ಮೈಸೂರು: ಅಧಿಕಾರ ಹಂಚಿಕೆ ಪ್ರಶ್ನೆ ಈಗ ಅಪ್ರಸ್ತುತ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು. ಶಾಸಕ ಆರ್ ವಿ ದೇಶಪಾಂಡೆ ಅವರು ಖಾಸಗಿ ವಾಹಿನಿಯಲ್ಲಿ ನೀಡಿರುವ ಅಧಿಕಾರ ಹಂಚಿಕೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು.
ಮೈಸೂರಿನ ಸುತ್ತೂರು ಮಠದಲ್ಲಿ ಮಾತನಾಡಿದ ಅವರು, “ಈ ಪ್ರಶ್ನೆ ಅಪ್ರಸ್ತುತ. ಕಾಂಗ್ರೆಸ್ ಸರ್ಕಾರ ಬಡವರಿಗೆ ಏನು ಮಾಡ್ತಾ ಇದೆ ಇದರ ಬಗ್ಗೆ ಚರ್ಚೆ ಮಾಡಿ. ನಮ್ಮ ಸರ್ಕಾರ ಭದ್ರವಾಗಿದೆ, ಉತ್ತಮ ಮತ್ತು ಒಳ್ಳೆಯ ಆಡಳಿತ ನಡೆಸುತ್ತಿದೆ, ಕೊಟ್ಟ ಭರವಸೆ ಈಡೇರಿಸುತ್ತಿದ್ದೇವೆ. ಎಲ್ಲ ಯೋಜನೆಗಳು ಮತ್ತು ಗ್ಯಾರಂಟಿ ಅನುಷ್ಟಾನಕ್ಕೆ ಬರ್ತಾ ಇದೆ, ಈಗಾಗಲೇ 3 ಗ್ಯಾರೆಂಟಿ ಕಾರ್ಯಗತವಾಗಿದೆ ಎಂದರು.
ಶಕ್ತಿ ಯೋಜನೆ ಬಂದಿದೆ, ದಿನ ನಿತ್ಯ 50 ಲಕ್ಷ ಮಹಿಳೆಯರು ಅದನ್ನು ಉಪಯೋಗಿಸುತ್ತಿದ್ದಾರೆ. ನಾವು 52 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟು ನಾವು ಕೋಟಂತಹ ಗ್ಯಾರಂಟಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದು ಹೇಳಿದರು.
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಮಂತ್ರಿ ಆದ ನಂತರ ಮೊದಲನೇ ಬಾರಿ ಭೇಟಿ ನೀಡಿದ್ದೇನೆ. ಶ್ರೀ ಸುತ್ತೂರು ದೇಶಿ ಕೇಂದ್ರ ಸ್ವಾಮಿಗಳ ಆಶೀರ್ವಾದವನ್ನು ಸಹ ನಾನಿವತ್ತು ಪಡೆದಿದ್ದೇನೆ. ಮೈಸೂರು ಮತ್ತು ಚಾಮರಾಜನಗರದಲ್ಲಿ ಸಾಕಷ್ಟು ಅರಣ್ಯ ಸಂಪತ್ತನ್ನ ನಾವು ಹೊಂದಿದ್ದೇವೆ. ಹುಲಿ ಸಂರಕ್ಷಣಾ ಘಟಕವನ್ನು ಸಹ ನಾವು ಹೊಂದಿದ್ದೇವೆ. ಪರಿಸರ ಸಂರಕ್ಷಣೆ ಪ್ರಾಣಿ ಸಂರಕ್ಷಣೆ ಪಶುಗಳ ಸಂರಕ್ಷಣೆ ವಿಶೇಷವಾಗಿ ಪ್ರಾಣಿ ಮತ್ತು ಮಾನವ ಸಂಘರ್ಷಗಳನ್ನು ತಡೆಗಟ್ಟುವುದು ಮುಖ್ಯ ಕರ್ತವ್ಯವಾಗಿದೆ. ಸುಶೀಲಾ ಎಂಬ ಬಾಲಕಿಯ ಮೇಲೆ ಆದಂತ ಚಿರತೆ ದಾಳಿಯ ವಿಚಾರ ಕೇಳಿ ಬೇಸರವಾಗಿದೆ ಮತ್ತು ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಸರ್ಕಾರದ ವತಿಯಿಂದ 15 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕೆಂದು ತಿಳಿಸಿದ್ದೇನೆ. ತಿಂಗಳಿಗೆ 4,000 ಮಾಸಾಶನ ಬರುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟು ಜಾರಿಗೊಳಿಸಲು ಪ್ರಯತ್ನ ಪಡುತ್ತೇನೆ ಎಂದರು.
ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತೆ ಎಂಬಂತೆ ಪ್ಲಾಸ್ಟಿಕ್ ಬಳಕೆಗೂ ಪರಿಹಾರ ಇದೆ. ಪ್ಲಾಸ್ಟಿಕನ್ನು ಹೆಚ್ಚು ಬಳಕೆ ಮಾಡುವುದರ ಬದಲು ಪ್ಲಾಸ್ಟಿಕ್ ಚೀಲದ ಬದಲಾಗಿ ಬಟ್ಟೆ ಚೀಲವನ್ನು ಉಪಯೋಗಿಸುವುದು ಉತ್ತಮ. ಬಟ್ಟೆ ಚೀಲಗಳ ಬಳಕೆಗೆ ಮತ್ತು ಇದರ ಉತ್ಪಾದನೆಗೆ ಸರ್ಕಾರ ಅನುದಾನವನ್ನು ನೀಡಿದರೆ ಇದೆಲ್ಲದಕ್ಕೂ ಸಹ ಪರಿಹಾರ ಸಿಗುತ್ತದೆ. ಬೀದರ್, ಕಲ್ಬುರ್ಗಿ, ಮೈಸೂರು. ಧರ್ಮಸ್ಥಳ ಮತ್ತೊಂದು ಯಾವುದಾದರೂ ಪ್ರಮುಖ ನಗರವನ್ನು ಆಯ್ಕೆ ಮಾಡಿಕೊಂಡು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವ ಯೋಚನೆ ನಮಗಿದೆ ಎಂದರು.
ಕಾಡಿನ ಪ್ರಾಣಿಗಳು ನಾಡಿಗೆ ಬರುವ ವಿಚಾರವಾಗಿ ಮಾತನಾಡಿದ ಅವರು, ಅನೆ ತುಳಿತಕ್ಕೆ ಸಾವು ಆಗಿರುವ ವಿಚಾರ ಕುರಿತು ಕರ್ಮ ಕೈಗೊಂಡಿದ್ದೇವೆ. ಆನೆ ಚಲಿಸುತ್ತವೇ ಇರುತ್ತದೆ ಅದನ್ನು ನಾವು ತಡೆಯಲು ಆಗಲ್ಲ, ಇಲ್ಲವೆಂದರೆ ಅದಕ್ಕೆ ಉಳಿಗಾಲ ಇಲ್ಲ. ರಾಜ್ಯದಲ್ಲಿ 640 ಕಿಮೀ ರೈಲ್ವೆ ಬ್ಯಾರಿಕೇಡ್ ಮಾಡಬೇಕು ಎನ್ನುವ ಪ್ರಸ್ತಾವನೆ ಇದೆ, ಈಗಾಗಲೇ 312.5 ಕಿಮೀ ರೈಲ್ವೆ ಬ್ಯಾರಿಕೇಡ್ ಮಾಡಿದ್ದೇವೆ, ಇನ್ನು 330 ಕಿಮೀ ಬ್ಯಾರಿಕೆಡ್ ಇಡಬೇಕು. ಈಗಾಗಲೇ ಸೋಲಾರ್ ವ್ಯವಸ್ಥೆ, ಕಂದಕಗಳ ವ್ಯವಸ್ಥೆ ಮಾಡಲಾಗಿದೆ. 1 ಕಿಮೀ ರೈಲ್ವೆ ಬ್ಯಾರಿಕೇಡ್ ಮಾಡೋದಕ್ಕೆ 1.5 ಕೋಟಿ ರೂಪಾಯಿ ಬೇಕಾಗುತ್ತದೆ, ಈ ಮಟ್ಟದ ಅನುದಾನ ಒಂದೇ ಬಾರಿಗೆ ಸಿಗುವುದಿಲ್ಲ. ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಈಶ್ವರ್ ಖಂಡ್ರೆ ಹೇಳಿದರು.