ದು , ನನಗೂ ನನ್ನ ಪತಿಗೂ ತುಂಬಾ ವಯಸ್ಸಿನ ಅಂತರ ಇದೆ ಅಂತ. ಎಲ್ಲ ಗಂಡ-ಹೆಂಡತಿಗೂ ಇರಬಹುದಾದಷ್ಟೇ ವಯಸ್ಸಿನ ಅಂತರ ನಮ್ಮಿಬ್ಬರಿಗೂ ಇದೆ’ ಅಂತ ಚೆನ್ನಾಗಿ ದಬಾಯಿಸಿ ಬಿಟ್ಟೆ. ಇದೇನು ಮೊದಲ ಬಾರಿ ಅಲ್ಲ, ಇಂತಹ ಮಾತುಗಳನ್ನು ಕೇಳುತ್ತಿರುವುದು. ನಾನು ನನ್ನ ವಯಸ್ಸಿಗಿಂತ ಚಿಕ್ಕವಳಂತೆ ಕಾಣೋದೇ ಇಂತಹ ಮಾತುಗಳಿಗೆ ಕಾರಣ ಆಗಿಬಿಟ್ಟಿದೆ ಅಂತ ಅನ್ನಿಸೋಕೆ ಶುರುವಾಯಿತು. ನನ್ನ ನಿಜವಾದ ವಯಸ್ಸು ಹೇಳಿದಾಗಲೂ ಅವರು ನಂಬಲೇ ತಯಾರಿರಲಿಲ್ಲ. ಇಂತಹ ಅನುಭವ ಹಿಂದೆ ಕೂಡ ನನಗೆ ಸಾಕಷ್ಟು ಆಗಿತ್ತು. ಹಾಗಾಗಿ, ನನ್ನ ನಿಜವಾದ ವಯಸ್ಸನ್ನು ಹೇಳುವುದನ್ನೇ ಬಿಟ್ಟು ಬಿಟ್ಟಿದ್ದೆ.
ನನಗೆ ಬೇಗ ಸರ್ಕಾರಿ ಕೆಲಸ ಸಿಕ್ಕಿತ್ತು. ಪದವಿಯ ಕೊನೆ ವರ್ಷದಲ್ಲಿದ್ದಾಗಲೇ ಸರ್ಕಾರ ಕರೆದು ಕೆಲಸ ಕೊಟ್ಟಿತ್ತು.ಮುಂದೆ ಓದುವ ಮನಸ್ಸಿದ್ದರೂ ಸಿಕ್ಕ ಕೆಲಸ ಬಿಡಬಾರದೆಂಬ ಸಹಪಾಠಿಗಳ ಉಪದೇಶ ಮತ್ತು ಸ್ವಾವಲಂಬನೆಯ ಆಸೆಯಿಂದ ಕೆಲಸಕ್ಕೆ ಸೇರಿ ಬಿಟ್ಟೆ. ಹಳ್ಳಿಯೊಂದಲ್ಲಿ ಶಿಕ್ಷಕಿಯ ಕೆಲಸ. ನನ್ನನ್ನು ನೋಡಿದ ಆ ಊರಿನ ಜನ ಈ ಚಿಕ್ಕ ಹುಡುಗಿಗೆ ಅದ್ಯಾರು ಕೆಲಸ ಕೊಟ್ಟರೊ ಅಂತ ನಾನು ಅಲ್ಲಿಂದ ವರ್ಗವಾಗಿ ಬರುವ ತನಕ ಹೇಳುತ್ತಲೇ ಇದ್ದರು. ಕೆಲಸ ಸಿಕ್ಕು ಎರಡು ವರ್ಷಕ್ಕೆ ಮದುವೆಯೂ ಆಗಿಬಿಟ್ಟಿತು. ಎಲ್ಲಾ ಗಂಡ-ಹೆಂಡತಿಯರಿಗೆ ಇರುವಷ್ಟೇ ವಯಸ್ಸಿನ ಅಂತರ ನನಗೂ ನನ್ನ ಪತಿಗೂ ಇದ್ದರೂ ಚಿಕ್ಕವಳಂತೆ ಕಾಣುವ ನನ್ನಿಂದಾಗಿ ಚಿಕ್ಕ ಹುಡುಗಿಯನ್ನು ಮದುವೆಯಾಗಿದ್ದಾನೆ ಅಂತ ಕೆಲವರು ಬಾಯಿ ಬಿಟ್ಟೆ ಹೇಳುವಾಗ ಅವರಿಗಿರಲಿ ನನಗೇ ಮುಜುಗರವಾಗುತ್ತಿತ್ತು.
ನನ್ನ ಸಾಹಿತ್ಯ ಗೆಳತಿಯೊಬ್ಬರೊಂದಿಗೆ ಒಮ್ಮೆ ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಲ್ಲಿದ್ದವರು ಕುಶಲೋಪರಿ ಮಾತನಾಡುತ್ತಾ, “ಮೇಡಂ ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಾ ಇದ್ದಾರೆ’ ಅಂತ ಕೇಳಿದಾಗ “ನನಗೆ ಒಬ್ಬಳೇ ಮಗಳು, ಕಾಲೇಜು ಓದ್ತಾ ಇದ್ದಾಳೆ’ ಅಂದೆ. “ಹೌದಾ ಮೇಡಂ, ನಾನೇನೂ ಪ್ರೀಕೆಜಿ ಓದ್ತಾ ಇರಬೇಕು ಅಂದುಕೊಂಡಿದ್ದೆ’ ಅಂತ ಹೇಳಿ ನನ್ನ ಗೆಳೆತಿಯತ್ತ ತಿರುಗಿ “ನಿಮ್ಮ ಮಕ್ಕಳೂ ಕೂಡಾ ಕಾಲೇಜು ಅಲ್ವಾ’ ಅಂತ ಕೇಳಿ ಬಿಟ್ಟರು. ಅವರು ತಕ್ಷಣವೇ “ಇಲ್ಲ , ಇಲ್ಲ ನನ್ನ ಮಗಳು ಪ್ರೀಕೆಜಿ’ ಅಂತ ಹೇಳಿದರು. ಕಾರ್ಯಕ್ರಮ ಮುಗಿಸಿ ಬರುವಾಗ “ನೋಡಿ ಮೇಡಂ, ನಿಮಗೆ ಪ್ರೀಕೆಜಿ ಮಗಳಿದ್ದಾಳೆ ಅಂತ ಧಾರಾಳವಾಗಿ ಹೇಳಬಹುದು, ನನ್ನ ನೋಡಿದ್ರೆ ನಿಮ್ಮ ಮಕ್ಕಳು ಡಿಗ್ರಿ ಓದ್ತಾ ಇದ್ದಾರಾ ಅಂತ ಎಲ್ಲರೂ ಕೇಳ್ತಾರೆ’ ಅಂತ ಬೇಸರ ಮಾಡಿಕೊಳ್ಳುತ್ತಿದ್ದರು.
ನಾನು ಮಗಳನ್ನು ಕಾರ್ಯಕ್ರಮಕ್ಕೊ, ಮತ್ತೆಲ್ಲಿಗೋ ಜೊತೆಯಲ್ಲಿ ಕರೆದುಕೊಂಡು ಹೋದಾಗ ಗೊತ್ತಿಲ್ಲದ ಕೆಲವರು, “ನಿಮ್ಮ ತಂಗಿಯಾ’ ಅಂತ ಕೇಳಿದರೆ, ಮತ್ತೆ ಕೆಲವರು, “ನಿಮ್ಮ ಸಹೋದ್ಯೋಗಿಯೇ’ ಅಂತ ಕೇಳಿ ಮುಜುಗರ ಉಂಟು ಮಾಡಿಬಿಡುತ್ತಿದ್ದರು. ಆಗಂತೂ ಮಗಳು ಮುನಿಸಿನಿಂದ “ನಿನ್ನ ಜೊತೆ ನಾನು ಬರುವುದೇ ಇಲ್ಲ’ ಅಂತ ಸಿಡಿಮಿಡಿಗೊಳ್ಳುತ್ತಿದ್ದಳು. ಮಗಳು ಕೂಡ ಅಪ್ಪನಂತೆ ಅಲಂಕಾರ ಮಾಡಿಕೊಳ್ಳುವುದರಲ್ಲಿ ನಿರಾಸಕ್ತೆ. ಬೇಗ ಮದುವೆಯಾಗಿ ಮೊಮ್ಮಗುವನ್ನು ಕೊಟ್ಟಿದ್ದರೆ ಅದು ಅಜ್ಜಿ ಅಂತ ಕರೆಯುವಾಗ ನನಗೆ ಅಜ್ಜಿಯಾಗುವಷ್ಟು ವಯಸ್ಸಾಗಿದೆ ಅಂತಲಾದರೂ ಗೊತ್ತಾಗುತ್ತಿತ್ತು. ಮಹಾತಾಯಿ ಮದುವೆಗೆ ಮನಸ್ಸೇ ಮಾಡುತ್ತಿಲ್ಲ. ಆ ಚಿಂತೆಯಲ್ಲಿ ನನಗೆ ಈಗೀಗ ಕೂದಲು ಬೆಳ್ಳಗಾಗಿ ಮುಖದಲ್ಲಿ ನೆರಿಗೆ ಕಾಣಬಹುದು ಅಂತ ಕಾಯುತ್ತಿದ್ದೇನೆ. ಮಗಳು ಕೂಡಾ “ನಿನಗೆ ಯಾವ ಚಿಂತೆಯೂ ಇಲ್ಲವಲ್ಲ ಅದಕ್ಕೆ ನನ್ನ ಅಕ್ಕನಂತೆ ಕಾಣುತ್ತಿದ್ದಿಯಾ, ಇನ್ನೂ ಸ್ವಲ್ಪ ದಿನ ನಾನು ಮದುವೆನೇ ಆಗಲ್ಲ. ಆಗಲಾದರೂ ವಯಸ್ಸಾದವಳಂತೆ ಕಾಣಿಸುತ್ತಿಯಾ’ ಅಂತ ಛೇಡಿಸುತ್ತಿರುತ್ತಾಳೆ. ಹಾಗಾಗಿ ಇತ್ತೀಚೆಗೆ ನಾನು ನನ್ನ ವಯಸ್ಸಿಗಿಂತ ಚಿಕ್ಕವಳಂತೆ ಕಾಣದೆ ನನ್ನ ವಯಸ್ಸಿಗೆ ತಕ್ಕಂತೆ ಕಾಣಬೇಕು ಅಂತ ತೀರ್ಮಾನ ಮಾಡಿಕೊಂಡಿದ್ದೇನೆ.
ಶೈಲಜಾ ಹಾಸನ