ಬೆಂಗಳೂರು: ಕ್ಲೀನ್ ಚಿಟ್ ದೊರೆತರೂ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದ ಕಾರಣಕ್ಕೆ ವ್ಯಗ್ರರಾಗಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಿಎಂ ಬಸವರಾಜ್ ಬೊಮ್ಮಾಯಿ ಶಾಂತಗೊಳಿಸುವ ಪ್ರಯತ್ನ ನಡೆಸಿದ್ದು, ” ಪ್ರತಿರೋಧ” ತೋರಲು ಮುಂದಾಗಿದ್ದ ಈಶ್ವರಪ್ಪಕೊನೆ ಕ್ಷಣದ ಭರವಸೆಯಿಂದ ತುಸು ಶಾಂತರಾಗಿದ್ದಾರೆ.
ಹೀಗಾಗಿ ಬಹುನಿರೀಕ್ಷಿತ ಈಶ್ವರಪ್ಪ ಪತ್ರಿಕಾಗೋಷ್ಠಿ ಸಿಎಂಗೆ ಅಭಿನಂದನೆ ಸಲ್ಲಿಸುವುದರೊಂದಿಗೆ ಕೊನೆಯಾಗಿದ್ದು, ಸಂಪುಟ ಸೇರ್ಪಡೆ ವಿಚಾರದಲ್ಲಿ ಆಶಾವಾದಿಯಾಗಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.
ನನ್ನ ಮೇಲೆ ಆರೋಪ ಬಂದಾಗ ನಮ್ಮ ಕೇಂದ್ರನ ನಾಯಕರಿಗೆ, ರಾಜ್ಯದ ನಾಯಕರಿಗೆ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಅಂತ ಮನವಿ ಮಾಡಿದೆ. ಆಗ ಎಲ್ಲರೂ ಬೇಡ ಅಂತ ಹೇಳಿದ್ದರು. ಹಿಂದೆ ಕೆಜೆ ಜಾರ್ಜ್ ಮೇಲೆ ಆರೋಪ ಬಂದಾಗನಾನು ಮೇಲ್ಮನೆಯಲ್ಲಿ ಒತ್ತಾಯ ಮಾಡಿದ್ದೆ. ನೀವು ರಾಜಿನಾಮೆ ಕೊಡಿ, ತನಿಖೆ ಬಳಿಕ ಮತ್ತೆ ಸಂಪುಟ ಸೇರಿ ಅಂತ ಹೇಳಿದ್ದೆ. ಇದೇ ಉದಾಹರಣೆಯನ್ನು ಇಟ್ಟುಕೊಂಡು ಕೇಂದ್ರದ ನಾಯಕರಿಗೆ ಹೇಳಿದೆ. ಬಳಿಕ ಸರಿ ರಾಜಿನಾಮೆ ಕೊಡಿ ಅಂದರು. ಇದಾದ ಬಳಿಕ ನನ್ನ ಕೇಸ್ ನಲ್ಲಿ ಕ್ಲೀನ್ ಚಿಟ್ ಬಂತು. ಕ್ಲೀನ್ ಚಿಟ್ ಬಂದು ನಾಲ್ಕು ತಿಂಗಳಾಯ್ತು. ನಾನು ಮುಖ್ಯಮಂತ್ರಿಗಳ ಜೊತೆ ಕೂಡ ಮಾತಾಡ್ತಿದ್ದೆ. ಆದರೆ ಇಲ್ಲಿಯ ತನಕ ಕ್ಯಾಬಿನೆಟ್ ಗೆ ತೆಗೆದುಕೊಳ್ಳುವ ತೀರ್ಮಾನ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಉಡುಪಿ: ಡಿಸೆಂಬರ್ 24-25ರಂದು ಅಟಲ್ ಉತ್ಸವ; ರಾಷ್ಟ್ರಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ
ಇಂದು ಬೆಳಗ್ಗೆ ಸಿಎಂ ಟಿವಿಯೊಂದರ ಸಂದರ್ಶನದಲ್ಲಿ ಮಾತಾಡಿದ್ದಾರೆ. ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರನ್ನ ಕ್ಯಾಬಿನೆಟ್ ಗೆ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ಅವರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಅಂದಿದ್ದಾರೆ. ಹೀಗಾಗಿ ಸಿಎಂ ಅವರಿಗೂ ಹಾಗೂ ಕೇಂದ್ರದ ನಾಯಕರಿಗೂ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು.
ರಾಜ್ಯದಲ್ಲಿ ಬಿಜೆಪಿ ಬೆಳಗಣಿಗೆ 90 ರ ದಶಕದಲ್ಲಿ ವೇಗ ಪಡೆದುಕೊಂಡಿತ್ತು. ಅನಂತ್ ಕುಮಾರ್, ಯಡಿಯೂರಪ್ಪ ಜೊತಗೆ ಹೆಗಲಿಗೆ ಹೆಗಲು ಕೊಟ್ಟು ಪಕ್ಷಕ್ಕಾಗಿ ಪ್ರವಾಸ ಮಾಡಿದ್ದೆ. ಜಗದೀಶ್ ಶೆಟ್ಟರ್, ಜೋಷಿ, ಸದಾನಂದ ಗೌಡರು ಬಿಜೆಪಿ ಅಧ್ಯಕ್ಷರಾದ ಬಳಿಕ ಶಕ್ತಿ ಜಾಸ್ತಿಯಾಯ್ತು. ರಾಜ್ಯದಲ್ಲಿ 25 ಸೀಟ್ ಗೆಲ್ಲುವುದಕ್ಕೆ, ರಾಜ್ಯದಲ್ಲಿ ಅಧಿಕಾರ ಹಿಡಿಯುವುದಕ್ಕೆ ಇಷ್ಟು ಜನರ ಜೊತೆಗೆ ರಾಜ್ಯದ ಕಾರ್ಯಕರ್ತರ ಸಹಕಾರ ಇದೆ ಎಂದರು.