ಬೀದರ: ಬಹಿರಂಗ ಚರ್ಚೆಗೆ ಒಪ್ಪಿಕೊಂಡು, ಈಗ ಕುಂಟು ನೆಪ ಹೇಳುತ್ತಿರುವ ಸಂಸದ ಭಗವಂತ ಖೂಬಾ ಅವರ ಹೇಳಿಕೆಗೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಈಗಲೂ ಸಮಯ ಮೀರಿಲ್ಲ. ಬಹಿರಂಗ ಚರ್ಚೆಗೆ ಸಿದ್ಧ ಬನ್ನಿ, ಚರ್ಚಿಸೋಣ. ರಣ ಹೇಡಿಯಂತೆ ಹೋಗಬೇಡಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ಈ ಕುರಿತು ಖಂಡ್ರೆ ಅವರಿಗೆ ಪತ್ರ ಬರೆದಿರುವ ಅವರು, ಗಣೇಶ ಮೈದಾನದಲ್ಲಿ ವ್ಯಕ್ತಿಗತ ಅಂತರದೊಂದಿಗೆ ಚರ್ಚಿಸೋಣ ಎಂದು ಹೇಳಿದೆ. ಮೊದಲಿಗೆ ಬೇಷರತ್ತಾಗಿ ಚರ್ಚೆಗೆ ಒಪ್ಪಿ, ಈಗ ಸಮಿತಿ ಮಾಡೋಣ, ಶಾಸಕರು-ಗಣ್ಯರನ್ನು ಆಹ್ವಾನಿಸೋಣ ಎಂದು ಚರ್ಚೆಯ ಸ್ವರೂಪ ಬದಲಾಯಿಸಲು ಪ್ರಯತ್ನ ಮಾಡಿದ್ದೇ ಬಹಿರಂಗ ಚರ್ಚೆಯಿಂದ ಹೇಡಿಯಂತೆ ಪಲಾಯನ ಮಾಡುತ್ತಿರುವಿರಿ ಎಂಬುದು ಜನಾಭಿಪ್ರಾಯ ಆಗಿದೆ ಎಂದು ಹೇಳಿದ್ದಾರೆ.
ಇನ್ನು ಚರ್ಚೆಗೆ ರಂಗಮಂದಿರವೇ ಏಕೆ ಬೇಕು. ಗಣೇಶ ಮೈದಾನ ಯಾಕಾಗಬಾರದು. ಜಟ್ಟಿಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದನಂತೆ ಹಾಗೆ, ನೀವು ಈಗ ಬಹಿರಂಗ ಚರ್ಚೆಯಿಂದ ಪಲಾಯನ ಮಾಡಲು ಈ ಕುಂಟು ನೆಪ ತೆಗೆದಿದ್ದೀರಿಯೇ ಹೊರತು ನಾನು ಪಲಾಯನ ಮಾಡಿಲ್ಲ. ಬಹಿರಂಗ ಚರ್ಚೆಗೆ ನಿಮ್ಮ ರಾಜ್ಯಾಧ್ಯಕ್ಷರಿಗೆ ಪಂಥಾಹ್ವಾನ ನೀಡಿದ್ದೇ ನಾನು, ನಾನು ಪಲಾಯನ ಮಾಡಲು ಹೇಗೆ ಸಾಧ್ಯ. ನಾನು ಈಗಲೂ ಬಹಿರಂಗ ಚರ್ಚೆಗೆ ಸಿದ್ಧ ಎಂದಿದ್ದಾರೆ.
ಸಮಯದ ಮೌಲ್ಯದ ಅರಿವು ನನಗಿದೆ ಎಂದು ಬಹಿರಂಗ ಚರ್ಚೆಯಿಂದ ವಿಮುಖರಾಗಿರುವ ನೀವು, ನನಗೆ ಕೈ ಸ್ವಚ್ಛವಾಗಿರಬೇಕು ಎಂದು ಉಪದೇಶ ಮಾಡಲು ಹೊರಟಿದ್ದೀರಿ. ನೀವು ಪದೇ ಪದೆ ನಿರಾಧಾರ ಆರೋಪ ಮಾಡಿ ನನ್ನ ವಿರುದ್ಧ ಜನಾಭಿಪ್ರಾಯ ಬದಲಾಯಿಸಲು ಸಮಯ ವ್ಯರ್ಥ ಮಾಡುತ್ತಿರುವುದರಿಂದಲೇ ಬಹಿರಂಗ ಚರ್ಚೆಗೆ ಕರೆದಿದ್ದು. ಇನ್ನಾದರೂ ಸಮಯದ ಮೌಲ್ಯ ತಿಳಿದು ಇಂಥ ಮಿಥ್ಯಾರೋಪ ಮಾಡುವುದನ್ನು ಬಿಟ್ಟು ಅಂತ್ಯೋದಯದ ಸಾಕಾರಕ್ಕೆ ಶ್ರಮಿಸಿ, ಬಡ ವಸತಿ ಫಲಾನುಭವಿಗಳಿಗೆ ಕೇವಲ ಬೀದರನಲ್ಲಿ ಮಾತ್ರವೇ ಅಲ್ಲ ರಾಜ್ಯದಾದ್ಯಂತ ಕಂತು ಬಾರದೆ ಸಂಕಷ್ಟ ಪಡುತ್ತಿರುವ ಬಡವರ ಕೈ ಹಿಡಿಯಿರಿ ಎಂದು ಹೇಳಿದ್ದಾರೆ.