Advertisement

ಇಂದಿರಾಗಾಂಧಿಗೆ ಧಿಕ್ಕಾರ ಕೂಗಿದವರಿಂದು ಕಾಂಗ್ರೆಸ್ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿದ್ದಾರೆ

02:49 PM Aug 07, 2022 | Team Udayavani |

ಶಿವಮೊಗ್ಗ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನಡುವಿನ ಮಾತಿನ ಮುಂದುವರಿದಿದೆ. ಇದೀಗ ಸಿದ್ದುರಾಮಯ್ಯ ವಿರುದ್ಧ ಗುಡುಗಿರುವ ಈಶ್ವರಪ್ಪ, “ಇಂದಿರಾ ಗಾಂಧಿಗೆ ಧಿಕ್ಕಾರ ಕೂಗಿದವರಿಂದು ಕಾಂಗ್ರೆಸ್ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿದ್ದಾರೆ” ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

Advertisement

ಸ್ವಾತಂತ್ರ್ಯ ಅಮೃತ ಮಹೋತ್ಸವ ನಡೆಯುತ್ತಿದೆ. ಯಾರು ಕಾಂಗ್ರೆಸ್ ಪಕ್ಷವನ್ನು ಛೀಮಾರಿ ಹಾಕಿದರೋ, ಯಾರು ಇಂದಿರಾ ಗಾಂಧಿಯನ್ನು ಸರ್ವಾಧಿಕಾರಿ ಎಂದು ಹೇಳಿ ಘೋಷಣೆ ಕೂಗಿದರೋ, ಯಾರು ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿ, ಶಿಕ್ಷೆ ಅನುಭವಿಸಿದ್ದರೋ, ಅದರಲ್ಲಿದ್ದ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಹೋಗಿ, ಜವಾಬ್ದಾರಿ ತಗೊಂಡು, ಜೈ ಅನ್ನುತ್ತಿದ್ದಾರೆ. ಅಂತಹ ದುಸ್ಥಿತಿ ಕೆಲವರಿಗೆ ಬಂದಿದೆ. ಅಧಿಕಾರದಾಹಿಗಳು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಾಗಿದ್ದಾರೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಯಾರಿಗೆ ಬೇಕಾದರೂ ಜೈ ಎನ್ನಬಹುದು. ಅಧಿಕಾರದ ಒಂದೇ ಆಸೆಗಾಗಿ ಜೈಲಲ್ಲಿ ಇದ್ದವರು ಜೈ ಎನ್ನುತ್ತಿದ್ದಾರೆ. ಇಂದಿರಾ ಗಾಂಧಿಗೆ ಧಿಕ್ಕಾರ ಕೂಗಿದವರೇ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಜನರು ಇದನ್ನು ಗಮನಿಸುತ್ತಿದ್ದಾರೆ. ಅಂತಹ ಕಾಂಗ್ರೆಸ್ ಪಕ್ಷ ಹಾಗೂ ನಾಯಕರನ್ನು ನಿರ್ನಾಮ ಮಾಡಿ ಮನೆಗೆ ಕಳುಹಿಸಿದ್ದಾರೆ. ಆದರೂ, ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ ಎಂದು ಈಶ್ವರಪ್ಪ ವಾಗ್ದಾಳಿ ಮಾಡಿದರು.

ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆಸಿದ್ದು ಸಿದ್ದರಾಮೋತ್ಸವವಲ್ಲ. ಅದು ಚುನಾವಣೋತ್ಸವ. ಅಂದು ಚುನಾವಣೋತ್ಸವಕ್ಕೆ ಬಂದ ಜನರೇ ಕಾಂಗ್ರೆಸನ್ನು ಮಣ್ಣು ಮುಕ್ಕಿಸಲಿದ್ದಾರೆ. ಡಿ.ಕೆ.ಶಿವಕುಮಾರ್ ಗೆ ಒಂದು ಕ್ಷೇತ್ರವಾದರೂ ಇದೆ ಆದರೆ ಸಿದ್ದರಾಮಯ್ಯಗೆ ಒಂದು ಕ್ಷೇತ್ರವೂ ಇಲ್ಲ. ತನಗೆಂದು ಒಂದು ಕ್ಷೇತ್ರವೂ ಇಲ್ಲದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ:ಪಾಕ್: ಜನಪ್ರತಿನಿಧಿಯನ್ನು ಗುರಿಯಾಗಿರಿಸಿ ಗುಂಡಿನ ದಾಳಿ; ಪೊಲೀಸರು ಸೇರಿ ನಾಲ್ವರು ಬಲಿ

Advertisement

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಆಲಂಗಿಸಿಕೊಂಡ ವಿಚಾರಕ್ಕೆ ಕಿಡಿಕಾರಿದ ಅವರು, ಅದನ್ನೂ ಅವರ ಪಕ್ಷದ ವರಿಷ್ಟ ರಾಹುಲ್ ಗಾಂಧಿ ಹೇಳಿಕೊಡಬೇಕಾಯಿತು. ಕೆಲಕಾಲ ಜೊತೆಗೆ ಓಡಾಡಿದ ಪ್ರೇಮಿಗಳು ಬೇರೆಯಾಗಿರ್ತಾರೆ. ಬಳಿಕ ಕುಟುಂಬದವರೇ ಬುದ್ದಿ ಹೇಳಿ ಮದುವೆಗೆ ಒಪ್ಪಿಸಿ ತಬ್ಬಿಕೊಳ್ಳಿ ಎಂದು ಗದರುವಂತಿತ್ತು ಆ ದೃಶ್ಯ ಎಂದು ಲೇವಡಿ ಮಾಡಿದ ಈಶ್ವರಪ್ಪ, ಅಂದು ವೇದಿಕೆ ಕಾರ್ಯಕ್ರಮದ ಮಟ್ಟಿಗಷ್ಟೇ ತಬ್ಬಿಕೊಂಡರು. ವೇದಿಕೆಯಿಂದ ಕೆಳಗಿಳಿದ ಮೇಲೆ ಕೈಯಲ್ಲಿ ಏನು ತೆಗೆದುಕೊಂಡರೋ ಎಂದರು.

ಮುಂದಿನ ಚುನಾವಣೆ ಸ್ಪರ್ಧೆ ಕುರಿತು ಮಾತನಾಡಿದ ಅವರು, ಚುನಾವಣೆ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಸ್ಪರ್ಧೆ ಮಾಡು ಅಂದರೆ ಮಾಡುತ್ತೇನೆ. ಬೇಡ ಅಂದರೆ ಮಾಡುವುದಿಲ್ಲ ಎಂದರು.

ಸಚಿವ ಸಂಪುಟದ ಕುರಿತು ಮಾತನಾಡಿದ ಅವರು, ವಿಸ್ತರಣೆ ಕುರಿತು ಯಾವುದೇ  ಮಾಹಿತಿ ಇಲ್ಲ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧ. ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಮಂತ್ರಿಯಾಗಿದ್ರೂ ಪಕ್ಷ ಸಂಘಟನೆಗೆ ಕೆಲಸ ಮಾಡುತ್ತೇನೆ. ಆಗದಿದ್ದರೂ ಪಕ್ಷದ ಕೆಲಸ ಮಾಡುತ್ತೇನೆ. ಮುಂಬರುವ ಚುನಾವಣೆಯಲ್ಲಿ ಬಹುಮತ ತರಲಿಕ್ಕೆ ಕೆಲಸ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next