Advertisement

PM ಮೋದಿ ಸಭೆಗೆ ಈಶ್ವರಪ್ಪ ಗೈರು: ಬಿಜೆಪಿ ನಿರ್ಲಕ್ಷ್ಯ

12:48 AM Mar 19, 2024 | Shreeram Nayak |

ಶಿವಮೊಗ್ಗ: ಪುತ್ರನಿಗೆ ಟಿಕೆಟ್‌ ತಪ್ಪಿದ್ದರಿಂದ ಸಿಡಿದೆದ್ದಿರುವ ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಸೋಮವಾರ ಶಿವಮೊಗ್ಗದಲ್ಲಿ ನಡೆದ ಪ್ರಧಾನಿ ಮೋದಿ ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ಸೆಡ್ಡು ಹೊಡೆದಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ಕೂಡ ಅವರನ್ನು ನಿರ್ಲಕ್ಷಿಸಿದ್ದು, ಕಾರ್ಯಕ್ರಮದಲ್ಲಿ ಎಲ್ಲೂ ಅವರ ಹೆಸರನ್ನು ಪ್ರಸ್ತಾವಿಸದೇ ತಿರುಗೇಟು ನೀಡಿದೆ.

Advertisement

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಘೋಷಣೆಯ ಬಳಿಕ ಎರಡು ದಿನಗಳ ಕಾಲ ರಾಜ್ಯ, ರಾಷ್ಟ್ರ ನಾಯಕರು ನಡೆಸಿದ್ದ ಸಂಧಾನ ವಿಫ‌ಲವಾಗಿತ್ತು. ಸೋಮವಾರ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಆಗಮಿಸಬಹುದೆಂದು ಬಿಜೆಪಿ ನಾಯಕರು ನಿರೀಕ್ಷಿಸಿದ್ದರು. ಆದರೆ, “ನಾನು ಮೋದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದ ಈಶ್ವರಪ್ಪ ಜಿಲ್ಲೆಯ ವಿವಿಧ ಮಠಗಳಿಗೆ ತೆರಳಿ ಕಾರ್ಯಕ್ರಮದಿಂದ ದೂರ ಉಳಿದರು.

ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಮೋದಿ ಕಾರ್ಯಕ್ರಮದಲ್ಲಿ ಎಲ್ಲೂ ಈಶ್ವರಪ್ಪ ಅವರ ಹೆಸರು ಪ್ರಸ್ತಾವಿಸಲಿಲ್ಲ. ಬ್ಯಾನರ್‌ನಲ್ಲಿದ್ದ ಈಶ್ವರಪ್ಪ ಫೋಟೋ ಮಾತ್ರ ಹಾಗೇ ಇತ್ತು. ಅಲ್ಲದೆ ಕೊನೆಯ ಘಳಿಗೆಯಲ್ಲಿ ಅವರು ಮನಸ್ಸು ಬದಲಾಯಿಸಿ ಬರಬಹುದೆಂಬ ನಿರೀಕ್ಷೆಯಲ್ಲಿ ವೇದಿಕೆ ಮೇಲೆ ಅವರಿಗಾಗಿ ಆಸನ ಕಾದಿರಿಸಲಾಗಿತ್ತು. ಈಶ್ವರಪ್ಪ ಬಾರದ ಹಿನ್ನೆಲೆಯಲ್ಲಿ ಆ ಕುರ್ಚಿಯಲ್ಲಿ ಬೇರೊಬ್ಬ ನಾಯಕ ಆಸೀನರಾದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹಿತ ಯಾವೊಬ್ಬ ಬಿಜೆಪಿ ನಾಯಕರೂ ಈಶ್ವರಪ್ಪ ಮನವೊಲಿಕೆಯ ಕಸರತ್ತು ಮಾಡಲಿಲ್ಲ.

ರಾಘವೇಂದ್ರ ಪರ ಮತ ಯಾಚನೆ ಹೇಗೆ ಸಹಿಸಲಿ?
ಶಿವಮೊಗ್ಗ: “ನಾನು ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಅದರಲ್ಲಿ ನಾನು ಭಾಗವಹಿಸಿದರೆ ಮೋದಿಯವರು ನನ್ನ ಮುಂದೆಯೇ ಬಿಎಸ್‌ವೈ ಪುತ್ರ ರಾಘವೇಂದ್ರನ ಪರ ಮತ ಕೇಳುತ್ತಾರೆ. ಆಗ ನಾನೇನು ಮಾಡಲಿ’ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಸಂಘ ಪರಿವಾರದ ಮುಖಂಡರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಸೋಮವಾರ ಬೆಳಗ್ಗೆ ಸಂಘ ಪರಿವಾರದ ರಾಜ್ಯ ಪ್ರಮುಖರಾದ ಗೋಪಾಲ್‌ ಅವರು ಈಶ್ವರಪ್ಪ ಅವರಿಗೆ ಕರೆ ಮಾಡಿ ಸಮಾಧಾನ ಮಾಡಲು ಯತ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಜನರ ಆಶೀರ್ವಾದದಿಂದ ಗೆದ್ದು ಮೋದಿ ಅವರನ್ನು ಭೇಟಿ ಮಾಡುತ್ತೇನೆ. ಆದರೆ ಈಗ ಮೋದಿ ಕಾರ್ಯಕ್ರಮಕ್ಕೆ ಹೋದರೆ ರಾಘವೇಂದ್ರ ಪರ ಮತ ಯಾಚಿಸಬೇಕಾಗುತ್ತದೆ. ಇದು ನನ್ನಿಂದ ಅಸಾಧ್ಯ. ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next