ಶಿವಮೊಗ್ಗ: ಡಿ ಕೆ ಶಿವಕುಮಾರ್ ಅವರನ್ನು ಇಡಿ ಅವರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯನ್ನೂ ನಡೆಸಲಿದ್ದಾರೆ. ಡಿಕೆಶಿ ಅವರ ತಾಯಿ ಕಣ್ಣೀರು ಹಾಕಿದ್ದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಯಾರಿಗೂ ಆ ಸ್ಥಿತಿ ಬರಬಾರದು. ಜೊತೆಗೆ ಆ ಸ್ಥಿತಿ ಬರದಂತೆ ನೋಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ದ್ವೇಷದ ರಾಜಕಾರಣ ಆರೋಪ ಆಡಳಿತ ಪಕ್ಷದ ಮೇಲೆ ಬರುವುದು ಸಹಜ.
ಕಾಂಗ್ರೆಸ್ ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನಾವೂ ಕೂಡ ಅನುಭವಿಸಿದ್ದೇವೆ ಎಂದರು.
ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾದರೆ ಅನಿವಾರ್ಯವಾಗಿ ಕರ್ನಾಟಕದಲ್ಲಿ ಪ್ರವಾಹ ಬರುತ್ತದೆ. ಪ್ರವಾಹವನ್ನು ನಾವು ಸಮರ್ಥವಾಗಿ ಎದುರಿಸಬೇಕಾಗಿದೆ. ಪ್ರಾಥಮಿಕವಾಗಿ ಸಂತ್ರಸ್ಥರಿಗೆ ಹತ್ತು ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದು ಬಿಜೆಪಿ ಸರ್ಕಾರ. ಹತ್ತು ಸಾವಿರ ಪರಿಹಾರವನ್ನು ಶೇಕಡಾ 99 ರಷ್ಟು ಸಂತ್ರಸ್ಥರಿಗೆ ಈಗಾಗಲೇ ಹಂಚಿಕೆ ಮಾಡಲಾಗಿದೆ ಎಂದರು.
ಶಿಕ್ಷಕರ ವರ್ಗಾವಣೆಯ ಬಗ್ಗೆ ಮಾತನಾಡಿದ ಈಶ್ವರಪ್ಪ, ಶಿಕ್ಷಕರ ವರ್ಗಾವಣೆಯಲ್ಲಿ ಹಿಂದಿನ ಸರ್ಕಾರ ಸಮಸ್ಯೆ ಮಾಡಿಟ್ಟಿದೆ. ಆದರೆ ಈಗ ಶಿಕ್ಷಕಿಯ ಪುತ್ರನಾದ ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಿದ್ದು, ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದಾರೆ. ಆದಷ್ಟು ಬೇಗನೆ ದಂಪತಿಗಳ ವರ್ಗಾವಣೆ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.