ಹೊಸದಿಲ್ಲಿ: ಭಾರತ-ಚೀನ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ 2020ರಿಂದ ಇರುವಂಥ ಪರಿಸ್ಥಿತಿ ಚೀನದ ಮೇಲೆ ಭಾರತಕ್ಕಿದ್ದ ವಿಶ್ವಾಸ, ಕಾರ್ಯತಂತ್ರ ಪಾಲುದಾರಿಕೆಯ ಬಗೆಗಿನ ನಂಬಿಕೆ ಯನ್ನೇ ನಾಶಗೊಳಿಸಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಚೀನಗೆ ಕಟುಸಂದೇಶ ರವಾನಿಸಿ ದ್ದಾರೆ. ಭಾರತದ ಜತೆಗಿನ ಸ್ನೇಹಸಂಬಂಧಕ್ಕೆ ಕೈಚಾಚಲು ಚೀನ ಪ್ರಯತ್ನಿಸುತ್ತಿರುವ ನಡುವೆಯೇ, ದೋವಲ್ ಅವರ ಈ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ.
ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಸಭೆಯಲ್ಲಿ ಚೀನದ ನೂತನ ವಿದೇಶಾಂಗ ಸಚಿವ ವಾಂಗ್ ಯೀ ಅವರೊಂದಿಗೆ ದೋವಲ್, ಭಾರತ ಮತ್ತು ಚೀನದ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆಸಿದ್ದಾರೆ.
ಈ ವೇಳೆ ಎಲ್‌ಎಸಿಯಲ್ಲಿ ನಡೆಯುತ್ತಿರುವ ಭೂಕಬಳಿಕೆಯ ಪ್ರಯತ್ನಗಳು, ಏಕಸ್ವಾಮ್ಯ ಪ್ರಾತಿನಿಧ್ಯಕ್ಕೆ ಹಾತೊರೆಯುತ್ತಿರುವ ಘಟನೆಗಳು ಉಭಯ ರಾಷ್ಟ್ರಗಳ ಸಂಬಂಧವನ್ನು ದಿನದಿಂದ ದಿನಕ್ಕೆ ಕ್ಷೀಣವಾಗುವಂತೆ ಮಾಡುತ್ತಿದೆ.
ದ್ವಿಪಕ್ಷೀಯ ಸಂಬಂಧಗಳಲ್ಲಿ ಮತ್ತೆ ಸಹಜತೆ ಮರಳಬೇಕಾದರೆ ಗಡಿಪ್ರದೇಶ ಗಳಲ್ಲಿ ಶಾಂತಿ- ನೆಮ್ಮದಿಯನ್ನು ಖಾತರಿಪಡಿಸುವ ಹಾಗೂ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ವಾಗಲೇಬೇಕಾದ ಅಗತ್ಯವಿದೆ ಎಂದು ದೋವಲ್ ತಿಳಿಸಿದ್ದಾರೆ.