ಚಿತ್ರದುರ್ಗ: ”ಮುಖ್ಯಮಂತ್ರಿ ಸಿದ್ದರಾಮಯ್ಯ,ಸಚಿವ ಆಂಜನೇಯ ಅವರನ್ನು ಗಂಡು ಅಂತ ಕರಿಬೇಕೋ? ಹೆಣ್ಣು ಅಂತ ಕರಿಬೇಕೋ ?”ಎಂದು ಶನಿವಾರ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್‌ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
‘ಟಿಪ್ಪು ಜಯಂತಿ ಆಚರಣೆ ನಡೆಸಿದ್ದನ್ನು ವಿರೋಧಿಸಿ ಒನಕೆ ಓಬವ್ವ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಸಿಎಂ ಮತ್ತು ಸಚಿವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
‘ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರ ವಿರುದ್ಧ ಕಿಡಿ ಕಾರಿದರು. ಪೊಲೀಸರೊಂದಿಗೆ ನಾವು ಜಂಗಿ ಕುಸ್ತಿ ಆಡಲೂ ಸಿದ್ದರಿದ್ದೇವೆ’ ಎಂದರು.
‘ಸಚಿವ ಆಂಜನೆಯ ಸಿದ್ದರಾಮಯ್ಯ ಅವರ ಬಾಲ ಹಿಡಿದುಕೊಂಡು ಹೋಗುತ್ತಿದ್ದಾನೆ, ಇನ್ನು ಕೇವಲ ನಾಲ್ಕು ತಿಂಗಳು ಮಾತ್ರ ಬಾಲ ಆಡಿಸೋದು’ ಎಂದರು.
‘ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಬೆಂಬಲ ಕೊಡ್ತಾರೆ, ದೇಶ ಭಕ್ತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತಿರಲ್ಲಾ, ಸಿದ್ದರಾಮಯ್ಯ ಅವರನ್ನು ಗಂಡು ಅಂತ ಕರಿಬೇಕೋ? ಹೆಣ್ಣು ಅಂತ ಕರಿಬೇಕೋ?.ಪೊಲೀಸರೇ,ಈಗ ಹೇಳುವುದಿಲ್ಲ, ಇನ್ನೊಂದು ಪ್ರಕರಣ ದಾಖಲಿಸಿ ಆ ಮೇಲೆ ಹೇಳುತ್ತೇವೆ. ಇಲ್ಲಿ 50 ಸಾವಿರ ಜನ ಸೇರಿಸುತ್ತೇವೆ’ ಎಂದು ಗುಡುಗಿದರು.
ವೇದಿಕೆಯಲ್ಲಿ ಮಾಜಿ ಸಚಿವ ಸಿ.ಟಿ.ರವಿ.ಎ.ನಾರಾಯಣಸ್ವಾಮಿ ಮೊದಲಾದವರು ಹಾಜರಿದ್ದರು.
‘ಸಿದ್ದರಾಮಯ್ಯ ವೋಟಿಗಾಗಿ ಬೂಟು ನೆಕ್ಕಲು ಸಿದ್ದ’ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಅನಂತ್ ಕುಮಾರ್ ವಿರುದ್ಧ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.