Advertisement

Bidar; ಪ್ರಕೃತಿ, ಪರಿಸರ ಸಂರಕ್ಷಣೆಯೇ ಸಪ್ತಾಹದ ಉದ್ದೇಶ: ಈಶ್ವರ ಖಂಡ್ರೆ

12:54 PM Oct 03, 2023 | Team Udayavani |

ಬೀದರ್: ಪ್ರಕೃತಿ ಸಮತೋಲನದಲ್ಲಿ ವನ್ಯಜೀವಿಗಳ ಪಾತ್ರ ಮಹತ್ವದ್ದಾಗಿದ್ದು, ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದೇ ವನ್ಯಜೀವಿ ಸಪ್ತಾಹದ ಉದ್ದೇಶವಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Advertisement

ಬೀದರ್ ನಲ್ಲಿಂದು ಪೌರಾಡಳಿತ ಸಚಿವ ರಹೀಂ ಖಾನ್, ವಿಧಾನಪರಿಷತ್ ಸದಸ್ಯ ಅರವಿಂದ ಅರಳಿ ಅವರೊಂದಿಗೆ ವನ್ಯ ಜೀವಿ ಸಂರಕ್ಷಣೆಗಾಗಿ ನಡಿಗೆ ಕಾರ್ಯಕ್ರಮದಲ್ಲಿ ಭಾಗಿದ ಈಶ್ವರ ಖಂಡ್ರೆ, ಈ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಸಂಕುಲಕ್ಕೂ ಬದುಕುವ ಹಕ್ಕಿದೆ. ಹಲವು ವನ್ಯಜೀವಿಗಳ ಸಂತತಿಯೇ ನಾಮವಶೇಷವಾಗಿದ್ದು, ಕೆಲವು ಅಳಿವಿನ ಅಂಚಿನಲ್ಲಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ವಿಶೇಷವಾಗಿ ಮಕ್ಕಳಲ್ಲಿ ವನ್ಯಜೀವಿಗಳ ಮತ್ತು ಅರಣ್ಯ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಅ.2ರಿಂದ ಅ.8ರವರೆಗೆ  ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅರಣ್ಯ ವಲಯ ಹೆಚ್ಚಳ: ತಾವು ಸಚಿವರಾದ ತರುವಾಯ ಸುಮಾರು 4 ಸಾವಿರ ಎಕರೆ ಭೂಮಿಯನ್ನು ಅರಣ್ಯ ಎಂದು ಘೋಷಿಸಲು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ 2ಸಾವಿರಕ್ಕೂ ಹೆಚ್ಚು ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗಿದೆ ಎಂದು ವಿವರಿಸಿದರು.

ಬೀದರ್ ಜಿಲ್ಲೆಯಲ್ಲಿ ಕೃಷ್ಣಮೃಗಗಳ ಸಂಖ್ಯೆ ಹೆಚ್ಚಳವಾಗಿದ್ದು, ರೈತರ ಜಮೀನಿಗೆ  ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕೃಷ್ಣಮೃಗ ಸಂರಕ್ಷಿತ ಪ್ರದೇಶ ನಿರ್ಮಾಣ ಮಾಡಲು ಬಜೆಟ್ ನಲ್ಲಿಯೇ ಘೋಷಣೆ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವುದಾಗಿ ತಿಳಿಸಿದರು.

10 ಲಕ್ಷ ಸಸಿ: ಜಿಲ್ಲೆಯಲ್ಲಿ ಈವರ್ಷ ಜುಲೈ 1ರಂದು ಚಾಲನೆ ನೀಡಲಾದ ವನಮಹೋತ್ಸವದಿಂದ ಈವರೆಗೆ ಸುಮಾರು 10 ಲಕ್ಷ ಸಸಿಗಳನ್ನು ನೆಡಲಾಗಿದೆ. ಈ ಸಸಿಗಳಲ್ಲಿ ಎಷ್ಟು ಬದುಕಿ ಉಳಿಯುತ್ತವೆ ಎಂಬುದನ್ನು ನಿರ್ಧರಿಸಲು ಜಿಯೋ ಟ್ಯಾಗ್ ಮಾಡಲಾಗಿದ್ದು, ಆಡಿಟ್ ಕೂಡ ಮಾಡಿಸಲಾಗುವುದು. ಮುಂದಿನ 5 ವರ್ಷಗಳೊಳಗೆ ಜಿಲ್ಲೆಯ ಹಸಿರು ಹೊದಿಕೆಯ ವ್ಯಾಪ್ತಿಯನ್ನು ಹೆಚ್ಚಿಸಲು ಶ್ರಮಿಸಲಾಗುವುದು ಎಂದರು.

Advertisement

ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಶೈಲೆಂದ್ರ ಬೆಲ್ದಾಳೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next