ಬೆಂಗಳೂರು: ಶೌಚಾಲಯ ಬಳಕೆಯಾಗದಿರುವ ವಿಚಾರದಲ್ಲಿ ಮಾತನಾಡುವ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಿರ್ಮಾಣವಾಗಿರುವ ವೈಯಕ್ತಿಕ ಶೌಚಾಲಯ ಬಳಕೆಯಾಗದಿರುವ ವಿಚಾರದ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ,” ಶೌಚಾಲಯ ಬಳಕೆಯ ಬಗ್ಗೆ ನಿಖರವಾಗಿ ಉತ್ತರ ಕೊಡುವುದು ಕಷ್ಟ.ಬಳಕೆ ಮಾಡದೇ ಬಯಲು ಶೌಚಾಲಯ ಬಳಕೆ ಮಾಡಿದರೆ ಹೇಗೆ? ಬಯಲಿನಲ್ಲಿ ಹೋದರೆ ಅವರಿಗೆ ಆನಂದ ಸಿಕ್ಕರೆ ಎನು ಮಾಡೋಣ. ತಂಬಿಗೆ ಹಿಡಿದುಕೊಂಡು ಬಯಲಿನಲ್ಲಿ ಹೋದರೇ ಅವರಿಗೆ ಖುಷಿ. ಅದು ಆ ಭಗವಂತನಿಗೆ ಗೊತ್ತು” ಎಂದರು.
ವೈಯಕ್ತಿಕ ಶೌಚಾಲಯ ಎಷ್ಟು ಬಳಕೆ ಆಗುತ್ತಿದೆ? ಬಳಕೆ ಆಗದಿದ್ದರೆ ಇಲಾಖೆಯ ಯೋಜನೆಯ ವಿಫಲತೆ ಅಲ್ಲವೇ? ಎಂದು ಪ್ರಶ್ನಿಸಿದಾಗ ”ಅವರಿಗೆ ಜಾಗೃತಿ ಮೂಡಿಸಲು ಸ್ವಸಹಾಯ ಸಂಘ ಬಳಕೆ ಮಾಡುತ್ತಾ ಇದ್ದೇವೆ.ಈಗ ಮುಂಚಿಗಿಂತಲೂ ಉತ್ತಮ ಆಗಿದೆ.ನೀವು ಬಯಲಿಗೆ ಹೋಗಬೇಡಿ – ದಂಡ ಹಾಕುತ್ತೇವೆ ಅಂತ ಮಾಡುವುದಕ್ಕೆ ಆಗುವುದಿಲ್ಲ.ಅದರಲ್ಲೇ ಅವರು ಆನಂದ ಕಂಡರೆ ಎನು ಮಾಡೋಣ” ಎಂದರು.
”ಹಾಗಾದರೆ ಯೋಜನೆ ಅನುಷ್ಠಾನಗೊಳಿಸಲು ವಿಫಲ ಆದಂತೆ ಅಲ್ಲವೇ” ಎಂಬ ಪ್ರಶ್ನೆಗೆ ಆಕ್ಷೇಪಾರ್ಹ ಉತ್ತರ ನೀಡಿದ ಈಶ್ವರಪ್ಪ,”ಅಪ್ಪ ಅಮ್ಮ ಬಂಗಾರದಂತಹ ಒಳ್ಳೆಯ ಹುಡುಗಿಯನ್ನು ಮದುವೆ ಮಾಡಿ ಕೊಡುತ್ತಾರೆ. ನೀನು ಚೆನ್ನಾಗಿ ಬಳಸಿಕೊಳ್ಳದಿದ್ದರೆ ಎನು ಮಾಡೋಣ? ನೀವೇ ಹೇಳಿ”ಎಂದು ಪ್ರಶ್ನಿಸಿದರು.
”ನಾನು ಮೊದಲು ವಿಧಾನಸಭೆಗೆ ಬಂದಾಗಲೂ ಈ ವಿಚಾರ ಪ್ರಸ್ತಾಪ ಮಾಡುತ್ತಾ ಇದ್ದೇನೆ. ನಿಮ್ಮನೆ ಹೆಣ್ಮಕ್ಕಳು ಬೀದಿಗೆ ಬಂದರೆ ಸರಿಯೇ ? ಹೆಣ್ಮಕ್ಕಳು ಚೊಂಬು ಹಿಡಿದುಕೊಂಡು ಬೀದಿಗೆ ಹೋಗುತ್ತಾ ಇಲ್ವಾ..? ಹೆಣ್ಮಕ್ಕಳು ಜತೆಗೆ ಕುಳಿತುಕೊಳ್ಳಬೇಕು. ಪ್ರಪಂಚದ್ದು, ಮನೆಯದ್ದು, ಅಕ್ಕಪಕ್ಕದ ಮನೆಯ ಹೆಣ್ಮಕ್ಕಳ ವಿಚಾರ ಚರ್ಚೆ ಮಾಡಬೇಕು, ಅದರಲ್ಲೇ ಅವರಿಗೆ ಆನಂದ. ಪರಿಸ್ಥಿತಿ ಬದಲಾವಣೆ ಆಗಬೇಕು” ಎಂದು ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ.