Advertisement

ಅಗತ್ಯತೆಗೆ ತಕ್ಕಂತೆ ಇಎಸ್‌ಐ ಆಸ್ಪತ್ರೆ ಹೆಚ್ಚಳ 

05:28 PM Oct 26, 2018 | Team Udayavani |

ಹುಬ್ಬಳ್ಳಿ: ಕೇಂದ್ರ ಸರಕಾರ ದೇಶದ ಕಾರ್ಮಿಕರ ಹಿತ ಚಿಂತನೆಗೆ ಮೊದಲ ಆದ್ಯತೆ ನೀಡಿದ್ದು, ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಅಗತ್ಯಕ್ಕೆ ತಕ್ಕಂತೆ ಇಎಸ್‌ಐ ಚಿಕಿತ್ಸಾಲಯಗಳನ್ನು ಆರಂಭಿಸಲಾಗುವುದು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಹಾಯಕ ಸಚಿವ ಸಂತೋಷ ಕುಮಾರ ಗಂಗ್ವಾರ್‌ ಹೇಳಿದರು. ಇಲ್ಲಿನ ಅರವಿಂದ ನಗರದಲ್ಲಿರುವ ಇಎಸ್‌ಐ ಆಸ್ಪತ್ರೆಯನ್ನು 100 ಹಾಸಿಗೆ ಮೇಲ್ದರ್ಜೆಗೇರಿಸುವ ಕಟ್ಟಡಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯವನ್ನಷ್ಟೇ ಅಲ್ಲದೆ ಹೊರರೋಗಿ, ಒಳರೋಗಿ, ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸಾ ವಿಭಾಗಗಳನ್ನು ಕೂಡ ಮೇಲ್ದಜೆಗೇರಿಸಲಾಗುತ್ತಿದೆ. ಕಾರ್ಮಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಗಳ ಬಲವರ್ಧನೆಗೆ ಕೇಂದ್ರ ಸರಕಾರ ಮುಂದಾಗಿದೆ. ಹತ್ತು ಹಲವು ಯೋಜನೆಗಳನ್ನು ಕಾರ್ಮಿಕರಿಗೆ ನೀಡಲಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

Advertisement

ರಾಜ್ಯ ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾತನಾಡಿ, ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಹಲವು ಪ್ರಸ್ತಾವನೆಗಳನ್ನು ಕಳುಹಿಸಿದರೂ ಅನುಮೋದನೆ ದೊರೆಯುತ್ತಿಲ್ಲ. ಶಿವಮೊಗ್ಗ, ಕೊಪ್ಪಳ, ಕೋಲಾರ, ರಾಮನಗರದಲ್ಲಿ ಹೊಸ ಆಸ್ಪತ್ರೆಗಳ ಪ್ರಸ್ತಾವನೆ, 15 ಚಿಕಿತ್ಸಾಲಯಗಳ ಪೈಕಿ 5ಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು. 

ಕಲಬುರಗಿ ವೈದ್ಯಕೀಯ ವಿಭಾಗದಲ್ಲಿ ಆಯುಷ್‌ ವಿಭಾಗ ಆರಂಭಿಸಲು ಎಲ್ಲಾ ಸೌಲಭ್ಯಗಳಿದ್ದರೂ ಕೇಂದ್ರದಿಂದ ಅನುಮತಿ ದೊರೆಯುತಿಲ್ಲ. ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದ್ದು, ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿಲ್ಲ. ಇದನ್ನು ಸರಿಪಡಿಸಿ ಕಾರ್ಮಿಕರ ಕಲ್ಯಾಣಕ್ಕೆ ಸಹಕರಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಇಎಸ್‌ಐ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ ಸರಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು. ದಕ್ಷಿಣ ಭಾರತದ ಇಎಸ್‌ಐ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಸೇವೆ ದೊರಕುವ ನಿಟ್ಟಿನಲ್ಲಿ ಒತ್ತು ನೀಡಬೇಕು. ಕಿಮ್ಸ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದು, ಇದರ ಉದ್ಘಾಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ. ಇದರಿಂದ ಈ ಭಾಗದ ಜನರಿಗೆ ಉತ್ತಮ ಚಿಕಿತ್ಸೆ ದೊರೆಯಲಿದೆ ಎಂದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಇಎಸ್‌ಐ ಆಸ್ಪತ್ರೆಯ ಹಳೇ ಕಟ್ಟಡ ಉತ್ತಮವಾಗಿದ್ದು, ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಚಿಂತನೆ ನಡೆಸಿರುವುದು ಸರಿಯಲ್ಲ. ಕೇಂದ್ರ ಸರಕಾರ ಕಾರ್ಮಿಕರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ನೀಡಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

Advertisement

ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಮಹಾಪೌರ ಸುಧೀರ ಸರಾಫ್, ಕಾರ್ಮಿಕರ ರಾಜ್ಯ ವಿಮಾ ನಿಗಮದ ಪ್ರಾದೇಶಿಕ ನಿರ್ದೇಶಕ ಜೆ.ಎಚ್‌.ನಾಯಕ, ಕಾರ್ಮಿಕರ ರಾಜ್ಯ ವಿಮಾ ವೈದ್ಯಕೀಯ ಸೇವೆಗಳ ನಿರ್ದೇಶಕ ಡಾ| ಡಿ.ಎಸ್‌.ಕುಮಾರ ಇನ್ನಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next