Advertisement

ಹಿಂದುತ್ವವಾದಿಗಳ ಬೆಂಬಲದಿಂದ ಮೋದಿ ಮತ್ತೊಮ್ಮೆ ಪ್ರಧಾನಿ: ಈಶ್ವರಪ್ಪ

08:14 PM Apr 01, 2024 | Shreeram Nayak |

ಸಾಗರ: ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಬೇಕಾದರೆ ಯಾರ್ಯಾರೋ ಹೋಗಿ ಕೈ ಎತ್ತಬಾರದು. ನಮ್ಮಂತಹ ಪ್ರಖರ ಹಿಂದುತ್ವವಾದಿ ಕೈ ಎತ್ತಬೇಕು. ಈ ಹಿನ್ನೆಲೆಯಲ್ಲಿಯೇ ಸ್ಪರ್ಧಿಸಿರುವ ನಾನು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಯಾವ ದೇವರ ಮೇಲೆ ಬೇಕಾದರೂ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಭಾವ್ಯ ಪಕ್ಷೇತರ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ಘೋಷಿಸಿದರು.

Advertisement

ಇಲ್ಲಿನ ಆರ್‌ಪಿ ರಸ್ತೆಯಲ್ಲಿ ಸೋಮವಾರ ತಮ್ಮ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿ, ಅಭಿಮಾನಿಗಳು ನೀಡಿದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಈಗಾಗಲೇ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಸೋಲಿನ ಭಯ ಆವರಿಸಿದೆ. ಆದ್ದರಿಂದಲೇ ನಾನು ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇನ್ನು ಕೆಲವರು ಏ. 12ರ ನಾಮಪತ್ರ ಸಲ್ಲಿಕೆ ನಂತರ ನಿಮ್ಮ ಜೊತೆ ಬರುತ್ತೇವೆ ಎಂದು ಹೇಳಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ಉತ್ತಮ ಸ್ಪಂದನೆ ಸಿಗುತ್ತದೆ. ಹಿಂದುತ್ವ ಪ್ರತಿಪಾದಕರು, ಸಂಘ ಪರಿವಾರದ ಪ್ರಮುಖರು, ಬಿಜೆಪಿ ಪ್ರಮುಖರು ನನ್ನ ಜೊತೆ ನಿಂತಿದ್ದಾರೆ ಎಂದರು.

ಬಿಜೆಪಿ ನನ್ನ ತಾಯಿ ಇದ್ದಂತೆ. ಕೆಲವರು ಕೆಜೆಪಿಗೆ ಹೋಗಿ ಬಂದಿದ್ದಾರೆ. ನಾನು ಎಂತಹ ಸಂಕಷ್ಟ ಸಂದರ್ಭದಲ್ಲೂ ಬಿಜೆಪಿಯನ್ನು ತೊರೆದಿಲ್ಲ. ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಅಭಿವೃದ್ಧಿಯನ್ನು ಯಾವ ರೀತಿ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದೇನೆ. ಈಗ ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರ ಹಾಗೂ ಕಾಂಗ್ರೆಸ್‌ನವರು ಸುಳ್ಳು ಭರವಸೆಯ ಪ್ರಣಾಳಿಕೆಯನ್ನು ಜನರ ಎದುರಿಗೆ ಇರಿಸುತ್ತಿದ್ದಾರೆ. ಆದರೆ ನಾನು ಪ್ರಣಾಳಿಕೆ ಇರಿಸುವುದಿಲ್ಲ. ಬದಲಾಗಿ ಗೆದ್ದು ಬಂದ ನಂತರ ಅಭಿವೃದ್ಧಿ ಹೇಗೆ ಮಾಡಬಹುದು ಎನ್ನುವುದನ್ನು ತೋರಿಸಿ ಕೊಡುತ್ತೇನೆ. ಏ. 12ಕ್ಕೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು, ಕಾರ್ಯಕರ್ತರನ್ನು ಸೇರಿಸಿ ರಾಮಣ್ಣ ಶ್ರೇಷ್ಟಿ ಪಾರ್ಕಿನಿಂದ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸುತ್ತೇವೆ. ನಮ್ಮನ್ನು ಬೆಂಬಲಿಸುವವರು ಎಲ್ಲರೂ ಹಾಜರಿರಬೇಕು ಎಂದು ವಿನಂತಿಸಿದರು.

ಯಡಿಯೂರಪ್ಪ ಅವರಿಗೆ ಮಗ ಎಲ್ಲಿ ಸೋತು ಹೋಗುತ್ತಾನೋ ಎನ್ನುವ ಭಯ ಕಾಡಲು ಪ್ರಾರಂಭಿಸಿದೆ. ಕಳೆದ ಹತ್ತು ವರ್ಷಗಳಿಂದ ನಮ್ಮ ಮನೆಗೆ ಬಾರದೆ ಇರುವವರು ಈಗ ಮನೆಗೆ ಹೋಗಿ ಭೇಟಿ ಮಾಡಿ ಮನವೊಲಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಯಾವ ಮುಖ ಇರಿಸಿಕೊಂಡು ಯಡಿಯೂರಪ್ಪ ನಮ್ಮ ಮನೆಗೆ ಬರುತ್ತಾರೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಇನ್ನೊಂದು ಕಡೆ ಬಿ.ವೈ.ರಾಘವೇಂದ್ರ ಮುಖಂಡರನ್ನು ಭೇಟಿಯಾಗಿ ಈಶ್ವರಪ್ಪ ಅವರನ್ನು ಬೆಂಬಲಿಸಬೇಡಿ ಎಂದು ಹೇಳುತ್ತಿದ್ದಾರೆ. ಪ್ರಮುಖರು ತಕ್ಕ ಉತ್ತರ ಕೊಟ್ಟು ಕಳಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

ಕಾಂತೇಶ್‌, ಪ್ರಕಾಶ್‌ ಕುಂಠೆ, ಎಸ್‌.ವಿ. ಕೃಷ್ಣಮೂರ್ತಿ, ರಜನೀಶ್‌ ಹಕ್ರೆ, ಸತೀಶ್‌ ಗೌಡ, ಎಸ್‌.ಎಲ್‌. ಮಂಜುನಾಥ್‌, ಸವಿತಾ, ಸತೀಶ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next