ಬೀದರ: ಭಾಲ್ಕಿ ಕ್ಷೇತ್ರದ ಮಾಜಿ ಶಾಸಕ ಡಾ| ವಿಜಯಕುಮಾರ ಖಂಡ್ರೆ (60) ಸೋಮವಾರ ಹೈದರಾಬಾದ್‌ನ ಸನ್‌ಶೈನ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಿಜಯಕುಮಾರ ಖಂಡ್ರೆ ಅವರು ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಅವರ ಪುತ್ರ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಹಿರಿಯ ಸಹೋದರ.
1989ರಲ್ಲಿ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ಅಷ್ಟೂರೆ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ನಂತರ, 1994ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 1999ರ ಚುನಾವಣೆಯಲ್ಲಿ ಸಹೋದರ ಸಂಬಂಧಿ, ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ವಿರುದ್ಧ ಸೋಲು ಅನುಭವಿಸಿದ್ದರು.
ನಂತರದ ದಿನಗಳಲ್ಲಿ ರಾಜಕೀಯದಿಂದ ದೂರ ಉಳಿದಿದ್ದರು. ಮೃತರ ಅಂತ್ಯಕ್ರಿಯೆ ಮಂಗಳವಾರ ಸಂಜೆ 4 ಗಂಟೆಗೆ ಭಾಲ್ಕಿ ತಾಲೂಕಿನ ಚಿಕ್ಕಲಚಂದಾ ರಸ್ತೆಯಲ್ಲಿರುವ ತೋಟದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ತಿಳಿಸಿದ್ದಾರೆ.
ವಿಜಯಕುಮಾರ ಖಂಡ್ರೆ ಅವರು ನೇರ ನಡೆ-ನುಡಿಯ ವ್ಯಕ್ತಿತ್ವ ಹೊಂದಿದ್ದರು. ಧಿಧೀಮಂತ ನಾಯಕರಾಗಿ ಈ ಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಭಾಲ್ಕಿ ಕ್ಷೇತ್ರದ ಗಣ್ಯರು ಸ್ಮರಿಸಿದ್ದಾರೆ.