Advertisement

ಅಬಕಾರಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ!​​

06:50 AM Dec 03, 2017 | Team Udayavani |

ಬೆಳಗಾವಿ: ಕಾರಿರುಳಿನಲ್ಲೇ ಕಳ್ಳಭಟ್ಟಿ ವ್ಯವಹಾರ ಮಾಡುತ್ತಿದ್ದ ಈತನಿಗೇನು ಗೊತ್ತಿತ್ತು ತನ್ನ ಸಾವು ಅಲ್ಲೇ ಎಲ್ಲೋ ಸಮೀಪದ ಕರಾಳ ಕೂಪದಲ್ಲಿ ಹೊಂಚು ಹಾಕಿ ಕುಳಿತಿತ್ತು ಎಂಬುದು!

Advertisement

ಶನಿವಾರದ ನಸುಕಿನ ಜಾವವೂ ಸೋನಟ್ಟಿ ಗ್ರಾಮದ ಅಡಿವೆಪ್ಪ ಸಿದ್ದಪ್ಪ ಮುಚ್ಚಂಡಿಗೆ ಸಹಜವಾಗಿಯೇ ಇತ್ತು. ಸಾರಾಯಿ ಸಾಗಿಸುವುದು ಈತನಿಗೆ ಪ್ರತಿದಿನದ ಕಾಯಕ. ಆದರೆ ಅಂದು ಪೊಲೀಸರು ತನ್ನ ವ್ಯವಹಾರದ ಮೇಲೆ ಕಣ್ಣಿಟ್ಟು ಬೆನ್ನಟ್ಟಿದಾಗಲೇ ಶನಿ ತನ್ನ ಹೆಗಲೇರಿರುವುದರ ಅರಿವು ಈತನಿಗಾಗಿರಬೇಕು. ಆಗ ಸಮಯ ಹೆಚ್ಚು ಕಡಿಮೆ 3ರಿಂದ 4ರ ಆಸುಪಾಸು. ಆದರೆ ಆತ ಮಾರ್ಗ ಮಧ್ಯೆ ಅವರ ಕೈಗೆ ಸಿಕ್ಕಿಬಿದ್ದಿದ್ದರೇ ಒಳ್ಳೆಯದಿತ್ತೇನೋ.

ಹೊನಗಾ ಬಳಿ ರಾಷ್ಟ್ರೀಯ ಹೆದ್ದಾರಿಯ ಲಕ್ಷ್ಮೀ ದಾಬಾ ದೇವಗಿರಿ ರಸ್ತೆಯಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಡಿವೆಪ್ಪ ಯತ್ನಿಸಿದ್ದಾನೆ. ತನ್ನ ಗೆಳೆಯನೊಡನೆ ಬೈಕ್‌ ಮೇಲೆ ಪಾರಾಗಲು ಪ್ರಯತ್ನಿಸಿದನೋ ಅಥವಾ ಓಡಿ ತಪ್ಪಿಸಿಕೊಳ್ಳಬಹುದು ಎನ್ನುವ ಭಂಡ ಧೈರ್ಯಕ್ಕೆ ಬಿದ್ದನೋ ಗೊತ್ತಿಲ್ಲ. ಬೆಳಗಾವಿ ಜಿಲ್ಲೆಯ ಹಲವೆಡೆ ಇರುವಂತೆ ಇಲ್ಲೂ ಕೂಡ ರಸ್ತೆ ಪಕ್ಕ ಬಾಯ್ದೆರೆದುಕೊಂಡು ಬಾವಿಯೊಂದು ಇತ್ತು. ನೋಡುವಷ್ಟರಲ್ಲಿ ಈತ 30 ಅಡಿ ಆಳದ ಬಾವಿಗೆ ಬಿದ್ದಿದ್ದಾನೆ. ಜೊತೆಯಲ್ಲಿದ್ದ ಶಾನೂರ ರಾಜಕಟ್ಟಿ ಕಾಳ ಕತ್ತಲಲ್ಲೇ ಗೆಳೆಯನನ್ನು ಉಳಿಸುವ ಸರ್ವ ಪ್ರಯತ್ನ ಮಾಡಿ ಕೈಚೆಲ್ಲಿ ಕಡೆಗೆ ಸಮೀಪದಲ್ಲೇ ಇರುವ ತನ್ನೂರಿನ ಮಿತ್ರರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಅಡಿವೆಪ್ಪನನ್ನು ಉಳಿಸಲು ಅವರೆಲ್ಲ ಹರಸಾಹಸಪಟ್ಟರೂ ರಕ್ಷಣೆ ಸಾಧ್ಯವಾಗಿಲ್ಲ.

ನಸುಕಿನಲ್ಲೇ ಬರಸಿಡಿಲಿನಂತೆ ಅಪ್ಪಳಿಸಿದ  ಸಾವಿನ ಸುದ್ದಿಯನ್ನು ಗ್ರಾಮಸ್ಥರಿಗೆ ಅರಗಿಸಿಕೊಳ್ಳಲೇ ಆಗಿಲ್ಲ. “ಅದು ಹೆಂಗ್‌ ಅವಾ ಬಾವಿಗಿ ಬಿದ್ದ ಸಾಯ್ತಾನ..’ ಅನ್ನೋದು ಇವರ ವಾದ. ಪೊಲೀಸರ ಸುತ್ತಲೇ ಅವರಿಗೆ ಸಂಶಯದ ಹುತ್ತ. “ಅವನ್ನ ಗಾಡಿ ಹಾಯಿಸಿಯೇ ಕೊಂದಾರು.. ಆಮ್ಯಾಲ ಬಾವಿ ಒಳಗ ಒಗದು ಹೋಗ್ಯಾರು..’ ಎನ್ನುವುದೇ ಸಂಬಂಧಿಕರ ಬಲವಾದ ನಂಬಿಕೆ. ಶನಿವಾರ 5 ಗಂಟೆಯ ಸುಮಾರಿಗೇ ಅಬಕಾರಿ ಕಚೇರಿ ಮುಂದೆ ಹಾಜರಾದ ಅವರು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. 2 ವಾಹನಕ್ಕೆ ಹಾನಿಯಾಗಿದ್ದಲ್ಲದೇ ಅಬಕಾರಿ ಇಲಾಖೆ ಸಿಬಂದಿಗೆ ಅಲ್ಪಸ್ವಲ್ಪ ಪೆಟ್ಟಾಗಿದೆ.

ಸ್ಥಳಕ್ಕೆ ಕಾಕತಿ ಠಾಣೆ ಇನ್ಸ್‌ಪೆಕ್ಟರ್‌ ರಮೇಶ ಗೋಕಾಕ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತನ ಸಂಬಂಧಿಕರು ಬೆಳಗ್ಗೆ ಬೆಳಗಾವಿಗೆ ಬಂದಾಗ ಸ್ಥಳದಲ್ಲಿ  ಉದ್ವಿಗ್ನ ಪರಿಸ್ಥಿತಿಯಿತ್ತು.  ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರು ಶವಾಗಾರ ಸ್ಥಳದಿಂದ ಅಬಕಾರಿ ಕಚೇರಿಗೆ ನುಗ್ಗಲು ಯತ್ನಿಸಿದರು. ಪೊಲೀಸರು ಇವರನ್ನೆಲ್ಲ ತಡೆಯಲು ಹರಸಾಹಸ ಪಡಬೇಕಾಯಿತು.

Advertisement

ಶನಿವಾರ ನಸುಕಿನಲ್ಲಿ ಕಳ್ಳಭಟ್ಟಿ ಸಾರಾಯಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉತ್ತರ ವಲಯ ಸಿಬಂದಿ ದಾಳಿ ನಡೆಸಿದ್ದರು. ದಾಳಿ ನಡೆಸಿದಾಗ ಸಿಬಂದಿಯನ್ನು ನೋಡಿದ ಇಬ್ಬರು ಜೋರಾಗಿ ಬೈಕ್‌ ಓಡಿಸಿದ್ದಾರೆ. ಸ್ಥಳದಲ್ಲಿಯೇ 3 ಟ್ಯೂಬ್‌ ಒಗೆದು ಪರಾರಿಯಾಗಲು ಯತ್ನಿಸಿದ್ದರು. ಈ ಅವಸರದಲ್ಲಿ ಬಾವಿಯಲ್ಲಿ ಬಿದ್ದು ಅಡಿವೆಪ್ಪ ಮುಚ್ಚಂಡಿ ಮೃತಪಟ್ಟಿದ್ದಾನೆ ಎನ್ನುತ್ತಾರೆ ಅಬಕಾರಿ ಪೊಲೀಸರು.

Advertisement

Udayavani is now on Telegram. Click here to join our channel and stay updated with the latest news.

Next