Advertisement

ಮತ್ತೆ ಬಿಜೆಪಿ ಸೇರ್ಪಡೆಗೆ ಕೆ.ಎಸ್‌. ಈಶ್ವರಪ್ಪ ಯತ್ನ

12:57 AM Jun 22, 2024 | Team Udayavani |

ಬೆಂಗಳೂರು: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಅವರ ಸ್ವಗೃಹ ಪುನರ್‌ ಪ್ರವೇಶಕ್ಕೆ ಈಗ ಪಕ್ಷದ ತೆರೆಮರೆಯಲ್ಲಿ ಚಟುವಟಿಕೆ ಪ್ರಾರಂಭವಾಗಿದ್ದು, ರಾಷ್ಟ್ರೀಯ ವರಿಷ್ಠರಿಂದ ಇನ್ನೂ ಈ ಪ್ರಕ್ರಿಯೆಗೆ ಹಸುರು ನಿಶಾನೆ ದೊರೆತಿಲ್ಲ ಎಂದು ಹೇಳಲಾಗುತ್ತಿದೆ.

Advertisement

ಲೋಕಸಭಾ ಚುನಾವಣೆ ಫ‌ಲಿತಾಂಶ ಪ್ರಕಟವಾಗುತ್ತಿದ್ದಂತೆ ಪಕ್ಷದ ಒಂದು ಬಣ ಸಂಘ-ಪರಿವಾರದ ನಾಯಕರ ಮೂಲಕ ಈ ಪ್ರಕ್ರಿಯೆ ಪ್ರಾರಂಭಿಸಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಖುದ್ದು ಈಶ್ವರಪ್ಪನವರೇ ಹಿರಿಯರ ಜತೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ವರಿಷ್ಠರು ಒಪ್ಪಿದರೆ ಶೀಘ್ರ ಘರ್‌ ವಾಪ್ಸಿ ನಿಶ್ಚಿತ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಬಿ.ಎಸ್‌. ಯಡಿಯೂರಪ್ಪ ಬಣ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು ಅಂದುಕೊಂಡಷ್ಟು ಸರಳವಾಗಿ ವಿವಾದ ಇತ್ಯರ್ಥವಾಗುವ ಸಾಧ್ಯತೆ ಕಡಿಮೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧೆ ಮಾಡುವ ಮೂಲಕ ಈಶ್ವರಪ್ಪ ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ.

ಯಡಿಯೂರಪ್ಪ ಹಾಗೂ ಕುಟುಂಬ ವರ್ಗದ ವಿರುದ್ಧ ಏಕಪಕ್ಷೀಯ ವಾಗ್ಧಾಳಿ ನಡೆಸಿ ಆಡಳಿತಾರೂಢ ಕಾಂಗ್ರೆಸ್‌ಗೆ ಹಲವು ಅಸ್ತ್ರಗಳನ್ನು ಈಶ್ವರಪ್ಪ ನೀಡಿದ್ದಾರೆ.

ಹೀಗಾಗಿ ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು ಎಂಬುದು ಈ ಬಣದ ವಾದ. ಸಂಘ-ಪರಿವಾರದಲ್ಲೂ ಯಡಿಯೂರಪ್ಪ ಪರ ಬ್ಯಾಟಿಂಗ್‌ ಮಾಡುವ ಹಿರಿಯರು ಈ ವಾದಕ್ಕೆ ಮನ್ನಣೆ ನೀಡುತ್ತಿದ್ದು ಈಶ್ವರಪ್ಪ ಪಕ್ಷೇತರ ಸ್ಪರ್ಧೆ ಮಾಡಿದ್ದು ಕೂಡ ಸ್ವಾರ್ಥಕ್ಕಾಗಿಯೇ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದೇ ರೀತಿ ಯಡಿಯೂರಪ್ಪ ಬೇರೆ ಪಕ್ಷ ಮಾಡಿರಲಿಲ್ಲವೇ? ಎಂಬ ಮಾತು ಕೇಳಿ ಬಂದಿದೆ.

Advertisement

ಸಂತೋಷ್‌ ಅಸಮಾಧಾನ?
ಈ ಎರಡೂ ವಾದಗಳು ಏನೇ ಇದ್ದರೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕಿದೆ. ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಈಶ್ವರಪ್ಪ ಪರ ನಿಲುವು ತೆಗೆದುಕೊಳ್ಳಬಹುದೆಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬಂದಿತ್ತು. ಆದರೆ ಪದವೀಧರ ಕ್ಷೇತ್ರದ ಚುನಾವಣ ಪ್ರಚಾರಕ್ಕಾಗಿ ಉಡುಪಿಗೆ ಬಂದಿದ್ದ ಸಂದರ್ಭದಲ್ಲಿ ಈಶ್ವರಪ್ಪ ಹಾಗೂ ರಘುಪತಿ ಭಟ್‌ ಇಬ್ಬರ ವಿರುದ್ಧವೂ ತಮ್ಮ ಭಾಷಣದಲ್ಲಿ ಸಂತೋಷ್‌ ಅಸಮಾಧಾನ ಹೊರ ಹಾಕಿದ್ದರು. ಹೀಗಾಗಿ ಈ ಪ್ರಸ್ತಾವವನ್ನು ಸಂತೋಷ್‌ ರಾಷ್ಟ್ರೀಯ ನಾಯಕರ ಬಳಿ ಪ್ರಸ್ತಾವಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಬಿಎಸ್‌ವೈ ಮೇಲೆ ದ್ವೇಷವಿಲ್ಲ?
ನಾನು ಯಡಿಯೂರಪ್ಪ ವಿರುದ್ಧ ಮಾತ್ರ ಮಾತ ನಾಡಿದ್ದೇನೆ. ಆದರೆ ನನ್ನ ಮಗ ಕಾಂತೇಶ್‌ ಎಲ್ಲಿಯೂ ಮಾತನಾಡಿಲ್ಲ. ಯಡಿಯೂರಪ್ಪ ವಿರುದ್ಧ ನನಗೆ ಯಾವುದೇ ದ್ವೇಷವೂ ಇಲ್ಲ ಎಂದು ಈಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next