ಶಿವಮೊಗ್ಗ: ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಂಡರೇ ಕಾಂಗ್ರೆಸ್ ನವರಿಗೆ ಸಮಾಧಾನ ಅಗುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶಂಕಿತ ಉಗ್ರನ ಪರ ಮಾತನಾಡಿದ್ದಾರೆ. ಕುಕ್ಕರ್ ಬ್ಲಾಸ್ಟ್ ಮಾಡಿದವನು ಭಯೋತ್ಪಾದಕ ಅಲ್ಲಾ ಎನ್ನುತ್ತಿದ್ದಾರೆ. ಅಧಿಕಾರ ನಡೆಸಿದ ಡಿಕೆಶಿ ಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೋಗಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾರೀಕ್ ವಿರುದ್ಧ ದೇಶದ್ರೋಹದ ಹಲವು ಕೇಸ್ ಗಳಿವೆಯೆಂದು ಡಿಜಿ ಹೇಳಿದ್ದಾರೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮೈಯಲ್ಲಿ ಭುಟ್ಟೋ, ಜಿನ್ನಾ ರಕ್ತ ಹರಿಯುತ್ತಿದೆ. ಡಿಕೆ ಶಿವಕುಮಾರ್ ಹೇಳಿಕೆಯನ್ನು ಒಬ್ಬ ಕಾಂಗ್ರೆಸ್ ನಾಯಕನು ಖಂಡಿಸುವ ಕೆಲಸ ಮಾಡಿಲ್ಲ ಎಂದರು.
ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ನಿಂದಲೇ ವಜಾ ಮಾಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆಯವರಿಗೆ ಒತ್ತಾಯ ಮಾಡುತ್ತೇನೆ. ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಕಾಂಗ್ರೆಸ್ ನಾಯಕರಿಗೆ ಡಿಕೆ ಶಿವಕುಮಾರ್ ಅಪಮಾನ ಮಾಡುತ್ತಿದ್ದಾರೆ. ದೇಶದ್ರೋಹಿಯ ನಾಯಕತ್ವದಲ್ಲಿ ರಾಜ್ಯದ ಕಾಂಗ್ರೆಸ್ ಬೆಳೆದರೆ, ಮತ್ತೆ ಭಯೋತ್ಪಾದನೆಗೆ ಬೆಂಬಲ ಕೊಡುತ್ತಾರೆ. ಡಿಕೆಶಿ, ನಲಪಾಡ್ ಅವರನ್ನು ಮೊದಲು ಹೊರಹಾಕಿ. ಬಾಂಬ್ ತಯಾರು ಮಾಡುವವರು, ದೇಶದ್ರೋಹಿಗಳಿಗೆ ಬೆಂಬಲ ಕೊಡಬೇಡಿ ಎಂದು ಹೇಳಿ ಎಂದು ಈಶ್ವರಪ್ಪ ಆಗ್ರಹಿಸಿದರು.
ದೇಶದ್ರೋಹದ ಕಾರಣಕ್ಕೆ ಪಿಎಫ್ಐ ಅನ್ನು ಮೋದಿ ಸರ್ಕಾರ ಬ್ಯಾನ್ ಮಾಡಿತ್ತು. ಪಿಎಫ್ಐ ಬ್ಯಾನ್ ಮಾಡಿದಾಗಲೂ ಡಿಕೆ ಶಿವಕುಮಾರ್ ಹೀಗೆ ಹೇಳಿದ್ದರು. ಡಿಕೆಶಿ, ನಲಪಾಡ್ ರಂತವರು ಮುಂದುವರೆದರೆ ಕಾಂಗ್ರೆಸ್ ಕೂಡ ದೇಶದ್ರೋಹಿ ಪಕ್ಷವಾಗುತ್ತದೆ. ಪಿಎಫ್ಐ ರೀತಿಯಲ್ಲಿ ಕಾಂಗ್ರೆಸ್ ಅನ್ನು ಬ್ಯಾನ್ ಮಾಡುವ ಸ್ಥಿತಿ ಆದಷ್ಟು ಬೇಗ ಬರುತ್ತದೆ. ಡಿಕೆಶಿ ಹಾಗೂ ನಲಪಾಡ್ ರನ್ನು ಗೂಂಡಾ ಕಾಯ್ದೆಯಡಿ ರಾಜ್ಯದಿಂದ ಗಡಿಪಾರು ಮಾಡಲಿ ಎಂದು ಈಶ್ವರಪ್ಪ ಹೇಳಿದರು.