ಪುಣೆ, ನ. 1: ಉಡುಪಿ ಶ್ರೀ ಕೃಷ್ಣನ ಪೂಜಾ ಕೈಂಕರ್ಯದ ಉಸ್ತುವಾರಿ ವಹಿಸಲು ಜನವರಿಯಲ್ಲಿ ಪರ್ಯಾಯ ಪೀಠವನ್ನೆರಲಿರುವ ಉಡುಪಿಯ ಅದಮಾರು ಮಠಾಧೀಶರಾದ ಕಿರಿಯ ಪಟ್ಟಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅ.30ರಂದು ಪುಣೆಯ ಕಾತ್ರಜ್ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದರು.
ಪೂಜ್ಯ ತೀರ್ಥರ ಪರ್ಯಾಯ ಪೂರ್ವಭಾವಿ ನಿಮಿತ್ತ ಸಂಚಾರದಲ್ಲಿರುವ ಸ್ವಾಮೀಜಿಯವರು ಮುಂಬಯಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಣೆಗೆ ಆಗಮಿಸಿದ ಅನಂತರ ಇಲ್ಲಿನ ತುಳು ಕನ್ನಡಿಗರ ಧಾರ್ಮಿಕ ಕ್ಷೇತ್ರ ಕಾತ್ರಜ್ ಅಯ್ಯಪ್ಪ ಮಂದಿರದಲ್ಲಿ ಸಾರ್ವಜನಿಕ ಗುರು ವಂದನೆ, ಸಮ್ಮಾನ ಸ್ವೀಕರಿಸಿದರು.
ದೇವಸ್ಥಾನದ ಹರೀಶ ಭಟ್, ವಿಶ್ವಸ್ತ ಮಂಡಳಿಯ ಅಧ್ಯಕ್ಷ ಸುಭಾಷ್ ಶೆಟ್ಟಿ ಮತ್ತು ಪದಾಧಿಕಾರಿಗಳು ಶ್ರೀಪಾದರನ್ನು ಸ್ವಾಗತಿಸಿದರು. ಶ್ರೀಗಳು ದೇವಸ್ಥಾನದ ಆರಾದ್ಯ ದೇವರಿಗೆ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಅಯ್ಯಪ್ಪ ದೇವಸ್ಥಾನದ ಪ್ರಧಾನ ಅರ್ಚಕರಾದ ಹರೀಶ್ ಭಟ್ ಅವರು ಪೂಜ್ಯ ಸ್ವಾಮೀಜಿಯವರ ಪಾದಪೂಜೆ ಗೈದರು. ಈ ಸಂದರ್ಭದಲ್ಲಿ ಪುಣೆಯ ಹಿರಿಯ ಪುರೋಹಿತರಾದ ವೇದಮೂರ್ತಿ ಹರೀಶ್ ಐತಾಳ್ ಉಪಸ್ಥಿತರಿದ್ದರು.
ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘದ ವಿಶ್ವಸ್ತ ಮಂಡಳಿ, ಕಾರ್ಯಕಾರಿ ಸಮಿತಿ ಮತ್ತು ಭಕ್ತರ ಪರವಾಗಿ ಸಾರ್ವಜನಿಕವಾಗಿ ಶ್ರೀಗಳಿಗೆ ಗುರುಕಾಣಿಕೆಯೊಂದಿಗೆ ಪಲಪುಷ್ಪ ಅರ್ಪಿಸಿ ಗುರುವಂದನೆ ಸಲ್ಲಿಸಲಾಯಿತು. ಗುರುವಂದನೆ ಸ್ವೀಕರಿಸಿದ ಶ್ರೀಪಾದರು ಸೇರಿದ ಭಗವದ್ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಮುಂದಿನ ಪರ್ಯಾಯ ಮಹೋತ್ಸವದ ಅನಂತರ ಉಡುಪಿ ಶ್ರೀ ಕ್ರಷ್ಣನ ಪೂಜಾ ಸೇವಾ ಕೈಂಕರ್ಯ ಮಾಡುವ ಅವಕಾಶ ಒದಗಿ ಬಂದಿದೆ.
ಈ ಶುಭ ಸಂದರ್ಭದಲ್ಲಿ ಮುಂದೆ ನಡೆಯಲಿರುವ ಪರ್ಯಾಯ ಮಹೋತ್ಸವದ ಕಾಲದಲ್ಲಿ ಪುಣೆಯ ಭಕ್ತರೆಲ್ಲರೂ ಉಪಸ್ಥಿತರಿರಬೇಕು. ಅಲ್ಲದೆ ಕ್ಷೇತ್ರಕ್ಕೆ ನಿರಂತರವಾಗಿ ತಾವೆಲ್ಲರೂ ಬರುತ್ತಿರಬೇಕು. ಧಾರ್ಮಿಕ ಸೇವಾ ಕಾರ್ಯದಲ್ಲಿ ತಮ್ಮೆಲ್ಲರ ಶ್ರದ್ಧಾ ಭಕ್ತಿಯ ಸೇವೆ ನಿರಂತರವಾಗಿ ಸಲ್ಲುತಿರಲಿ. ನಿಸ್ವಾರ್ಥ ಸೇವೆಯೇ ಭಗವಂತನಿಗೆ ಪ್ರಿಯವಾದುದು. ಈ ಮೂಲಕ ತಮ್ಮೆಲ್ಲರ ಕಷ್ಟ ದುಃಖ ದುಮ್ಮಾನಗಳು ದೂರವಾಗಿ ಸಂತೃಪ್ತ ಸುಖ ಜೀವನ ನಿಮ್ಮದಾಗಲಿ. ಶ್ರೀ ಕೃಷ್ಣ ತಮ್ಮೆಲ್ಲರನ್ನು ರಕ್ಷಿಸಲಿದ್ದಾನೆ ಎಂದು ಆಶೀರ್ವದಿಸಿ ಅಶೀರ್ವಚನ ನೀಡಿದರು. ಶ್ರೀಪಾದರು ಮಂತ್ರಾಕ್ಷತೆ ನೀಡಿ ಹರಸಿದರು.
– ವರದಿ: ಹರೀಶ್ ಮೂಡಬಿದ್ರಿ