ಹುಬ್ಬಳ್ಳಿ: ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ತಮ್ಮ ಪುತ್ರನಿಗೆ ರಾಣಿಬೆನ್ನೂರ ಕ್ಷೇತ್ರದ ಟಿಕೆಟ್ ಕೇಳಿರಲಿಲ್ಲ, ಅದೆಲ್ಲ ಮಾಧ್ಯಮದ ಸೃಷ್ಟಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸಲು ಯಾವುದೇ ಲಾಬಿ ಮಾಡಿಲ್ಲ. ರಾಣಿಬೆನ್ನೂರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಯಾವುದೇ ಸಮಿತಿ ರಚಿಸಿಲ್ಲ. ಅಭ್ಯರ್ಥಿ ಆಯ್ಕೆಗಾಗಿ ಸಮಿತಿ ರಚನೆ ಮಾಡುವ ಪದ್ಧತಿ ನಮ್ಮ ಪಕ್ಷದಲ್ಲಿಲ್ಲ. ರಾಣಿಬೆನ್ನೂರಿನಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಅರುಣಕುಮಾರ ಹೆಸರು ಫೈನಲ್ ಆಗಿದೆ. ಅದರಲ್ಲಿ ಯಾವುದೇ ಬದಲಾವಣೆಯಿಲ್ಲ. ಪ್ರತಿ ಚುನಾವಣೆಯಲ್ಲೂ ಆಕಾಂಕ್ಷಿಗಳಿಗೆ ಟಿಕೆಟ್ ಸಿಗದಿದ್ದಾಗ ಅಸಮಾಧಾನ ಸಹಜ. ಗೆಲ್ಲುವ ಪಕ್ಷದಲ್ಲಿ ಅಸಮಾಧಾನ ಹೆಚ್ಚಾಗಿರುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ನಮ್ಮ ಮುಖಂಡರು ಬಂಡಾಯ ಶಮನ ಮಾಡಲಿದ್ದಾರೆ. ಗೋಕಾಕ ಕ್ಷೇತ್ರದಲ್ಲಿ ಅಶೋಕ ಪೂಜಾರ ಅವರ ಬಂಡಾಯ ತಣ್ಣಗಾಗಿಸಲಾಗುವುದು. 15 ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು 12-13 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.