ಬೀದರ: ವಿಧಾನ ಪರಿಷತ್‌ನಲ್ಲಿ ಪ್ರಜಾಪ್ರಭುತ್ವ ಉಳಿಸಬೇಕಿದೆ. ರೈತರ, ಬಡವರ ಹಿತ ಕಾಪಾಡಲು ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಜನ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಈಶ್ವರ ಖಂಡ್ರೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಸಮಸ್ಯೆ, ಬೇಡಿಕೆ ಬಗೆಹರಿಸುವಲ್ಲಿ ಶ್ರಮಿಸಿದ ಎಂಎಲ್‌ಸಿ ಶರಣಪ್ಪ ಮಟ್ಟೂರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ 6ನೇ ವೇತನ ಅನುಷ್ಠಾನ, ಶಿಕ್ಷಕರಿಗೆ ಶೇ. 30ರಷ್ಟು ವೇತನ ಹೆಚ್ಚಳ, ಮುಂಬಡ್ತಿ ಮತ್ತು ವರ್ಗಾವಣೆ ಸರಳೀಕರಣಕ್ಕೆ ಪ್ರಯತ್ನಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಹಿಂದಿನ ಪಿಂಚಣಿ ಯೋಜನೆ ಜಾರಿಗೆ ಹೋರಾಟವನ್ನು ಮುಂದುವರಿಸಿದ್ದಾರೆ. ಪ್ರಜ್ಞಾವಂತ ಮತದಾರರು ಅವರಿಗೆ ಮತ್ತೂಮ್ಮೆ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೆರೆಯಿಂದ ರಾಜ್ಯದ ರೈತರು, ಜನ ತತ್ತರಿಸಿದ್ದು, ಸರ್ಕಾರಈವರೆಗೆ ನಯಾ ಪೈಸೆ ನೀಡಿಲ್ಲ. ಕಂದಾಯ ಸಚಿವರುನಾಮಕಾವಾಸ್ತೆ ಸಮೀಕ್ಷೆ ಮಾಡಿ ಹೋಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಈಗ ಬಸವಕಲ್ಯಾಣ ಮತ್ತು ಅನುಭವ ಮಂಟಪನೆನಪಿಗೆ ಬಂದಿದೆ. ಇದು ಕೇವಲ ಚುನಾವಣೆ ನೆಪ ಮಾತ್ರ. ಜನರಿಗೆ ದಾರಿ ತಪ್ಪಿಸಲು ಬರುತ್ತಿದ್ದಾರೆ. ಬಿಜೆಪಿ ಎಷ್ಟೇ ನಾಟಕ ಮಾಡಿದರೂ ಉಪ ಚುನಾವಣೆ ಮತ್ತು ಎಂಎಲ್‌ಸಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಖಂಡ್ರೆ ವಿಶ್ವಾಸವ್ಯಕ್ತಪಡಿಸಿದರು. ಶಾಸಕರಾದ ರಹೀಮ್ ಖಾನ್, ಅರವಿಂದ ಅರಳಿ, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಉಪಾಧ್ಯಕ್ಷ ಲಕ್ಷ್ಮಣ ಬುಳ್ಳಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಇದ್ದರು.
ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಲಿ : ಈ ಭಾಗಕ್ಕೆ ಹೆಚ್ಚಿನ ಅನುದಾನ, ಯೋಜನೆಗಳನ್ನು ನೀಡಿದರೆ ತಾನಾಗಿಯೇ ಕಲ್ಯಾಣ ಕರ್ನಾಟಕ ಆಗುತ್ತದೆ. ಕೇವಲ ಹೆಸರು ನಾಮಕರಣ ಮಾಡುವುದರಿಂದ ಅಭಿವೃದ್ಧಿ ಆಗಲ್ಲ. ಉಸ್ತುವಾರಿ ಸಚಿವರು ಚುಳಕಿನಾಲಾ ಜಲಾಶಯದಲ್ಲಿ ಬಾಗಿನ ಅರ್ಪಿಸುವುದನ್ನು ಬಿಟ್ಟು ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಲಿ. ವಕೀಲ ವೃತ್ತಿ ಬಿಟ್ಟು ಶಿಕ್ಷಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ್ ಪರ ವ್ಯಾಪಕ ಬೆಂಬಲ ಸಿಗುತ್ತಿದೆ.
-ರಾಜಶೇಖರ ಪಾಟೀಲ, ಶಾಸಕ, ಹುಮನಾಬಾದ್